ನರೇಂದ್ರ ಮೋದಿ ಸರ್ಕಾರದ ಹಲವು ಮಹತ್ವದ ರಾಜಕೀಯ-ಆಡಳಿತಾತ್ಮಕ ಯೋಜನೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಮಾಜಿ ಐಎಎಸ್ ಅಧಿಕಾರಿ ಜ್ಞಾನೇಶ್ ಕುಮಾರ್, ನಿವೃತ್ತಿಯ ಕೆಲವೇ ವಾರಗಳಲ್ಲಿ ಚುನಾವಣಾ ಆಯುಕ್ತರಾದರು. ಒಂದು ವರ್ಷದೊಳಗೆ ಮುಖ್ಯ ಚುನಾವಣಾ ಆಯುಕ್ತರ ಕುರ್ಚಿಗೇರಿದರು. ಈಗ ಅವರ ನೇತೃತ್ವದ ಚುನಾವಣಾ ಆಯೋಗವೇ ಎಸ್ಐಆರ್ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಾದಗಳ ಕೇಂದ್ರವಾಗಿದೆ.


ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಅಂತಿಮ ನಂಬಿಕೆಯ ಸಂಸ್ಥೆಯಾಗಿ ನಿಲ್ಲಬೇಕಾದ ಚುನಾವಣಾ ಆಯೋಗದೊಳಗೇ ಇಬ್ಬರು ಚುನಾವಣಾ ಆಯುಕ್ತರು ಮುಖ್ಯ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಕೈಗೊಳ್ಳಲಾದ ಹಲವು ಕ್ರಮಗಳ ಬಗ್ಗೆ ಲಿಖಿತ ಆಕ್ಷೇಪಣೆ ದಾಖಲಿಸಿದ್ದಾರೆ ಎಂಬ ದಿ ಇಂಡಿಯನ್ ಎಕ್ಸ್ಪ್ರೆಸ್ ತನಿಖೆ, ಜ್ಞಾನೇಶ್ ಕುಮಾರ್ ಅವರ ಅಧಿಕಾರಾವಧಿಯನ್ನು ಮತ್ತೆ ರಾಷ್ಟ್ರೀಯ ಚರ್ಚೆಯ ಕೇಂದ್ರಕ್ಕೆ ತಂದಿದೆ.
ಪ್ರಶ್ನೆ ಈಗ ಕೇವಲ ಎಸ್ಐಆರ್ನದ್ದಲ್ಲ.
ಜ್ಞಾನೇಶ್ ಕುಮಾರ್ ಯಾರು? ಮೋದಿ ಸರ್ಕಾರದೊಂದಿಗೆ ಅವರ ಆಡಳಿತಾತ್ಮಕ ಸಂಬಂಧ ಎಷ್ಟು ಆಳವಾಗಿತ್ತು? ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳೇನು? ಮತ್ತು ಅವರ ಅಧಿಕಾರಾವಧಿಯಲ್ಲಿ ಪದೇಪದೇ ಏಕೆ ವಿವಾದಗಳು ಹುಟ್ಟಿಕೊಂಡಿವೆ?

ಕೇರಳದ ಐಎಎಸ್ ಅಧಿಕಾರಿಯಿಂದ ದೆಹಲಿಯ ಅಧಿಕಾರದ ಕೇಂದ್ರದವರೆಗೆ
1988 ಬ್ಯಾಚ್ನ ಕೇರಳ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್, ಐಐಟಿ ಕಾನ್ಪುರದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪರಿಸರ ಅರ್ಥಶಾಸ್ತ್ರವನ್ನೂ ಅಧ್ಯಯನ ಮಾಡಿದ್ದಾರೆ.
