'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆಕ್ಷೇಪಗಳು ಕೇವಲ ಸಾಮಾನ್ಯ ಆಡಳಿತಾತ್ಮಕ ವಿಚಾರಗಳಿಗೆ ಸೀಮಿತವಾಗಿಲ್ಲ. ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳನ್ನು ಅಳಿಸುವುದು ಅಥವಾ ಮರುಸ್ಥಾಪಿಸುವುದು, ಪಶ್ಚಿಮ ಬಂಗಾಳದ ಎಸ್ಐಆರ್ ಮೇಲ್ಮನವಿಗಳು, ಫಾರ್ಮ್ -6 ಬದಲಾವಣೆ ಮತ್ತು ಇಡೀ ಮತದಾರರ ಡೇಟಾಬೇಸ್ ನಿರ್ವಹಿಸುವ ಸಾಫ್ಟ್ವೇರ್ನ ನಿಯಂತ್ರಣದಂತಹ ಚುನಾವಣಾ ಪ್ರಕ್ರಿಯೆಯ ಮೂಲಭೂತ ವಿಷಯಗಳನ್ನೇ ಅವು ಒಳಗೊಂಡಿವೆ ಎನ್ನುತ್ತದೆ.

13 ಕೋಟಿಗೂ ಹೆಚ್ಚು ಹೆಸರುಗಳಿರುವ ಎಸ್ಐಆರ್ ಹಿನ್ನೆಲೆಯಲ್ಲಿ ವಿವಾದ
ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ 2025ರ ಜೂನ್ನಲ್ಲಿ ಬಿಹಾರದಿಂದ ಆರಂಭವಾಗಿತ್ತು. ನಂತರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಲಾಯಿತು. 'ದಿ ಇಂಡಿಯನ್ ಎಕ್ಸ್ಪ್ರೆಸ್' ತನಿಖಾ ವರದಿಯ ಪ್ರಕಾರ, 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಗಳಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೇಗೆ ನಡೆಯುತ್ತಿದೆ ಎಂಬ ಪ್ರಶ್ನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಹೊಸ ಆಯಾಮ ಸಿಕ್ಕಂತಾಗಿದೆ.
ಈ ಪ್ರಕ್ರಿಯೆಯ ಮೇಲ್ವಿಚಾರಣೆ ಮೂವರು ಚುನಾವಣಾ ಆಯುಕ್ತರ ಒಟ್ಟಾರೆ ಜವಾಬ್ದಾರಿಯಲ್ಲಿದ್ದರೂ, ಸಂಧು ಮತ್ತು ಜೋಶಿ ಅವರು ಹಲವು ನಿರ್ಧಾರಗಳು ತಮ್ಮ ಗಮನಕ್ಕೆ ಅಥವಾ ಅನುಮೋದನೆಗೆ ಬಾರದೆಯೇ ಕೈಗೊಳ್ಳಲಾಗಿದೆ ಎಂದು ದಾಖಲೆಗಳಲ್ಲಿ ಆಕ್ಷೇಪಿಸಿದ್ದಾರೆ.
'ದಿ ಇಂಡಿಯನ್ ಎಕ್ಸ್ಪ್ರೆಸ್' ಸೆ. 21ರಂದು ಚುನಾವಣಾ ಆಯೋಗಕ್ಕೆ ಪ್ರಶ್ನಾವಳಿ ಕಳುಹಿಸಿ, ಇಬ್ಬರು ಆಯುಕ್ತರು ಎತ್ತಿರುವ ಆಕ್ಷೇಪಗಳ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಮತ್ತು ಸೆ. 9ರಂದು ನಡೆದ ಮೂವರು ಆಯುಕ್ತರ ಸಭೆಯಲ್ಲಿ ಈ ವಿಷಯಗಳು ಚರ್ಚೆಯಾಗಿದ್ದವೆಯೇ ಎಂದು ಕೇಳಿತ್ತು. 'ದಿ ಇಂಡಿಯನ್ ಎಕ್ಸ್ಪ್ರೆಸ್' ತನ್ನ ತನಿಖಾ ವರದಿ ಪ್ರಕಟಿಸುವ ವೇಳೆಗೆ ಆಯೋಗದಿಂದ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದೆ.

ಹೊಸ ಮತದಾರರ ಫಾರ್ಮ್- 6 ಬದಲಾವಣೆ ಏಕೆ?
