ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಜಟಾಪಟಿ ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಕೋರಿದ್ದರು. ಅದರಂತೆ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ಇದೇ ವೇಳೆ ತಂದೆಯ ವರ್ಷದ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಪ್ರದೋಷ್ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ. ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಕನಿಷ್ಠ ಮೂರು ವಾರಗಳ ಕಾಲ ಜಾಮೀನು ನೀಡುವಂತೆ ಪ್ರದೋಷ್ ಪರ ವಕೀಲರು ಮನವಿ ಮಾಡಿದ್ದರು. ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷ ಅವರು ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಪ್ರದೋಷ್ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯ ವಿಧಿಸಿರುವ ಷರತ್ತುಗಳ ಪ್ರಕಾರ ಸಾಕ್ಷ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ ಪೂರ್ಣಗೊಳ್ಳುವವರೆಗೆ ಜೈಲಿನಲ್ಲೇ ಇರಬೇಕು. ಜಾಮೀನು ನೀಡಿದರೆ ನ್ಯಾಯಾಲಯ ವಿಧಿಸಿರುವ ಷರತ್ತುಗಳ ಉದ್ದೇಶವೇ ನಿಷ್ಪ್ರಯೋಜಕವಾಗಲಿದೆ ಎಂದು ವಾದಿಸಿದ್ದರು. ಎರಡೂ ಕಾನೂನು ಬೆಳವಣಿಗೆಗಳು ದರ್ಶನ್ ಪ್ರಕರಣದ ಹಿನ್ನೆಲೆಯಲ್ಲಿ ಗಮನ ಸೆಳೆದಿದ್ದು, ನ್ಯಾಯಾಲಯದ ಮುಂದಿನ ವಿಚಾರಣೆಗಳ ಮೇಲೆ ಕುತೂಹಲ ಮೂಡಿದೆ.