ಕೇರಳದಲ್ಲಿ ಸಬ್ಕಲೆಕ್ಟರ್ನಿಂದ ಆರಂಭವಾದ ಅವರ ಆಡಳಿತಾತ್ಮಕ ಪಯಣ ನಂತರ ಕೇಂದ್ರ ಸರ್ಕಾರದ ಹಲವು ಪ್ರಮುಖ ಹುದ್ದೆಗಳತ್ತ ಸಾಗಿತು. ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ, ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ಅವರು ಕೆಲಸ ಮಾಡಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕೃತ ಪ್ರೊಫೈಲ್ ಹೇಳುತ್ತದೆ.
ಆದರೆ ಅವರ ವೃತ್ತಿಜೀವನದ ಅತ್ಯಂತ ರಾಜಕೀಯವಾಗಿ ಮಹತ್ವದ ಹಂತ ಆರಂಭವಾಗಿದ್ದು 2016ರಲ್ಲಿ.
ಕಾಶ್ಮೀರ: ಮೋದಿ-ಶಾ ಸರ್ಕಾರದ ಪ್ರಮುಖ ಯೋಜನೆಯ ಒಳವಲಯದಲ್ಲಿ
2016ರಲ್ಲಿ ಜ್ಞಾನೇಶ್ ಕುಮಾರ್ ಕೇಂದ್ರ ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿಯಾದರು. ಆ ಸಂದರ್ಭದಲ್ಲಿ ಗೃಹ ಸಚಿವರಾಗಿದ್ದವರು ರಾಜನಾಥ್ ಸಿಂಗ್.
2019ರಲ್ಲಿ ಅಮಿತ್ ಶಾ ಗೃಹ ಸಚಿವರಾದ ನಂತರ, ಜಮ್ಮು-ಕಾಶ್ಮೀರ ಪುನರ್ರಚನಾ ಮಸೂದೆ ರೂಪಿಸುವ ಪ್ರಕ್ರಿಯೆಯಲ್ಲಿ ಜ್ಞಾನೇಶ್ ಕುಮಾರ್ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅದೇ ಮಸೂದೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ 370ನೇ ವಿಧಿಯ ರದ್ದತಿ ಹಾಗೂ ರಾಜ್ಯವನ್ನು ಎರಡು
ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಪ್ರಕ್ರಿಯೆಯ ಕಾನೂನು ಚೌಕಟ್ಟಿನ ಭಾಗವಾಗಿತ್ತು.
ಇದು ಸಾಮಾನ್ಯ ಆಡಳಿತಾತ್ಮಕ ಕಡತವಾಗಿರಲಿಲ್ಲ.
370ನೇ ವಿಧಿಯ ರದ್ದತಿ ಬಿಜೆಪಿಯ ದಶಕಗಳ ಪ್ರಮುಖ ರಾಜಕೀಯ-ಸೈದ್ಧಾಂತಿಕ ಪ್ರತಿಜ್ಞೆಗಳಲ್ಲಿ ಒಂದಾಗಿತ್ತು.
ಹೀಗಾಗಿ, ಜ್ಞಾನೇಶ್ ಕುಮಾರ್ ಅವರ ವೃತ್ತಿಜೀವನದಲ್ಲಿ ಈ ಹಂತ ಮಹತ್ವದ್ದಾಗಿದೆ. ಅವರು ಕೇವಲ ಕೇಂದ್ರ ಸರ್ಕಾರದ ಒಬ್ಬ ಅಧಿಕಾರಿ ಆಗಿರಲಿಲ್ಲ; ಮೋದಿ ಸರ್ಕಾರದ ಅತ್ಯಂತ ಮಹತ್ವದ ರಾಜಕೀಯ ಯೋಜನೆಗಳಲ್ಲಿ ಒಂದರ ಆಡಳಿತಾತ್ಮಕ ಅನುಷ್ಠಾನದ ಒಳವಲಯದಲ್ಲಿದ್ದರು.