ವಿವಾದದ ಪ್ರಮುಖ ಅಂಶಗಳಲ್ಲಿ ಒಂದು Form-6. ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಬಳಸುವ ಈ ನಮೂನೆಯಲ್ಲಿ ಎಸ್ಐರ್ಗೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಲಾಗಿತ್ತು.
ಹೊಸ ಅರ್ಜಿದಾರರು ತಮ್ಮ ಹೆಸರು ಹಿಂದಿನ ಎಸ್ಐಆರ್ ವೇಳೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿತ್ತೇ, ಅಥವಾ ಅವರ ತಂದೆ–ತಾಯಿ/ಅಜ್ಜ–ಅಜ್ಜಿ ಹೆಸರು ಆ ಪಟ್ಟಿಯಲ್ಲಿತ್ತೇ ಎಂಬುದಕ್ಕೆ ಸಂಬಂಧಿಸಿದ ಆಯ್ಕೆ ಮಾಡಬೇಕಾಗಿತ್ತು. ಪ್ರಶ್ನೆಯನ್ನು ಕಡ್ಡಾಯ ಎಂದು ಗುರುತಿಸಿರಲಿಲ್ಲವಾದರೂ, ಅದಕ್ಕೆ ಉತ್ತರಿಸದೆ ಫಾರ್ಮ್- 6 ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿ ಹೇಳುತ್ತದೆ.
ಮೇ 16ರಂದು ಚುನಾವಣಾ ಆಯುಕ್ತ ವಿವೇಕ್ ಜೋಶಿ ಈ ಬದಲಾವಣೆಗೆ ಆಕ್ಷೇಪಿಸಿದ್ದರು. ಚುನಾವಣಾ ನಿಯಮಗಳ ನೋಂದಣಿ, 1960ರ ಅಡಿಯಲ್ಲಿ ನಿಗದಿಪಡಿಸಲಾದ ಫಾರ್ಮ್- 6 ಅನ್ನು ಸರ್ಕಾರದ ನಿಯಮ ತಿದ್ದುಪಡಿ ಇಲ್ಲದೆ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಮೇ 19ರಂದು ಸಂಧು ಕೂಡ ಈ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೂ ಬದಲಾವಣೆ ಜಾರಿಗೆ ಬಂದಿತು.
ನಂತರ ಆಗಸ್ಟ್ 13ರಂದು ಸಂಧು, ಈ ಬದಲಾವಣೆಗಳನ್ನು “ಅನಧಿಕೃತ” ಮತ್ತು “ಕಾನೂನುಬಾಹಿರ” ಎಂದು ದಾಖಲಿಸಿ, ಅವುಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು. ವಿಶೇಷವಾಗಿ ಮೊದಲ ಬಾರಿಗೆ ಮತದಾರರಾಗುವ ಯುವಕರಿಗೆ ಅನಗತ್ಯ ತೊಂದರೆ ಉಂಟಾಗಬಾರದು ಎಂಬುದು ಅವರ ವಾದವಾಗಿತ್ತು.
ಮತದಾರರ ಡೇಟಾಬೇಸ್ ಯಾರ ನಿಯಂತ್ರಣದಲ್ಲಿ?
ಎರಡನೇ ಮತ್ತು ಇನ್ನಷ್ಟು ಮಹತ್ವದ ಪ್ರಶ್ನೆ ಮತದಾರರ ಡೇಟಾಬೇಸ್ನ ನಿಯಂತ್ರಣಕ್ಕೆ ಸಂಬಂಧಿಸಿದ್ದು. ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಅದರಲ್ಲಿನ ಸೇರ್ಪಡೆ, ಅಳಿಸುವಿಕೆ, ಆಕ್ಷೇಪಣೆಗಳ ವಿಚಾರಣೆ ಮುಂತಾದ ಜವಾಬ್ದಾರಿ ಎಲೆಕ್ಟ್ರೋಲ್ ರಿಜಿಸ್ಟ್ರೇಷನ್ ಆಫೀಸರ್ಗೆ ಸೇರಿದೆ. ಸಾಮಾನ್ಯವಾಗಿ ಈ ಜವಾಬ್ದಾರಿ ಉಪವಿಭಾಗಾಧಿಕಾರಿ ಅಥವಾ ಸಮಾನ ಹುದ್ದೆಯ ಅಧಿಕಾರಿಯಲ್ಲಿರುತ್ತದೆ. ಈ ವ್ಯವಸ್ಥೆಯ ಉದ್ದೇಶವೇ ಮತದಾರರ ಪಟ್ಟಿಯ ನಿರ್ವಹಣೆಯನ್ನು ಸ್ಥಳೀಯ ಮಟ್ಟದಲ್ಲಿ ಕಾನೂನುಬದ್ಧ ಅಧಿಕಾರಿಗಳ ಮೂಲಕ ನಡೆಸುವುದು.
ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಎರೊನೆಟ್(ERONet) ಮತ್ತು ಅದರ ಉತ್ತರಾಧಿಕಾರಿ ಇಸಿನೆಟ್(ECINet) ಸಾಫ್ಟ್ವೇರ್ ವ್ಯವಸ್ಥೆಗಳ ಮೂಲಕ ಮತದಾರರ ಡೇಟಾಬೇಸ್ ನಿರ್ವಹಣೆಯಲ್ಲಿ ನಿಯಂತ್ರಣ ಕ್ರಮೇಣ ದೆಹಲಿಯಲ್ಲಿರುವ ಐಟಿ ವಿಭಾಗದತ್ತ ಕೇಂದ್ರೀಕೃತವಾಗುತ್ತಿದೆ ಎಂಬ ಆತಂಕವನ್ನು ಇಬ್ಬರು ಆಯುಕ್ತರು ದಾಖಲಿಸಿದ್ದಾರೆ ಎಂದು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ವಿವರಿಸುತ್ತದೆ.
ಮೇ 29ರಂದು ವಿವೇಕ್ ಜೋಶಿ ಅವರು ಇದನ್ನು “ಮತದಾರರ ಡೇಟಾಬೇಸ್ನ ಕ್ರಮೇಣ ಕೇಂದ್ರೀಕರಣ” ಎಂದು ಗುರುತಿಸಿ, ಹೊರಗಿನ ತಜ್ಞರು, ವಿಶೇಷವಾಗಿ ಐಐಟಿ ತಜ್ಞರನ್ನು ಒಳಗೊಂಡ ಸ್ವತಂತ್ರ ಆಡಿಟ್ ನಡೆಸುವಂತೆ ಪ್ರಸ್ತಾಪಿಸಿದ್ದರು. ಮತದಾರರ ಡೇಟಾಬೇಸ್ನಲ್ಲಿ ಬದಲಾವಣೆ ಮಾಡಲು ಸಂಬಂಧಿಸಿದ ಕಾನೂನುಬದ್ಧ ಅಧಿಕಾರಿಗಳ ಹೊರತಾಗಿ ಬೇರೆ ಯಾರಿಗೂ ಅಗತ್ಯ ಆಕ್ಸೆಸ್ ಇರಬಾರದು ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಯನ್ನೂ ಅವರು ಸೂಚಿಸಿದ್ದರು. ಜುಲೈ 13ರಂದು ಸಂಧು ಕೂಡ ಈ ಪ್ರಸ್ತಾಪವನ್ನು ಬೆಂಬಲಿಸಿದ್ದರು.
ಐಟಿ ವಿಭಾಗದ ಮೇಲ್ವಿಚಾರಣೆ ತೆಗೆದುಹಾಕಿದ ಕ್ರಮಕ್ಕೆ ವಿರೋಧ
ಜುಲೈ 28ರಂದು ಚುನಾವಣಾ ಆಯೋಗದ ಆಡಳಿತ ವಿಭಾಗದಲ್ಲಿ ಕೆಲಸ ಹಂಚಿಕೆಯ ಬದಲಾವಣೆಯೊಂದು ಮತ್ತೊಂದು ವಿವಾದಕ್ಕೆ ಕಾರಣವಾಯಿತು.
ಐಟಿ ವಿಭಾಗದ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಅವರನ್ನು ಆ ಮೇಲ್ವಿಚಾರಣಾ ಹೊಣೆಗಾರಿಕೆಯಿಂದ ತೆಗೆದುಹಾಕುವ ರೀತಿಯಲ್ಲಿ ಕೆಲಸ ಹಂಚಿಕೆ ಬದಲಾಯಿಸಲಾಯಿತು ಎಂದು ವರದಿ ಆಘಾತಕಾರಿಯ ನಿರ್ಧಾರಗಳನ್ನು ವಿವರಿಸುತ್ತದೆ. ಈ ಕ್ರಮವನ್ನು ಚುನಾವಣಾ ಆಯೋಗದ ಮೂವರು ಸದಸ್ಯರೊಂದಿಗೆ ಸಮಾಲೋಚಿಸದೆ ಕೈಗೊಳ್ಳಲಾಗಿತ್ತು ಎಂದು ಸಂಧು ಮತ್ತು ಜೋಶಿ ಆಕ್ಷೇಪಿಸಿದರು. ಈ ಬೆಳವಣಿಗೆಯ ನಂತರ ನಡೆದದ್ದು ಇನ್ನಷ್ಟು ಗಮನಾರ್ಹವಾದದ್ದು.
