ಮತದಾನ ಆರಂಭವಾದಾಗಿನಿಂದಲೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಮುನ್ನಡೆ ಕಾಯ್ದುಕೊಂಡು ಬಂದಿದೆ. ಅದೇ ರೀತಿ ತಮಿಳುನಾಡಿನ ಎರಡೂ ಸ್ಥಾನಗಳಲ್ಲಿ ವಿಜಯ್ ನೇತೃತ್ವದ ಆಡಳಿತಾರೂಢ ಟಿವಿಕೆ ಮುನ್ನಡೆ ಸಾಧಿಸಿದೆ. ಪುದುಚೇರಿಯ ಒಂದು ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಪೂರ್ಣವಾಗಿದ್ದು ಅಲ್ಲಿ ಎನ್ ಆರ್ ಕಾಂಗ್ರೆಸ್ ಗೆಲುವು ಸಾಧಿಸಿದೆ.
ನಂದಿಗ್ರಾಮದಲ್ಲಿ ನಾಲ್ಕನೇ ಸುತ್ತಿನ ಎಣಿಕೆ ಮುಗಿದಾಗ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ 31,506ಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಿದದ್ರು. ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಎರಡನೇ ಸ್ಥಾನದಲ್ಲಿದ್ದರು, ಸಿಪಿಐ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಮುನ್ನಡೆಯಿಂದಾಗಿ ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದರು. ಇನ್ನು ರೆಜಿನಗರದಲ್ಲೂ ಬಿಜೆಪಿಯ ಸಖರೋವ್ ಸರ್ಕಾರ್ 31,724 ಮತಗಳ ಅಂತರದಿಂದ ಮೊದಲ ಸ್ಥಾನದಲ್ಲಿದ್ದಾರೆ. ಎಜೆಕೆಯುಪಿ (AJUP) ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (TMC) ತೀವ್ರ ಹಿನ್ನಡೆ ಅನುಭವಿಸಿವೆ.
ಅಲ್ಲದೇ ನಾಗಾಂವ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇವಶಿಶ್ ಶರ್ಮಾ 50,000ಕ್ಕೂ ಹೆಚ್ಚು ಮತಗಳ ಭಾರೀ ಮುನ್ನಡೆ ಸಾಧಿಸಿ ಜಯದತ್ತ ಹೆಜ್ಜೆ ಇಟ್ಟಿದ್ದಾರೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹಿನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇನ್ನು ತಮಿಳುನಾಡಿನ ಮಧುರಾಂತಕಂ ಮತ್ತು ಧಾರಪುರಂನಲ್ಲಿ ಟಿವಿಕೆ ಅಭ್ಯರ್ಥಿಗಳು ಮುಂದಿದ್ದ ಬಗ್ಗೆ ಮಾಹಿತಿ ಇದೆ. ಮಧುರಾಂತಕಂ ಕ್ಷೇತ್ರದಲ್ಲಿ ಮರಗತಮ್ ಕುಮಾರವೇಲ್ 15,509 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ (11,187 ಮತಗಳು) ಎರಡನೇ ಹಾಗೂ ಎಐಎಡಿಎಂಕೆ (9,691 ಮತಗಳು) ಮೂರನೇ ಸ್ಥಾನದಲ್ಲಿವೆ. ಅದೇ ರೀತಿ ಧಾರಾಪುರಂನಲ್ಲಿ ಆರಂಭಿಕ ಸುತ್ತುಗಳಲ್ಲಿ ತೀವ್ರ ಪೈಪೋಟಿ ಕಂಡ ಈ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮ ಎಐಎಡಿಎಂಕೆ ಅಭ್ಯರ್ಥಿ ಭಾನುಮತಿ ವಿರುದ್ಧ ಮುನ್ನಡೆ ಕಂಡು ಕೊಂಡಿದ್ದಾರೆ.
ಮತ್ತೊಂದು ಕಡೆ ನಂದಿಗ್ರಾಮ ಮತ್ತು ರೆಜಿನಗರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷ ಚುನಾವಣಾ ಅಕ್ರಮಗಳ ಆರೋಪ ಮಾಡಿದೆ. ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭಂಕರ್ ಸರ್ಕಾರ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು ಅನೇಕ ಅಸಲಿ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ. ಚುನಾವಣಾ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಅವರು ಒತ್ತಾಯಿಸಿದ್ದಾರೆ.