ಅಯೋಧ್ಯೆ: ರಾಮಮಂದಿರ ಟ್ರಸ್ಟ್ ರಚನೆಯಲ್ಲೂ ಪಾತ್ರ
ಕಾಶ್ಮೀರದ ನಂತರ ಅವರ ವೃತ್ತಿಜೀವನ ಮತ್ತೊಂದು ಅತ್ಯಂತ ರಾಜಕೀಯ ಮಹತ್ವದ ಯೋಜನೆಯೊಂದಿಗೆ ಸಂಪರ್ಕ ಹೊಂದಿತು. ಅಯೋಧ್ಯೆಯ ರಾಮಮಂದಿರ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯ ಜವಾಬ್ದಾರಿಯನ್ನೂ ಸರ್ಕಾರ ಜ್ಞಾನೇಶ್ ಕುಮಾರ್ ಅವರಿಗೆ ನೀಡಿತ್ತು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
370ನೇ ವಿಧಿ ರದ್ದತಿ ಮತ್ತು ರಾಮಮಂದಿರ—ಮೋದಿ ಸರ್ಕಾರ ಹಾಗೂ ಬಿಜೆಪಿಯ ರಾಜಕೀಯ-ಸೈದ್ಧಾಂತಿಕ ಅಜೆಂಡಾದ ಎರಡು ಅತ್ಯಂತ ಪ್ರಮುಖ ವಿಷಯಗಳು. ಈ ಎರಡೂ ಪ್ರಕ್ರಿಯೆಗಳಲ್ಲಿ ಕೆಲಸ ಮಾಡಿದ ಅಧಿಕಾರಿಯೇ ನಂತರ ದೇಶದ ಚುನಾವಣಾ ವ್ಯವಸ್ಥೆಯ ಅತ್ಯುನ್ನತ ಸ್ಥಾನಕ್ಕೆ ಏರಿದರು ಎಂಬುದು ಜ್ಞಾನೇಶ್ ಕುಮಾರ್ ಅವರ ಪಯಣವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಮುಖ ಸಂಗತಿ.
ನಿವೃತ್ತಿಯಾದ 43 ದಿನಗಳಲ್ಲೇ ಚುನಾವಣಾ ಆಯುಕ್ತ
ಜ್ಞಾನೇಶ್ ಕುಮಾರ್ 2024ರ ಜನವರಿ 31ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾದರು. ಆದರೆ ನಿವೃತ್ತ ಜೀವನ ದೀರ್ಘವಾಗಿರಲಿಲ್ಲ. 2024ರ ಮಾರ್ಚ್ 15ರಂದು ಇವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು—ನಿವೃತ್ತಿಯಾದ ಸುಮಾರು ಆರು ವಾರಗಳಲ್ಲೇ. ಚುನಾವಣಾ ಆಯೋಗದ ಅಧಿಕೃತ ದಾಖಲೆಗಳೂ ಈ ನೇಮಕವನ್ನು ದೃಢಪಡಿಸುತ್ತವೆ.
ಇದು ನಡೆದ ಸಂದರ್ಭವೂ ಗಮನಾರ್ಹವಾಗಿತ್ತು. 2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಅವರ ನೇಮಕ ನಡೆಯಿತು. ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಅವರನ್ನು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರತಿಪಕ್ಷದ ಪ್ರತಿನಿಧಿ ಅಧೀರ್ ರಂಜನ್ ಚೌಧರಿ ಇದ್ದರು.
ಚೌಧರಿ ಆಯ್ಕೆ ಪ್ರಕ್ರಿಯೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ಮುಂದೆ ಶಾರ್ಟ್ಲಿಸ್ಟ್ ಮಾಡಲಾದ ಹೆಸರುಗಳನ್ನು ಸಭೆ ಆರಂಭವಾಗುವುದಕ್ಕೆ ಕೇವಲ ಕೆಲವೇ ನಿಮಿಷಗಳ ಮುನ್ನ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದರು. ಅವರ ಪ್ರಕಾರ, ಅಮಿತ್ ಶಾ ಅವರು ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದರು.