ಜುಲೈ 29ರಂದು ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿಯವರು ಪ್ರತ್ಯೇಕವಾಗಿ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪತ್ರ ಬರೆದರು. ಈ ಆಯೋಗದ ಆಡಳಿತಾತ್ಮಕ ಬದಲಾವಣೆ ಕಾನೂನುಬದ್ಧ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮರುದಿನ, ಜುಲೈ 30ರಂದು, ಸಂಧು ಮತ್ತು ಜೋಶಿ ಜಂಟಿಯಾಗಿ ಆ ಕೆಲಸ ಹಂಚಿಕೆ ಆದೇಶವನ್ನು ಬದಿಗಿರಿಸಿ, ಆಯೋಗ ಒಮ್ಮತಕ್ಕೆ ಬರುವವರೆಗೆ ಹಿಂದಿನ ವ್ಯವಸ್ಥೆಯೇ ಮುಂದುವರಿಯಬೇಕು ಎಂದು ಸೂಚಿಸಿದರು.
ರಾಜ್ಯದ ಅಧಿಕಾರಿಗಳ ಪ್ರವೇಶವನ್ನೇ ನಿರ್ಬಂಧಿಸಲಾಗುತ್ತಿದೆಯೇ?
ಆಗಸ್ಟ್ 14ರಂದು ಸಂಧು ಮತದಾರರ ಡೇಟಾಬೇಸ್ ಕುರಿತು ತಮ್ಮ ಅತ್ಯಂತ ವಿವರವಾದ ಆಕ್ಷೇಪವನ್ನು ದಾಖಲಿಸಿದರು. ರಾಜ್ಯಗಳ ಮುಖ್ಯ ಚುನಾವಣಾಧಿಕಾರಿ(CEO), ಜಿಲ್ಲಾಮಟ್ಟದ ಚುನಾವಣಾ ಅಧಿಕಾರಿಗಳು (DEO) ಮತ್ತು ಇಆರ್ಒಗಳು ಮತದಾರರ ಪಟ್ಟಿಗೆ ಸಂಬಂಧಿಸಿದ ಕಾನೂನುಬದ್ಧ ಅಧಿಕಾರಿಗಳಾಗಿದ್ದರೂ, ಅವರಲ್ಲಿ ಕೆಲವರಿಗೆ ERONetಗೆ “ಸಂಪೂರ್ಣ ಮತ್ತು ಸೂಕ್ತ ಪ್ರವೇಶ” ಇಲ್ಲ ಎಂದು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಸಂಧು ದಾಖಲಿಸಿದ್ದರು.
ಕೇಂದ್ರಿತ ಐಟಿ ನಿಯಂತ್ರಣದಿಂದ ಈ ಅಧಿಕಾರಿಗಳ ಕಾನೂನುಬದ್ಧ ಕಾರ್ಯಾಚರಣೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಅವರ ಆಕ್ಷೇಪ. ಸಂಬಂಧಿತ ಅಧಿಕಾರಿಗಳಿಗೆ ಸಂಪೂರ್ಣ ಪ್ರವೇಶ ಕಲ್ಪಿಸಬೇಕು ಮತ್ತು ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಇಒಗಳಿಂದ ಅಂತಹ ಪ್ರವೇಶವಿದೆ ಎಂಬುದನ್ನು ದೃಢೀಕರಿಸಬೇಕು ಎಂದು ಸಂಧು ಸೂಚಿಸಿದ್ದರು.
