ರಾಜ್ಯದ ಸಾಕಷ್ಟು ಜನರು ನಿತ್ಯ ದೋಡ್ಲ ಹಾಲು ಹಾಗೂ ಆ ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದಾರೆ. ಅಂಥವರಿಗೆ ಇಲ್ಲೊಂದು ಶಾಕಿಂಗ್ ಸುದ್ದಿ ಇದೆ. ದೊಡ್ಲ ಡೈರಿ ಲಿಮಿಟೆಡ್’ಗೆ ಸಂಬಂಧಿಸಿದ ಫುಲ್ ಕ್ರೀಮ್ ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಪತ್ತೆಯಾಗಿದೆ. ಇದರಿಂದ ಈ ಉತ್ಪನ್ನದ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. 

ದೊಡ್ಲ ಡೈರಿ ಲಿಮಿಟೆಡ್ ನ  ಫುಲ್ ಕ್ರೀಮ್ ಹಾಲಿನ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರೀಕ್ಷೆಗೆ ಸಂಗ್ರಹಿಸಿದ್ದರು. ಮೊದಲ ಹಂತದ ಪರೀಕ್ಷೆಯಲ್ಲಿ ಹಾಲಿನಲ್ಲಿನ ಕೊಬ್ಬಿನ ಅಂಶವು ಆಹಾರ ಸುರಕ್ಷತಾ ನಿಯಮಗಳಲ್ಲಿ ನಿಗದಿಪಡಿಸಿರುವ ಮಾನದಂಡಕ್ಕೆ ಹೊಂದಿಕೆಯಾಗಿರಲಿಲ್ಲ. ಇದರಿಂದ ಅದನ್ನು ಕಳಪೆ ಗುಣಮಟ್ಟದ ಉತ್ಪನ್ನ ಎಂದು ಗುರುತಿಸಲಾಗಿತ್ತು. ಆದರೆ ಅದನ್ನು ಪ್ರಶ್ನಿಸಿ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.ಇದರಿಂದ ಬಳಿಕ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು.ಅಲ್ಲಿನ ಪರೀಕ್ಷೆಯಲ್ಲಿ ಹಾಲಿನಲ್ಲಿ ಡಿಟರ್ಜೆಂಟ್ ಅಥವಾ ಕಾಸ್ಟಿಕ್ ಸೋಡಾ ಇರುವುದನ್ನು ದೃಢಪಡಿಸಲಾಗಿದೆ. ಅಲ್ಲದೆ, ಹಾಲಿನಲ್ಲಿನ ಕೊಬ್ಬಿನ ಅಂಶವೂ ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆ ಇರುವುದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಸುರಕ್ಷತೆಯಿಲ್ಲದ ಹಾಗೂ ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಆಹಾರಕ್ಕೆ ಸಂಬಂಧಿಸಿದ ಉಲ್ಲಂಘನೆಗಳು ನಡೆದಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಜೊತೆಗೆ ಉತ್ಪನ್ನದ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ದೊಡ್ಲ ಡೈರಿ ಸೇರಿದಂತೆ ಇತರ ಸಂಬಂಧಿತ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧವೂ ವಿಚಾರಣೆ ಹಾಗೂ ಕಾನೂನು ಕ್ರಮ ಮುಂದುವರಿಸಲು ಅನುಮತಿಸಲಾಗಿದೆ. ದೊಡ್ಲ ಡೈರಿ ಲಿಮಿಟೆಡ್ ಮಾತ್ರವಲ್ಲದೆ, ಪ್ರಿಯಗೋಲ್ಡ್ ಬಿಸ್ಕತ್ ತಯಾರಿಸುವ ಸೂರ್ಯ ಫುಡ್ ಆ್ಯಂಡ್ ಆಗ್ರೋ ಲಿಮಿಟೆಡ್ ವಿರುದ್ಧವೂ ಕ್ರಮಕ್ಕೆ ಮುಂದಾಗಲಾಗಿದೆ.
ಇನ್ನು ನರ್ಪಧಾಮ್ ಫುಡ್ಸ್, ಸನ್ ರಿಡ್ಜಸ್ ಹೆಲ್ತ್ ಕೇರ್ಸ್ ಮತ್ತು ಶಾ ಕಾಂತಿಲಾಲ್ ಜಯಂತಿಲಾಲ್ ಸಂಸ್ಥೆಗಳಿಗೆ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಇದರ ಜೊತೆ ಯುಇಐಆರ್ ಆರ್ಗ್ಯಾನಿಕ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಆರಂಭಿಸಲಾಗಿದೆ ಎಂದು FSSAI ತಿಳಿಸಿದೆ.