ಇವತ್ತು ನವರಾತ್ರಿಯ ಐದನೇ ದಿನ. ಇಂದು ಸ್ಕಂದಮಾತಾ ದೇವಿಯನ್ನು ಪೂಜಿಸುವ ದಿನವಾಗಿದೆ. ಈ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸುವುದರ ಜೊತೆಗೆ ಆಕೆಯ ಮಂತ್ರಗಳನ್ನು ಪಠಿಸುವುದು ಹೆಚ್ಚು ಪರಿಣಾಮಕಾರಿಯಾಗಿ. ಇಂದು ಯಾವ ಮಂತ್ರಗಳನ್ನು ಪಠಣೆ ಮಾಡಬೇಕು.? ತಾಯಿಗೆ ಆಕೆಗೆ ಇಷ್ಟವಾದ ಬಣ್ಣ ಯಾವುದು.? ನೈವೇದ್ಯ ಏನು ಮಾಡ್ಬೇಕು ಅನ್ನೋ ಎಲ್ಲದರ ಬಗ್ಗೆ ಈಗ ತಿಳಿದುಕೊಳ್ಳೋಣ. 
ಈ ದಿನದ ವಿಶೇಷತೆ ಏನು.?
ನವರಾತ್ರಿಯ ಐದನೇ ದಿನದ ವಿಶೇಷ ಎಂದರೆ ಇಂದು ದುರ್ಗಾ ದೇವಿಯ ಐದನೇ ರೂಪವಾದ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತೆ. ಇಲ್ಲಿ ಸ್ಕಂದ ಅಂದ್ರೆ ಕಾರ್ತಿಕೇಯನ ತಾಯಿ. ಆದ್ದರಿಂದ ದುರ್ಗಾ ದೇವಿಯ ಐದನೇ ರೂಪವನ್ನ ಸ್ಕಂದಮಾತಾ ದೇವಿ ಅಂತಾನೇ ಕರೆಯಲಾಗುತ್ತದೆ. ಇದರಿಂದ ನವರಾತ್ರಿ ಹಬ್ಬದ 5ನೇ ದಿನವು ಹೆಚ್ಚು ಮಹತ್ವವನ್ನ ಪಡೆದುಕೊಂಡಿರುವ ದಿನವಾಗಿದೆ. ನವರಾತ್ರಿ ಹಬ್ಬದ ಐದನೇ ದಿನದಂದು ಸ್ಕಂದಮಾತಾಳನ್ನ ಪೂಜಿಸೋದ್ರಿಂದ ವ್ಯಕ್ತಿಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೊಂದುತ್ತಾನೆ ಎನ್ನುವ ನಂಬಿಕೆ.
ಸ್ಕಂದಮಾತೆ ಯಾರು.?
ಈ ತಾಯಿಯ ಹಿನ್ನೆಲೆ ಏನು ಅನ್ನೋದನ್ನೂ ಕೂಡಾ ನಾವೀಗ ತಿಳಿಯೋಣ.. ಪೌರಾಣಿಕ ನಂಬಿಕೆಯ ಪ್ರಕಾರ, ತಾರಕಾಸುರನೆಂಬ ರಾಕ್ಷಸ ತೀವ್ರ ತಪಸ್ಸನ್ನು ಮಾಡಿ ಬ್ರಹ್ಮದೇವನ ಆಶೀರ್ವಾದ ಪಡೆದುಕೊಳ್ಳುತ್ತಾನೆ. ಹಾಗೂ ಬ್ರಹ್ಮದೇವನು ಪ್ರತ್ಯಕ್ಷನಾದಾಗ ಆತನಿಂದ ಅಮರತ್ವದ ವರವನ್ನು ಪಡೆದುಕೊಳ್ಳುತ್ತಾನೆ. ಆದರೂ ಬ್ರಹ್ಮದೇವರು ತಾರಕಾಸುರನನ್ನು ಕುರಿತು ಬ್ರಹ್ಮಾಂಡದಲ್ಲಿ ಸೃಷ್ಟಿಯಾದ ಪ್ರತಿಯೊಂದು ವಸ್ತು, ಜೀವಿಗಳು ಒಂದಲ್ಲ ಒಂದು ನಾಶವಾಗಲೇಬೇಕೆನ್ನುವ ಕಹಿ ಸತ್ಯವನ್ನು ಹೇಳುತ್ತಾನೆ. ಆಗ ತಾರಕಾಸುರನು ಬ್ರಹ್ಮನ ಬಳಿ ನಾನು ಸಾಯುವುದೇ ಆದರೆ ನನಗೆ ಶಿವನ ಮಗನ ಕೈಯಿಂದ ಸಾಯುವ ವರವನ್ನು ನೀಡೆಂದು ಬೇಡಿಕೊಳ್ಳುತ್ತಾನೆ. ಏಕೆಂದರೆ ಶಿವನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಅವನು ಎಂದುಕೊಂಡಿದ್ದನು ಮತ್ತು ಅವನು ಮದುವೆಯಾದರೂ ಅವನಿಗೆ ಮಗು ಜನಿಸುವುದಿಲ್ಲ ಎಂದು ಭಾವಿಸಿದ್ದನು.

