ಇತ್ತೀಚೆಗೆ ರಾಜ್ಯದ ವಿವಿಧ ಹಾಲು ಒಕ್ಕೂಟಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಹಾಲಿನ ಖರೀದಿ ಹಾಗೂ ಮಾರಾಟ ದರ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು. ಹಾಲಿನ ದರವನ್ನು ಪ್ರತಿ ಲೀಟರ್ಗೆ 8ರಿಂದ 10 ರೂಪಾಯಿ ಹೆಚ್ಚಿಸುವಂತೆ ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದ್ದವು.
ಈ ಹಿನ್ನೆಲೆಯಲ್ಲಿ 16 ಜಿಲ್ಲೆಗಳ ಹಾಲು ಸಹಕಾರ ಸಂಘಗಳ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಆದರೆ ಅಂತಿಮವಾಗಿ ಪ್ರತಿ ಲೀಟರ್ಗೆ ಎಷ್ಟು ದರ ಹೆಚ್ಚಳ ಮಾಡಬೇಕು ಎಂಬುದರ ಕುರಿತು ಶೀಘ್ರದಲ್ಲೇ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ದರ ಪರಿಷ್ಕರಣೆ ಸಂಬಂಧ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಹಾಲಿನ ದರ ಹೆಚ್ಚಳಕ್ಕೆ ಕಾರಣವೇನು?
ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಮಳೆ ಕೊರತೆಯಿಂದ ಪಶು ಆಹಾರದ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಹುಲ್ಲಿನ ಕೊರತೆ ಉಂಟಾಗಿರುವುದರ ಜೊತೆಗೆ ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಮೆಕ್ಕೆಜೋಳ, ಇಂಡಿ-ಬೂಸಾ ಸೇರಿದಂತೆ ಪಶು ಆಹಾರದ ದರದಲ್ಲಿ ಸುಮಾರು ಶೇ.25ರಷ್ಟು ಏರಿಕೆಯಾಗಿದೆ ಎಂದು ಹಾಲು ಒಕ್ಕೂಟಗಳು ತಿಳಿಸಿವೆ.
ಇದರ ಜತೆಗೆ ರಾಸುಗಳಿಗೆ ಬಳಸುವ ನೆಲಹಾಸು, ಸಾಗಣೆ ವೆಚ್ಚ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಹಾಲು ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನೀಡುವ ಹಾಲಿನ ಖರೀದಿ ದರವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಒಕ್ಕೂಟಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.
ದರ ಏರಿಕೆಯಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಂಬಲ ದೊರೆಯುವ ನಿರೀಕ್ಷೆಯಿದ್ದರೂ, ಅಂತಿಮವಾಗಿ ಅದರ ಪರಿಣಾಮ ಗ್ರಾಹಕರಿಗೆ ಎಷ್ಟರ ಮಟ್ಟಿಗೆ ಬೀಳಲಿದೆ ಎಂಬುದು ಸರ್ಕಾರದ ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ಸ್ಪಷ್ಟವಾಗಲಿದೆ.