ಪಶ್ಚಿಮ ಬಂಗಾಳ: 38 ಲಕ್ಷ ಮೇಲ್ಮನವಿಗಳ ಪ್ರಶ್ನೆ
ಎಸ್ಐಆರ್ಗೆ ಸಂಬಂಧಿಸಿದಂತೆ ಅತ್ಯಂತ ತೀವ್ರ ಕಾನೂನು ಹೋರಾಟ ನಡೆಸಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದು. ಅಲ್ಲಿನ ಎಸ್ಐಆರ್ನಲ್ಲಿ ತಾರ್ಕಿಕವಾದ ವೈರುಧ್ಯಗಳು ಎಂದು ಗುರುತಿಸಲ್ಪಟ್ಟ ಸುಮಾರು 60 ಲಕ್ಷ ಮತದಾರರ ಪ್ರಕರಣಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ನಂತರ ಸುಮಾರು 27 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಯಿತು ಎಂದು' ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ವಿವರಿಸುತ್ತದೆ.
ತದನಂತರ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಮಂಡಳಿಗಳ ಮೂಲಕ ಮೇಲ್ಮನವಿ ವಿಚಾರಣೆ ನಡೆಸುವ ವ್ಯವಸ್ಥೆ ಮಾಡಲಾಯಿತು. ಕಳೆದ ವಾರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ನೀಡಿದ ಮಾಹಿತಿಯ ಪ್ರಕಾರ, ಈ ನ್ಯಾಯಮಂಡಳಿಗಳ ಮುಂದೆ ಸುಮಾರು 38 ಲಕ್ಷ ಮೇಲ್ಮನವಿಗಳು ಬಾಕಿ ಇವೆ.
22.21 ಲಕ್ಷ — ಅಳಿಸಲಾದ ಮತದಾರರು ತಮ್ಮ ಹೆಸರು ಮರುಸ್ಥಾಪಿಸಲು ಸಲ್ಲಿಸಿದ ಮೇಲ್ಮನವಿಗಳು.
16.10 ಲಕ್ಷ — ನ್ಯಾಯಾಂಗ ಅಧಿಕಾರಿಗಳು ಪಟ್ಟಿಯಲ್ಲಿ ಉಳಿಸಿದ ಮತದಾರರ ಹೆಸರನ್ನು ಅಳಿಸುವಂತೆ ಸಲ್ಲಿಸಲಾದ ಮೇಲ್ಮನವಿಗಳು.
ಈ ಎರಡನೇ ವರ್ಗದ ಮೇಲ್ಮನವಿಗಳನ್ನು ಯಾರು ಮತ್ತು ಯಾವ ಅಧಿಕಾರದ ಆಧಾರದ ಮೇಲೆ ಸಲ್ಲಿಸಿದರು ಎಂದು ಸಂಧು ಪ್ರಶ್ನಿಸಿದ್ದಾರೆ.
ಆಗಸ್ಟ್ನಲ್ಲಿ ಅವರು ಚುನಾವಣಾ ಆಯೋಗದ ಅಧಿಕಾರಿಗಳಿಗೆ, ಇಸಿಐ ಪರವಾಗಿ ಮೇಲ್ಮನವಿ ಸಲ್ಲಿಸಲು ಯಾರಿಗೆ ಅಧಿಕಾರ ನೀಡಲಾಯಿತು? ಯಾರು ಅದನ್ನು ಸಲ್ಲಿಸಿದರು? ಎಂದು ಪ್ರಶ್ನಿಸಿದ್ದರು. ಈ ಪ್ರಕ್ರಿಯೆಯ ಆಧಾರ ಅಥವಾ ವಿಧಾನವನ್ನು ತಮಗೂ, ಜೋಶಿಗೂ ಅಥವಾ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗೂ ತಿಳಿಸಲಾಗಿಲ್ಲ ಎಂದು ಅವರು ದಾಖಲಿಸಿದ್ದರು.
ಗೋವಾದಲ್ಲಿ 97 ಮತದಾರರ ಪ್ರಕರಣ: ಸಾಫ್ಟ್ವೇರ್ ವಿರುದ್ಧ ಅಧಿಕಾರಿಯ ತೀರ್ಪು
ಈ ವಿವಾದದ ಪರಿಣಾಮವನ್ನು ತೋರಿಸುವ ಮತ್ತೊಂದು ಉದಾಹರಣೆ ಗೋವಾದದ್ದು. ತಾರ್ಕಿಕ ವೈರುಧ್ಯಗಳು ಎಂದು ಸಾಫ್ಟ್ವೇರ್ ಗುರುತಿಸಿದ್ದ ಮತದಾರರಿಗೆ ದಾಖಲೆ ಸಲ್ಲಿಸಿ ತಮ್ಮ ಪ್ರಕರಣವನ್ನು ಮಂಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಗೋವಾದ ಇಆರ್ಒಗಳು ವಿಚಾರಣೆ ನಡೆಸಿದ ಬಳಿಕ 97 ಮತದಾರರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹರು ಎಂದು ತೀರ್ಮಾನಿಸಿದರು.
