ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೆಣೆದಿದ್ದಾರೆ ಎನ್ನಲಾದ ಸ್ಟಿಂಗ್ ಆಪರೇಷನ್ ಬಲೆ ಈಗ ಮತ್ತೊಂದು ಆಯಾಮದತ್ತ ಹೊರಳಿದೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸರು ತಮ್ಮ ಕೆಲಸವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಸಿದ್ದರಾಮಯ್ಯ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂರು ಪ್ರಮುಖ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋ ಅಪ್ಲೋಡ್ ಮಾಡಿರುವ ಐಡಿಗಳ ಕುರಿತು ಮಾಹಿತಿ ಕೋರಿ ಯೂಟ್ಯೂಬ್ಗೆ ಅಧಿಕೃತ ಇ-ಮೇಲ್ ಪತ್ರ ಕಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಯೂಟ್ಯೂಬ್ನಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ಯಾವ ಯಾವ ಐಡಿಗಳು ಮತ್ತು ಖಾತೆಗಳಿಂದ ಅಪ್ಲೋಡ್ ಮಾಡಲಾಗಿದೆ ಎಂಬ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಅದರಲ್ಲಿ ಕೋರಲಾಗಿದೆ. ಇನ್ನು ಸಿದ್ದರಾಮಯ್ಯ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿರುವ ನಿರ್ದಿಷ್ಟ ಐಡಿಗಳ ಸಮೇತ ಬೆಂಗಳೂರು ನಗರ ಪೊಲೀಸರ ಅಧಿಕೃತ ಇ-ಮೇಲ್ ಐಡಿ ಮೂಲಕ ಯೂಟ್ಯೂಬ್ ಆಡಳಿತ ಮಂಡಳಿಗೂ ಇದೇ ವೇಳೆ ಪತ್ರ ಕಳುಹಿಸಲಾಗಿದೆ.
ಸೈಬರ್ ಕ್ರೈಂ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮೂರು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದು ಈ ಸ್ಟಿಂಗ್ ಆಪರೇಷನ್ ನಿಜಕ್ಕೂ ನಡೆದಿದೆಯಾ? ಅಥವಾ ಇದು ಸಂಪೂರ್ಣವಾಗಿ ಸೃಷ್ಟಿಸಲ್ಪಟ್ಟ ನಕಲಿ ವಿಡಿಯೋವೇ ಎಂಬುದರ ಪರಿಶೀಲನೆ ಮಾಡುತ್ತಿದ್ದಾರೆ. ಎರಡನೇಯದ್ದಾಗಿ ವಿಡಿಯೋ ವೈರಲ್ ಮಾಡಿದವರು ಯಾರು? ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಹಾಗೂ ಇದರ ಮೂಲ ಸೃಷ್ಟಿಕರ್ತರು ಯಾರು ಎಂಬುದರ ಪತ್ತೆ ಮಾಡುವತ್ತ ತನಿಖೆ ಮಾಡುತ್ತಿದ್ದಾರೆ. ಜೊತೆಗೆ ಮೂರನೇಯದ್ದು ಯಾವುದೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋ ನಿಜವಾಗಲೂ ಒರಿಜಿನಲ್ ಹೌದಾ ಅಥವಾ ಎಡಿಟ್ ಮಾಡಲಾಗಿದೆಯೇ ಎಂಬ ತಾಂತ್ರಿಕ ಪರಿಶೀಲನೆ ಮಾಡುತ್ತಿದ್ದಾರೆ.
ಯೂಟ್ಟೂಬ್ ನಿಂದ ಅಧಿಕೃತ ಮಾಹಿತಿ ಹಾಗೂ ಉತ್ತರ ಬಂದ ಬಳಿಕ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಮತ್ತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ.

