ಇದರ ಜೊತೆಗೆ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಅವರ ಬದಲಿಗೆ ಎಸಿಪಿ ಶ್ರೀನಿಧಿ ಅವರನ್ನು ನೇಮಿಸಲಾಗಿದೆ. ಹೊಸ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ಇಂದಿನಿಂದಲೇ ತನಿಖೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಮರುತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ, ಪ್ರಕರಣದ ಆರಂಭಿಕ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದೆ. ಅಂದಿನ ಎಎಸ್ಐ ಕಲೈಮಾರ್, ಹೆಡ್‌ಕಾನ್‌ಸ್ಟೇಬಲ್ ಸುಂದರ್ ಶೆಟ್ಟಿ ಹಾಗೂ ಹೆಡ್‌ಕಾನ್‌ಸ್ಟೇಬಲ್ ಸವಿತಾ ಶೆಟ್ಟಿ ಅವರು ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಮಾಹಿತಿ ದಾಖಲಿಸಲು ಅಧಿಕಾರಿಗಳು ಸಣ್ಣ ಕ್ಯಾಮೆರಾ ಹಾಗೂ ಕಾಲರ್ ಮೈಕ್ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಭಾಸ್ಕರ್ ರೈ ಹಾಗೂ ಸಿಐಡಿ ಡಿವೈಎಸ್ಪಿ ರುದ್ರಮುನಿ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನಿನ್ನೆ ರಾತ್ರಿ 9 ಗಂಟೆಯವರೆಗೂ ವಿಚಾರಣೆ ಮುಂದುವರಿದಿತ್ತು ಎಂದು ವರದಿಯಾಗಿದೆ.
ವಿಚಾರಣೆ ವೇಳೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಯಮಾನುಸಾರ ನಿರ್ವಹಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರಲಿಲ್ಲ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಮುಂದಿನ ತನಿಖೆಗೆ ಒಪ್ಪಿಸಿದ್ದಾಗಿ ರುದ್ರಮುನಿ ಹೇಳಿರುವುದಾಗಿ ವರದಿಯಾಗಿದೆ. ಇನ್ನು ಇನ್‌ಸ್ಪೆಕ್ಟರ್ ಭಾಸ್ಕರ್ ರೈ ಕೂಡ ಅಂದಿನ ತನಿಖೆ ಮತ್ತು ಆರೋಪಿ ಸಂತೋಷ್ ರಾವ್ ವಿಚಾರಣೆ ವೇಳೆ ದಾಖಲಿಸಿದ ಹೇಳಿಕೆಗಳ ಕುರಿತು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸೌಜನ್ಯ ಪ್ರಕರಣದ ಮರುತನಿಖೆಯಲ್ಲಿ ಅಂದಿನ ತನಿಖಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಸಂಬಂಧಪಟ್ಟವರ ವಿಚಾರಣೆ ಮುಂದುವರಿದಿದೆ. ಹೊಸ ಎಸ್ಐಟಿ ಮುಖ್ಯಸ್ಥರ ನೇಮಕದ ಬೆನ್ನಲ್ಲೇ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಮೂಡಿದೆ. ಪ್ರಕರಣದ ಸತ್ಯಾಂಶ ಹೊರಬರಬೇಕು ಎಂಬುದು ಸೌಜನ್ಯ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಪ್ರಮುಖ ನಿರೀಕ್ಷೆಯಾಗಿದೆ.