ತಾರಕಸುರನ ಅಂತ್ಯ ಹೇಗಾಯಿತು.?
ಇಂಥ ವರವನ್ನ ಪಡೆದ ಮೇಲೆ, ತಾರಕಾಸುರನು ಜನರನ್ನು ಹಿಂಸಿಸಲು ಪ್ರಾರಂಭಿಸಿದ ಮತ್ತು ಜನರು ಶಿವನ ಬಳಿಗೆ ಹೋಗಿ ತಾರಕಾಸುರನನ್ನ ಸಂಹಾರ ಮಾಡುವಂತೆ ಪ್ರಾರ್ಥಿಸಿದರು. ನಂತರ ಶಿವ ಪಾರ್ವತಿಯನ್ನ ವಿವಾಹವಾಗುವ ಮೂಲಕ ಕಾರ್ತಿಕೇಯ ಅನ್ನೋ ಗಂಡು ಮಗುವಿಗೆ ತಂದೆಯಾಗುತ್ತಾನೆ. ಕಾರ್ತಿಕೇಯ ಬೆಳೆದಾಗ, ಅವನು ರಾಕ್ಷಸ ತಾರಕಾಸುರನನ್ನ ಕೊಂದನು. ಈಕೆ ಸ್ಕಂದನ ತಾಯಿಯಾದ್ದರಿಂದ ಕಾರ್ತಿಕೇಯ, ಅವಳನ್ನು ಸ್ಕಂದಮಾತೆ ಎಂದು ಕರೆದನು. ಅಂದಿನಿಂದ ಪ್ರತೀ ನವರಾತ್ರಿಯಲ್ಲೂ ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನ ಪೂಜಿಸಲಾಗುತ್ತೆ ದುರ್ಗಾ ದೇವಿಗೆ ಬಾಳೆಹಣ್ಣನ್ನ ಅರ್ಪಿಸಬೇಕು ಮತ್ತು ಈ ಪ್ರಸಾದವನ್ನು ಬಡವರಿಗೆ ನೀಡ್ಬೇಕು. ಆರತಿಯ ನಂತರ 5 ಹೆಣ್ಣು ಮಕ್ಕಳಿಗೆ ಬಾಳೆಹಣ್ಣಿನ ಪ್ರಸಾದವನ್ನು ವಿತರಿಸಬೇಕು. ಇದರಿಂದ ಸ್ಕಂದಮಾತಾ ದೇವಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಮಕ್ಕಳಿಗೆ ಬರಬಹುದಾದ ಎಲ್ಲಾ ತೊಂದರೆಗಳನ್ನು ನಾಶಪಡಿಸುತ್ತಾಳೆ ಎನ್ನುವ ನಂಬಿಕೆಯಿದೆ. 

ತಾಯಿಗೆ ಇಷ್ಟವಾದ ಬಣ್ಣ ಯಾವುದು.? 