ಇಲ್ಲಿ ಒಂದು ಪ್ರಮುಖ ಅಂಶವಿದೆ. ಜ್ಞಾನೇಶ್ ಕುಮಾರ್ ಅವರ ನೇಮಕದ ಬಗ್ಗೆ ಪ್ರಶ್ನೆ ಕೇವಲ ವ್ಯಕ್ತಿಯ ಕುರಿತದ್ದಲ್ಲ. ಚುನಾವಣಾ ಆಯುಕ್ತರನ್ನು ನೇಮಿಸುವ ವ್ಯವಸ್ಥೆಯೇ ಆಗಾಗಲೇ ರಾಜಕೀಯ ಮತ್ತು ಕಾನೂನು ಚರ್ಚೆಯಲ್ಲಿತ್ತು.

‘ಚುನಾವಣಾ ಆಯೋಗ 2.0’ — ಹೊಸ ಶೈಲಿಯ ಚುನಾವಣಾ ಆಯೋಗ
ಮುಖ್ಯ ಚುನಾವಣಾ ಆಯುಕ್ತರಾದ ನಂತರ ಜ್ಞಾನೇಶ್ ಕುಮಾರ್ ತಮ್ಮ ನೇತೃತ್ವದ ಸಂಸ್ಥೆಯನ್ನು ‘EC 2.0’ ಎಂದು ವಿವರಿಸಿದ್ದರು. ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನೂ ಅವರು ತಂದರು. ಉದಾಹರಣೆಗೆ, ಚುನಾವಣಾ ಆಯೋಗದ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲಾಯಿತು. ಇವರ ಅಧಿಕಾರಾವಧಿಯ ಆರಂಭಿಕ ತಿಂಗಳುಗಳಲ್ಲೇ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ವರ್ಗಾವಣೆಗಳೂ ನಡೆದವು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ವಿವರಿಸುತ್ತದೆ.
ಆದರೆ ಇವರ ಹೆಸರನ್ನು ರಾಷ್ಟ್ರೀಯ ರಾಜಕೀಯದ ಕೇಂದ್ರಕ್ಕೆ ತಂದದ್ದು ಆಡಳಿತಾತ್ಮಕ ಸುಧಾರಣೆಗಳಲ್ಲ. ಎಸ್ಐಆರ್.
ಎಸ್ ಐ ಆರ್ : ಮತದಾರರ ಪಟ್ಟಿಯ ಶುದ್ಧೀಕರಣವೇ, ಮತದಾನದ ಹಕ್ಕಿನ ಪರೀಕ್ಷೆಯೇ?
2025ರಲ್ಲಿ ಬಿಹಾರದಲ್ಲಿ ಆರಂಭವಾದ Special Intensive Revision — SIR — ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಅತ್ಯಂತ ವಿವಾದಾತ್ಮಕ ಕ್ರಮಗಳಲ್ಲಿ ಒಂದಾಯಿತು.
ಚುನಾವಣಾ ಆಯೋಗದ ವಾದ ಸರಳವಾಗಿತ್ತು: ಮತದಾರರ ಪಟ್ಟಿಯಲ್ಲಿ ಮೃತರು, ವಲಸೆ ಹೋದವರು, ನಕಲಿ ಅಥವಾ ಪುನರಾವರ್ತಿತ ಹೆಸರುಗಳು ಮತ್ತು ಅರ್ಹತೆ ಇಲ್ಲದವರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯ.
ಸುಪ್ರೀಂ ಕೋರ್ಟ್ ಕೂಡ 2026ರ ಮೇನಲ್ಲಿ ಬಿಹಾರ ಎಸ್ಐಆರ್ನ ಕಾನೂನು ಮಾನ್ಯತೆಯನ್ನು ಎತ್ತಿಹಿಡಿದಿತ್ತು. ನ್ಯಾಯಾಲಯದ ಪ್ರಕಾರ, ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಖಚಿತಪಡಿಸುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಉದ್ದೇಶಕ್ಕೆ ಹೊಂದಿಕೆಯಾಗುತ್ತದೆ. ಆದರೆ ಎಸ್ಐಆರ್ನ ಅನುಷ್ಠಾನ ಮತ್ತು ಅದರ ವ್ಯಾಪ್ತಿ ಕುರಿತು ತೀವ್ರ ರಾಜಕೀಯ ಮತ್ತು ಕಾನೂನು ವಿವಾದಗಳು ಮುಂದುವರಿದವು.
