RSSನೋಂದಣಿ ಬಗ್ಗೆ ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಲೇ ಇದೆ. ಅದರಲ್ಲೂ ಕರ್ನಾಟಕದಲ್ಲಿ ಗೃಹಸಚಿವ ಪ್ರಿಯಾಂಕ್ ಖರ್ಗೆ ಈ ವಿಚಾರದಲ್ಲಿ RSS ನಾಯಕರನ್ನು ಕೆಣಕುತ್ತಲೇ ಇದ್ದಾರೆ. ಈ ನಡುವೆ ಅಭಿಮಾನಿಗಳು ಹಾಗೂ ಹಿತೈಷಿಗಳ ಪಡೆ RSS ಫ್ರೆಂಡ್ಸ್ ಎಂಬ ಹೆಸರಿನಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ಅಮೆರಿಕದಲ್ಲಿ ಸಂಘದ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವುದು ಮತ್ತು ಜಾಗೃತಿ ಮೂಡಿಸುವುದು ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.

ಅಮೆರಿಕದಲ್ಲಿ RSSನ ಪ್ರಚಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಘದ ಹಿತೈಷಿ ಎಂದು ಹೇಳಿಕೊಂಡಿರುವ ಅಂಗಸಂಸ್ಥೆಯೊಂದು US ನ್ಯಾಯಂಗ ಇಲಾಖೆಯಲ್ಲಿ ವಿದೇಶಿ ಎಂಜೆಂಟ್ ವರ್ಗದ ಅಡಿಯಲ್ಲಿ ಆರ್ಎಸ್ಎಸ್ ಫ್ರೆಂಡ್ಸ್ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿಕೊಂಡಿದೆ. 1938ರ ಅಮೆರಿಕಾದ ವಿದೇಶಿ ಪ್ರತಿನಿಧಿಗಳ ನೋಂದಣಿ ಕಾಯಿದೆಯ ಅಡಿಯಲ್ಲಿ, ಆ.27ರಂದು ನೋಂದಣಿ ಮಾಡಿಕೊಳ್ಳಲಾಗಿದೆ. ನೋಂದಣಿ ದಾಖಲೆಯಲ್ಲಿ ಜಾರ್ಜಿಯಾ ವಿಳಾಸವನ್ನು ನೀಡಲಾಗಿದೆ. ಇದರ ಜೊತೆಗೆ ದೆಹಲಿಯ ಕೇಶವ ಕುಂಜ್ನ ಪ್ರಧಾನ ಕಚೇರಿಯಲ್ಲಿರುವ RSSನ ವಿದೇಶಿ ಪ್ರಧಾನ ಸಂಸ್ಥೆಯ ವಿಳಾಸವನ್ನು ಸಹ ಉಲ್ಲೇಖಿಸಿದೆ. ಈ RSS ಫ್ರೆಂಡ್ಸ್ ಸಂಘಟನೆಯ ನಿರ್ದೇಶಕರ ಮಂಡಳಿಯಲ್ಲಿ ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ದೇವಾನಂದ ಗಡ್ಡಮ್ ಎಂಬುವವರ ಹೆಸರನ್ನು ಪಟ್ಟಿಮಾಡಲಾಗಿದೆ.

ಅಮೆರಿಕದ ವಿದೇಶಿ ಏಜೆಂಟ್ಗಳ ನೋಂದಣಿ ಕಾಯ್ದೆಯಡಿ RSS ಫ್ರೆಂಡ್ಸ್ ಸಂಘಟನೆ ಆಗಸ್ಟ್ 27ರಂದು ತನ್ನ ಹೆಸರನ್ನು ನೋಂದಾಯಿಸಿಕೊಂಡಿದೆ. ಈ ನೋಂದಣಿ ಪ್ರಕ್ರಿಯೆಯು, ಆ.29ರಂದು ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ RSS ಸರಸಂಘಚಾಲಕ ಮೋಹನ್ ಭಾಗವತ್ ಅವರ ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ ಕಾರ್ಯಕ್ರಮಕ್ಕಿಂತ 2 ದಿನಗಳ ಮುಂಚಿತವಾಗಿ ನಡೆದಿತ್ತು ಎಂಬುದು ವಿಶೇಷ.

RSS ಭಾರತ ಮೂಲದ ಸ್ವಯಂಸೇವಕ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಂಘಟನೆಯಾಗಿದ್ದು, ಯಾವುದೇ ಕಾನೂನುಬದ್ಧ ನಿಗಮವಾಗಿ ನೋಂದಾಯಿಸಲ್ಪಡದ ವ್ಯಕ್ತಿಗಳ ಗುಂಪಾಗಿದೆ. ಆದರೆ,ಈ ಸಂಘದ ಜತೆಗೆ ಕೇವಲ ಮೌಖಿಕ ಒಪ್ಪಂದವಿದೆಯೇ ಹೊರತು ಯಾವುದೇ ಲಿಖಿತ ಒಪ್ಪಂದವಿಲ್ಲ ಎಂದು RSS ಫ್ರೆಂಡ್ಸ್ ಸಂಘಟನೆ ಸ್ಪಷ್ಟಪಡಿಸಿದೆ.

RSS ಫ್ರೆಂಡ್ಸ್ ನ ಕಾರ್ಯಕಲಾಪಗಳೇನು.?
ಇನ್ನು ಇಲ್ಲಿ RSS ಫ್ರೆಂಡ್ಸ್ ನ ಚಟುವಟಿಕೆಗಳೇನು ಎಂಬುದು ಇಲ್ಲಿ ಪ್ರಶ್ನೆ. ಈ ಸಂಘಟನೆ ಪ್ರಾಥಮಿಕವಾಗಿ ಮಾಹಿತಿ, ಶೈಕ್ಷಣಿಕ, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯಂತಹ ಚಟುವಟಿಕೆಗಳನ್ನು ನಡೆಸಲಿದೆ ಎಂದು ತಿಳಿದು ಬಂದಿದೆ. ಈ ಕುರಿತು RSS ಫ್ರೆಂಡ್ಸ್ ಆಡಳಿತ ದಾಖಲೆಗಳು ಮತ್ತು ಅನ್ವಯವಾಗುವ ಕಾನೂನಿಗೆ ಅನುಗುಣವಾಗಿ ಸಾರ್ವಜನಿಕರು, ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು, ಸಂಶೋಧಕರು, ಶೈಕ್ಷಣಿಕ ಮತ್ತು ನೀತಿ ಸಂಸ್ಥೆಗಳು, ಸಮುದಾಯ ಮುಖಂಡರು, ನಾಗರಿಕ-ಸಮಾಜ ಸಂಸ್ಥೆಗಳು ಮತ್ತು ಸೂಕ್ತವಾದಲ್ಲಿ ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತದೆ ಎಂದು ತಿಳಿಸಿದೆ.