ಇನ್ನು ತಾಯಿ ಸ್ಕಂದಮಾತೆ ಹಳದಿ ಬಣ್ಣದ ವಸ್ತುಗಳನ್ನು ಪ್ರೀತಿಸುತ್ತಾಳೆ. ಆದ್ದರಿಂದ, ಆಕೆಗೆ ಎಲೆಕೋಸು, ಲಡ್ಡು, ಕೇಸರಿ ಖೀರ್ ಅಥವಾ ಯಾವುದೇ ಹಳದಿ ಬಣ್ಣದ ಸಿಹಿಯನ್ನ ಪ್ರಸಾದವಾಗಿ ಅರ್ಪಿಸಬಹುದು. ತಾಯಿ ಸ್ಕಂದಮಾತೆಯ ನೆಚ್ಚಿನ ಹೂವಿನ ಬಗ್ಗೆ ಹೇಳುವುದಾದರೆ ಅದು ಕಮಲದ ಹೂವಾಗಿದೆ. ಈ ದಿನದಂದು, ಸ್ಕಂದ ಮಾತಾ ದೇವಿಯ ಪಾದಗಳಿಗೆ ಕಮಲದ ಹೂವನ್ನು ಕಡ್ಡಾಯವಾಗಿ ಅರ್ಪಿಸಬೇಕು. ಇದರ ಜೊತೆ ಮಕ್ಕಳು ಇಲ್ಲದ ದಂಪತಿ ಸಂತಾನವನ್ನು ಪಡೆಯುವ ಬಯಕೆ ಇರುವಂಥವರು ಈ ಶರನ್ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಬೇಕು. ಶುಭ್ರವಾದ ಬಟ್ಟೆ ಧರಿಸಿ, ಸ್ಕಂದಮಾತೆಗೆ ಬಾಳೆಹಣ್ಣು ಮತ್ತು ಅದರಿಂದ ಮಾಡಿದ ವಸ್ತುಗಳನ್ನು ಅರ್ಪಿಸಬೇಕು. ಇದರಿಂದ ಆ ತಾಯಿ ಸಂತುಷ್ಟಳಾಗುತ್ತಾಳೆ.

 ಈಕೆಯ ಶರೀರ ಬಣ್ಣ ಸಂಪೂರ್ಣವಾಗಿ ಬಿಳುಪಾಗಿದ್ದು, ಕಮಲದ ಹೂವಿನ ಆಸನದ ಮೇಲೆ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕೆ ದೇವಿಯನ್ನ ಪದ್ಮಾಸನಾದೇವಿ ಅಂತಲೂ ಕರೆಯಲಾಗುತ್ತದೆ. ಆಕೆಯ ವಾಹನ ಸಿಂಹವಾಗಿದೆ. ಆರಾಧನೆ ಮಾಡುವಂಥವರಿಗೆ ಈ ದಿನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಸ್ಕಂದಮಾತಾ ಸ್ವರೂಪದಲ್ಲಿ ದೇವಿಯ ಆರಾಧನೆ ಮಾಡಿದಾಗ ಮನಸ್ಸಿನ ಕೋರಿಕೆಗಳು ನೆರವೇರುತ್ತವೆ. ಶಾಂತಿ, ನೆಮ್ಮದಿ ದೊರೆಯುತ್ತದೆ. ತಾಯಿಯ ಕೈಂಕರ್ಯದ ಜತೆಜತೆಗೆ ಬಾಲರೂಪಿಯಾದ ಸ್ಕಂದನ ಆರಾಧನೆ ಸಹ ಮಾಡಿದಂತಾಗುತ್ತದೆ. ಆ ದೇವಿಯ ಆರಾಧಿಸುವವರಲ್ಲಿ ಅಲೌಕಿಕವಾದ ತೇಜಸ್ಸು ಹಾಗೂ ಕಾಂತಿಯೊಂದು ಇರುತ್ತೆ. ಇನ್ನು ತನ್ನ ಭಕ್ತರ ಯೋಗಕ್ಷೇಮವನ್ನು ಆ ತಾಯಿ ನೋಡಿಕೊಳ್ಳುತ್ತಾಳೆ. ಅಲ್ಲದೇ ಸಂತಾನ ಹೀನರಿಗೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ.
ಸ್ಕಂದಮಾತೆಯ ಆರಾಧನೆ ಹೇಗೆ.?