ಆದರೆ, ಇಆರ್ಒಗಳ ಹಿಂದಿನ ಅಳಿಸುವಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಬೇಕಾದ ಸಾಫ್ಟ್ವರ್ ರೋಲ್ ಬ್ಯಾಕ್ ಅವಕಾಶ ಲಭ್ಯವಿರಲಿಲ್ಲ. ಗೋವಾ ಮುಖ್ಯ ಚುನಾವಣಾಧಿಕಾರಿ ಕಚೇರಿ ಫೆಬ್ರವರಿ 11ರಿಂದ 17ರವರೆಗೆ ಈ ಸೌಲಭ್ಯ ಕಲ್ಪಿಸುವಂತೆ ಎಂಟು ಬಾರಿ ಪತ್ರ ಬರೆದಿತ್ತು. ಈ ಪತ್ರಗಳಲ್ಲಿ ಐಟಿ ವಿಭಾಗದ ಮುಖ್ಯಸ್ಥೆ ಸೀಮಾ ಖನ್ನಾ ಅವರನ್ನೂ ಪ್ರತಿ ಬಾರಿ ಪ್ರತಿಗೆ ಸೇರಿಸಲಾಗಿತ್ತು ಆದರೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಗಡುವಿನೊಳಗೆ ಈ ಸೌಲಭ್ಯ ಸಕ್ರಿಯಗೊಳ್ಳಲಿಲ್ಲ ಎಂದು ತನಿಖಾ ವರದಿ ಹೇಳುತ್ತದೆ.
ಪರಿಣಾಮವಾಗಿ, ಇಆರ್ಒಗಳು ಅರ್ಹರೆಂದು ತೀರ್ಮಾನಿಸಿದ್ದ 97 ಮತದಾರರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಉಳಿಯಲಿಲ್ಲ.
ಇಲ್ಲಿಯೇ ವಿವಾದದ ಮೂಲ ಪ್ರಶ್ನೆ ಎದುರಾಗುತ್ತದೆ: ಕಾನೂನುಬದ್ಧ ಅಧಿಕಾರ ಹೊಂದಿರುವ ಸ್ಥಳೀಯ ಅಧಿಕಾರಿ ಒಂದು ನಿರ್ಧಾರ ಕೈಗೊಂಡ ನಂತರ, ಆ ನಿರ್ಧಾರವನ್ನು ದಾಖಲಿಸುವ ಅಥವಾ ಬದಲಾಯಿಸುವ ಸಾಮರ್ಥ್ಯ ಸಾಫ್ಟ್ವೇರ್ ವ್ಯವಸ್ಥೆಯಲ್ಲೇ ಇಲ್ಲದಿದ್ದರೆ, ಅಂತಿಮ ಅಧಿಕಾರ ಯಾರದ್ದು? ಸ್ಥಳೀಯ ಅಧಿಕಾರಿಗಳಿಗೆ ದಾಖಲಿಸಲಾಗದೆ ನಿಯಂತ್ರಿಸುವುದರ ಹಿಂದಿನ ಉದ್ದೇಶವೇನು?
ಚುನಾವಣಾ ಆಯೋಗದ ಕಾನೂನುಬದ್ಧ ರಚನೆ ಏನು ಹೇಳುತ್ತದೆ?
ಭಾರತೀಯ ಸಂವಿಧಾನದ 324ನೇ ವಿಧಿ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರು ಸಮಾನ ಹುದ್ದೆಯ ಸದಸ್ಯರು. 2023ರ Chief Election Commissioner and Other Election Commissioners (Appointment, Conditions of Service and Term of Office) Actನ Section 18 ಪ್ರಕಾರ, ಆಯೋಗದ ವ್ಯವಹಾರಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ನಡೆಸಬೇಕು. ಸದಸ್ಯರ ನಡುವೆ ಅಭಿಪ್ರಾಯ ಭಿನ್ನತೆ ಉಂಟಾದರೆ ಬಹುಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಹುದು. ಆದರೆ ಆಯೋಗದ ಕಾರ್ಯವಿಧಾನ ಮತ್ತು ಕೆಲಸದ ಹಂಚಿಕೆಯನ್ನು ನಿಗದಿಪಡಿಸುವ ವಿಷಯದಲ್ಲಿ ಸರ್ವಾನುಮತದ ನಿರ್ಧಾರ ಅಗತ್ಯವೆಂದು ಕಾಯ್ದೆ ಹೇಳುತ್ತದೆ.