ಬಿಹಾರದಲ್ಲಿ ಸುಮಾರು 65 ಲಕ್ಷ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಕಾರಣಗಳೊಂದಿಗೆ ಆ ಪಟ್ಟಿಯನ್ನು ಸಾರ್ವಜನಿಕಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ನಂತರ ಎಸ್ಐಆರ್ ಇತರ ರಾಜ್ಯಗಳಿಗೂ ವಿಸ್ತರಿಸಿತು. ಇಲ್ಲಿಯೇ ಜ್ಞಾನೇಶ್ ಕುಮಾರ್ ಅವರ ಅಧಿಕಾರಾವಧಿಯ ಅತ್ಯಂತ ದೊಡ್ಡ ಪ್ರಶ್ನೆ ಎದುರಾಗುತ್ತದೆ:
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಅಧಿಕಾರ ಬಳಸುವಾಗ ಚುನಾವಣಾ ಆಯೋಗವು ಮತದಾರರ ಹಕ್ಕನ್ನು ರಕ್ಷಿಸುವಲ್ಲಿ ಎಷ್ಟು ಪಾರದರ್ಶಕ ಮತ್ತು ವಿಕೇಂದ್ರೀಕೃತವಾಗಿದೆ?
‘ದಿ ಇಂಡಿಯನ್ ಎಕ್ಸ್ಪ್ರೆಸ್’ ಬಹಿರಂಗಪಡಿಸಿರುವ ಸ್ಫೋಟಕ ಒಳಗಿನ ಕತೆ
2026ರ ಸೆಪ್ಟೆಂಬರ್ 23ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್ಪ್ರೆಸ್ ತನಿಖೆ ಜ್ಞಾನೇಶ್ ಕುಮಾರ್ ಅವರ ಸುತ್ತ ಇರುವ ಗಂಭೀರ ಅನುಮಾನಗಳನ್ನು ಮತ್ತಷ್ಟು ಗಂಭೀರಗೊಳಿಸಿದೆ. ವರದಿ ಪ್ರಕಾರ, ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದಲ್ಲಿ, ಉಳಿದಿಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಇಬ್ಬರೂ ಅಧಿಕಾರಿಗಳು ತಮ್ಮನ್ನು ನಿರ್ಧಾರಗಳಿಂದ ದೂರವಿಡಲಾಗಿದೆ ಎಂದು ಹೇಳಿದ್ದಾರೆ.
ಆಕ್ಷೇಪಣೆಗಳು ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ, ಫಾರ್ಮ್ 6 ಬದಲಾವಣೆ, ಮತದಾರರ ಡೇಟಾಬೇಸ್ ಪ್ರವೇಶ ಮತ್ತು ಚುನಾವಣಾ ಸಾಫ್ಟ್ವೇರ್ನ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆಯುಕ್ತರನ್ನು ದೂರವಿಟ್ಟು ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ತಾತ್ಪರ್ಯ.
ಮೋದಿ ಮತ್ತು ಅಮಿತ್ ಶಾ ಅವರ ನೆಚ್ಚಿನ ಅಧಿಕಾರಿಯಾದ ಜ್ಞಾನೇಶ್ ಕುಮಾರ್ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧ್ವಂಸ ಮಾಡಿದ್ದಾರೆ ಎಂಬ ಗಂಭೀರ ಆರೋಪವನ್ನು ಈಗ ಎದುರಿಸುತ್ತಿದ್ದಾರೆ. ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಬೆನ್ನಲ್ಲೇ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಪತ್ರಿಕಾಗೋಷ್ಠಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