ಈ ತಾಯಿಯನ್ನ ಹೇಗೆ ಪೂಜೆ ಮಾಡಬೇಕು ಎನ್ನುವುದನ್ನೂ ಈಗ ತಿಳಿಸಿ ಕೊಡುತ್ತವೇ. ಮೊದಲು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಪೂಜೆಗಾಗಿ ಶುದ್ಧ ಮತ್ತು ಪವಿತ್ರ ಸ್ಥಳವನ್ನ ಆಯ್ದುಕೊಳ್ಳಿ ಸ್ಕಂದಮಾತೆಯನ್ನು ಮಂತ್ರದೊಂದಿಗೆ ಪೂಜೆಗೆ ಆಹ್ವಾನಿಸಿ. ನೀವು ನವರಾತ್ರಿಯ ಉದ್ದಕ್ಕೂ ಪ್ರತಿದಿನ ಕಲಶ ಸ್ಥಾಪನೆ ಮಾಡುತ್ತಿದ್ದರೆ, ಈ ದಿನವೂ ಪೂಜೆಯ ಭಾಗವಾಗಿ ಕಲಶವನ್ನ ಇಡಿ. ಪಂಚಾಮೃತ ಮತ್ತು ಅಭಿಷೇಕ ಪಂಚಾಮೃತವನ್ನು ತಯಾರಿಸಿ ಸ್ಕಂದಮಾತೆಯ ವಿಗ್ರಹಕ್ಕೆ ಅರ್ಪಿಸಿ. ನೀರು, ಹಾಲು, ಮೊಸರು, ತುಪ್ಪ ಮತ್ತು ಜೇನುತುಪ್ಪದೊಂದಿಗೆ ಅಭಿಷೇಕ ಮಾಡಿ. ಆರತಿ ಬೆಳಗಿ. 
ಯಾವ ಮಂತ್ರ ಪಠಿಸಬೇಕು.? 
ನೀವು ಪಠಣ ಮಾಡಬೇಕಾದ ಮಂತ್ರ ಯಾವುದು ಅಂದ್ರೆ.. ಓಂ ದೇವಿ ಸ್ಕಂದಮಾತಾಯೈ ನಮಃ ಮತ್ತು ಯಾ ದೇವಿ ಸರ್ವಭೂತೇಷು ಮಾಂ ಸ್ಕಂದಮಾತಾ ರೂಪೇಣ ಸಂಸ್ಥಿತಾ, ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಈ ಮಂತ್ರವನ್ನ ಪಠಣ ಮಾಡ್ಬೇಕು. 

ಇನ್ನು ತಾಯಿ ಸ್ಕಂದ ಮಾತೆಯು ಬುಧ ಗ್ರಹದ ಆಡಳಿತವನ್ನ ಒಳಗೊಂಡಿರುತ್ತೆ.. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ಯಾರು ಆರಾಧನೆ ಮಾಡ್ತಾರೋ ಅಂತಹವರಿಗೆ ದೇವಿ ಖ್ಯಾತಿ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ. ತನ್ನ ಭಕ್ತರಿಗಾಗಿ ದೇವಿ ಸಹಾನುಭೂತಿ ತೋರುವಳು. ಕುಂಡಲಿಯಲ್ಲಿ ಬುಧನು ಪ್ರತಿಕೂಲದ ಸ್ಥಾನದಲ್ಲಿದ್ದರೆ ಉಂಟಾಗುವ ಎಲ್ಲಾ ತೊಂದರೆಗಳನ್ನು ನಿವಾರಣೆ ಮಾಡ್ತಾಳೆ.  ನವರಾತ್ರಿಯ ಐದನೇ ದಿನ ಮಾಡಿದ ಮಾತೆಯ ಪೂಜೆಯಿಂದಾಗಿ ಭಕ್ತರ ಹೃದಯವು ಶುದ್ಧವಾಗುವುದು. ಅಲ್ಲದೆ ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುವಳು. ದೇವಿಯ ಆರಾಧನೆಯಿಂದ ಭಕ್ತರು ಪ್ರಖ್ಯಾತಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಅಲ್ಲದೆ ಯಶಸ್ಸಿನ ಹಾದಿಯಲ್ಲಿ ಮುಂದೆ ಸಾಗುವರು.