ಈ ನಿಯಮಗಳನ್ನು ಉಲ್ಲೇಖಿಸಿ ಸಂಧು ಮತ್ತು ಜೋಶಿ ಅವರು ಏಪ್ರಿಲ್ನಲ್ಲಿ ಆಯೋಗದ ಅಧಿಕಾರಿಗಳಿಗೆ ಪ್ರತ್ಯೇಕ ಟಿಪ್ಪಣಿಗಳನ್ನು ಕಾರ್ಯದರ್ಶಿಗಳಿಗೆ ಕಳುಹಿಸಿ, ಆಯೋಗದ ಅನುಮೋದನೆ ಇಲ್ಲದೆ ಅದರ ಹೆಸರಿನಲ್ಲಿ ಸಂವಹನಗಳು ಹೊರಬರುತ್ತಿವೆ ಎಂಬ ಆತಂಕವನ್ನೂ ಅವರು ದಾಖಲಿಸಿದ್ದರು.
10 ತಿಂಗಳ ಆಕ್ಷೇಪಗಳ ಸರಣಿ
'ದಿ ಇಂಡಿಯನ್ ಎಕ್ಸ್ಪ್ರೆಸ್' ಪ್ರಕಟಿಸಿರುವ ದಾಖಲೆಗಳ ಆಧಾರದಲ್ಲಿ, ಇಬ್ಬರು ಆಯುಕ್ತರ ಆಕ್ಷೇಪಗಳು ಹಲವು ಹಂತಗಳಲ್ಲಿ ದಾಖಲಾಗಿವೆ:
ದಿನಾಂಕ ಆಕ್ಷೇಪ
ನ. 4, 2025 - ಇಆರ್ಒ/ಡಿಇಒ/ಸಿಇಒಗಳ ಕಾನೂನುಬದ್ಧ ಅಧಿಕಾರವನ್ನು ಐಟಿ ವ್ಯವಸ್ಥೆ ನಿರ್ಬಂಧಿಸಬಾರದು ಎಂಬ ಎಚ್ಚರಿಕೆ
ಏ. 2, 2026 - ಚುನಾವಣಾ ಪಟ್ಟಿಗೆ ಸಂಬಂಧಿಸಿದ ಪ್ರಕ್ರಿಯೆಯ ಕುರಿತು ಆಕ್ಷೇಪ
ಏ. 3, 2026 - ಅಧಿಕೃತ ಪ್ರಕ್ರಿಯೆಯ ಕುರಿತು ಸಂಧು ಅವರ ಮತ್ತೊಂದು ಆಕ್ಷೇಪ
ಏ. 4, 2026 - ಜೋಶಿ ಅವರ ಆಕ್ಷೇಪ
ಏ. 16, 2026 - ಐಟಿ ವಿಭಾಗದ ಹೊಸ ಮಾಡ್ಯುಲ್/ಪೋರ್ಟಲ್ಗಳ ಕುರಿತು ಆಯೋಗಕ್ಕೆ ಮಾಹಿತಿ ನೀಡದಿರುವ ಬಗ್ಗೆ ಪ್ರಶ್ನೆ
ಏ. 24, 2026 - ಆಯೋಗದ ಅನುಮೋದನೆ ಇಲ್ಲದೆ ಇಸಿಐ ಹೆಸರಿನಲ್ಲಿ ಸಂವಹನಗಳ ಕುರಿತು ಆಕ್ಷೇಪ
ಮೇ 16, 2026 - ಫಾರ್ಮ್ -6 ಬದಲಾವಣೆ ಕಾನೂನುಬದ್ಧ ನಿಯಮ ತಿದ್ದುಪಡಿ ಇಲ್ಲದೆ ಸಾಧ್ಯವಿಲ್ಲ ಎಂಬ ಜೋಶಿ ಅವರ ಆಕ್ಷೇಪ
ಮೇ 29, 2026 - ಮತದಾರರ ಡೇಟಾಬೇಸ್ “ಕ್ರಮೇಣ ಕೇಂದ್ರೀಕರಣ”ದ ಬಗ್ಗೆ ಜೋಶಿ ಅವರ ಎಚ್ಚರಿಕೆ
ಜು. 13, 2026 - ಸ್ವತಂತ್ರ ಐಟಿ ಆಡಿಟ್ ಪ್ರಸ್ತಾಪಕ್ಕೆ ಸಂಧು ಅವರ ಬೆಂಬಲ
