ಡಾ.ಸುಧಾ ಯಾದವ್ 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ BSFನ ಡೆಪ್ಯೂಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿ. ಅಂದಿನ ಹರಿಯಾಣ ಬಿಜೆಪಿ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಅವರ ವಿಶೇಷ ವಿನಂತಿಯ ಮೇರೆಗೆ ಸುಧಾ ಯಾದವ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ 1999ರಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಸಂಸದೆಯಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಇನ್ನು ಸುಧಾ ಯಾದವ್ ಐಐಟಿ ರೂರ್ಕಿಯಿಂದ ರಸಾಯನಶಾಸ್ತ್ರದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇನ್ನು 2019 ರಿಂದ 2022 ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ 2015 ರಲ್ಲಿ ಬಿಜೆಪಿ ಓಬಿಸಿ ಮೋರ್ಚಾದ ರಾಷ್ಟ್ರೀಯ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು. ಆಗಸ್ಟ್ 2022 ರಲ್ಲಿ ಇವರನ್ನು ಬಿಜೆಪಿ ಪಕ್ಷದ ಅತ್ಯುನ್ನತ ಮತ್ತು ಶಕ್ತಿಶಾಲಿ ನಿರ್ಧಾರ ಕೈಗೊಳ್ಳುವ ಅಂಗವಾದ 'ಬಿಜೆಪಿ ಸಂಸದೀಯ ಮಂಡಳಿಹಾಗೂ ಕೇಂದ್ರೀಯ ಚುನಾವಣಾ ಸಮಿತಿಗೆ ನೇಮಿಸಲಾಯಿತು. ಸುಷ್ಮಾ ಸ್ವರಾಜ್ ಅವರ ನಿಧನದ ನಂತರ ಈ ಮಂಡಳಿಗೆ ಆಯ್ಕೆಯಾದ ಏಕೈಕ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ.
ಇನ್ನು ಕರ್ನಾಟಕದ ಜೊತೆಗೆ ಕೇರಳ, ತಮಿಳುನಾಡು, ಒಡಿಶಾ, ಉತ್ತರಾಖಂಡ ಮತ್ತು ಸಿಕ್ಕಿಂ ರಾಜ್ಯಗಳಿಗೂ ಹೊಸ ರಾಜ್ಯಪಾಲರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಸಿಕ್ಕಿಂನ ರಾಜ್ಯಪಾಲರಾಗಿರುವ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ನೂತನ ರಾಜ್ಯಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಂತೆಯೇ, ಕೇರಳದ ಹಾಲಿ ರಾಜ್ಯಪಾಲರಾಗಿರುವ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ನೆರೆಯ ತಮಿಳುನಾಡು ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಉಳಿದಂತೆ ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾ ರಾಜ್ಯದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಡಾ.ಧಾಲ್ ಸಿಂಗ್ ಬಿಸೆನ್ ಅವರಿಗೆ ಉತ್ತರಾಖಂಡದ ರಾಜ್ಯಪಾಲರ ಹೊಣೆ ವಹಿಸಲಾಗಿದೆ. ಹಿರಿಯ ನಾಯಕ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿಯವರು ನೇಮಿಸಿ ಆದೇಶ ಹೊರಡಿಸಿದ್ದಾರೆ. ನೂತನ ರಾಜ್ಯಪಾಲರುಗಳು ತಮ್ಮ ತಮ್ಮ ಕಚೇರಿಗಳಿಗೆ ತೆರಳಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಈ ನೇಮಕಾತಿ ಆದೇಶಗಳು ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.


