ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ತಡೆಯುವಂತೆ ದರ್ಶನ್ ಪರ ವಕೀಲರು ಈ ಹಿಂದೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಮಯ ಬೇಕಿರುವುದರಿಂದ, ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ದರ್ಶನ್ ಪರ ಸಲ್ಲಿಸಲಾಗಿದ್ದ ಈ ಅರ್ಜಿಯನ್ನು ವಜಾಗೊಳಿಸಿದೆ.
ಸೆ.28ರಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ಸೆಪ್ಟೆಂಬರ್ 28ರಂದು ನ್ಯಾಯಾಲಯ ದಿನಾಂಕ ನಿಗದಿಪಡಿಸಿತ್ತು. ಹೈಕೋರ್ಟ್ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ಪ್ರಶ್ನಿಸಿ ದರ್ಶನ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಇದೀಗ ವಿಚಾರಣಾ ನ್ಯಾಯಾಲಯದಲ್ಲಿಯೂ ಹೇಳಿಕೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ.
ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಕನಿಷ್ಠ 10 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಪ್ರಾಸಿಕ್ಯೂಷನ್ ಇತರ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಬಹುದು. ಆದರೆ ಪ್ರದೋಷ್ ಹೇಳಿಕೆಯನ್ನು ಮಾತ್ರ ಸದ್ಯಕ್ಕೆ ಮುಂದೂಡಬೇಕು ಎಂದು ಮನವಿ ಮಾಡಿದ್ದರು. ಹೈಕೋರ್ಟ್ ಸೂಚಿಸಿರುವ ಏಳು ಸಾಕ್ಷಿಗಳ ಪೈಕಿ ಪ್ರದೋಷ್ ಕೂಡ ಒಬ್ಬರಾಗಿದ್ದು, ಅವರನ್ನು ಏಳನೇ ಸಾಕ್ಷಿಯಾಗಿ ವಿಚಾರಣೆ ನಡೆಸುವಂತೆ ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲರು ಕೋರಿದ್ದರು.
ಪ್ರದೋಷ್ ಹೇಳಿಕೆ ದಾಖಲಿಸಲು ಪ್ರಾಸಿಕ್ಯೂಷನ್ ತುರ್ತು ಕ್ರಮ ಕೈಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸ್ವಲ್ಪ ಸಮಯ ಬೇಕಿರುವುದರಿಂದ, ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕು ಎಂಬುದು ದರ್ಶನ್ ಪರ ವಕೀಲರ ವಾದವಾಗಿತ್ತು.
ದರ್ಶನ್ ಪರ ಅರ್ಜಿಗೆ ಸರ್ಕಾರಿ ಪರ ವಕೀಲ ಸಚಿನ್ ವಿರೋಧ ವ್ಯಕ್ತಪಡಿಸಿದರು. ಸೆಪ್ಟೆಂಬರ್ 24ರಂದೇ ಪ್ರದೋಷ್ಗೆ ಸಮನ್ಸ್ ನೀಡಲಾಗಿತ್ತು. ಹೈಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆದ ಬಳಿಕವೇ ಸಮನ್ಸ್ ಜಾರಿಗೊಳಿಸಲಾಗಿದೆ. ಅರ್ಜಿಯಲ್ಲಿ ಹೊಸ ಮಾಹಿತಿ ಅಥವಾ ಹೊಸ ಅಂಶಗಳು ಇಲ್ಲ ಎಂದು ಸರ್ಕಾರಿ ಪರ ವಕೀಲರು ವಾದಿಸಿದರು.
ಹೀಗಾಗಿ ದರ್ಶನ್ ಪರ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಸರ್ಕಾರಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅಂತಿಮವಾಗಿ, ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮುಂದೂಡುವಂತೆ ದರ್ಶನ್ ಪರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿದೆ.