ಜು. 29, 2026 - ಐಟಿ ಮೇಲ್ವಿಚಾರಣೆ ಬದಲಾವಣೆ ಕುರಿತು ಇಬ್ಬರೂ ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ
ಜು. 30, 2026 - ಬದಲಾದ ಕೆಲಸ ಹಂಚಿಕೆ ಆದೇಶವನ್ನು ಇಬ್ಬರೂ ಬದಿಗಿರಿಸಿದರು
ಆ. 12, 2026 - ಆಡಳಿತ/ಐಟಿ ವ್ಯವಸ್ಥೆಯ ಕುರಿತು ಸಂಧು ಅವರ ಆಕ್ಷೇಪ
ಆ. 13,2026 - ಫಾರ್ಮ್ -6 ಬದಲಾವಣೆಯನ್ನು ತೆಗೆದುಹಾಕುವಂತೆ ಸಂಧು ಒತ್ತಾಯ
ಆ. 14, 2026 - ಇರೊನೆಟ್ಗೆ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಪ್ರವೇಶ ನೀಡುವಂತೆ ಸಂಧು ಸೂಚನೆ
ವಿವಾದದ ಕೇಂದ್ರದಲ್ಲಿ ಈಗ ‘ಸಾಫ್ಟ್ವೇರ್’ ಮಾತ್ರವಲ್ಲ, ಅಧಿಕಾರದ ಪ್ರಶ್ನೆಯೂ ಇದೆ
ಈ ತನಿಖೆಯ ಪ್ರಮುಖ ಅಂಶವೆಂದರೆ, ಚುನಾವಣಾ ಪಟ್ಟಿಯನ್ನು ನಿರ್ವಹಿಸುವ ವ್ಯವಸ್ಥೆಯಲ್ಲಿ ಕಾನೂನುಬದ್ಧ ಅಧಿಕಾರ ಮತ್ತು ತಾಂತ್ರಿಕ ನಿಯಂತ್ರಣ ಒಂದೇ ಕಡೆ ಇರಬೇಕೇ? ಎಂಬ ಪ್ರಶ್ನೆ.
ಕಾನೂನಿನ ಪ್ರಕಾರ ಇಆರ್ಒ ಮತದಾರರ ಹೆಸರನ್ನು ಸೇರಿಸುವುದು, ಅಳಿಸುವುದು ಅಥವಾ ಆಕ್ಷೇಪಣೆಗಳನ್ನು ವಿಚಾರಿಸುವ ಅಧಿಕಾರ ಹೊಂದಿರುತ್ತಾನೆ. ಆದರೆ ಆ ಅಧಿಕಾರವನ್ನು ಚಲಾಯಿಸಲು ಬೇಕಾದ ಡಿಜಿಟಲ್ ಆಕ್ಸೆಸ್ ನಿರ್ಬಂಧಿತವಾದರೆ, ಅಧಿಕಾರವು ಕಾಗದದಲ್ಲಿ ಉಳಿದಂತಾಗುವುದಿಲ್ಲವೆ ಎಂದು ಇಬ್ಬರೂ ಆಯುಕ್ತರು ಪ್ರಶ್ನಿಸಿದ್ದಾರೆ.
ಇದೇ ಕಾರಣಕ್ಕೆ ಅವರು ಮತದಾರರ ಡೇಟಾಬೇಸ್ಗೆ ಸಂಬಂಧಿಸಿದ ಐಟಿ ವ್ಯವಸ್ಥೆಯ ಸ್ವತಂತ್ರ ಆಡಿಟ್, ಪ್ರವೇಶ ನಿಯಂತ್ರಣದ ಪರಿಶೀಲನೆ ಮತ್ತು ಕಾನೂನುಬದ್ಧ ಅಧಿಕಾರಿಗಳಿಗೆ ಸಂಪೂರ್ಣ ಆಕ್ಸೆಸ್ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಸೆ. 9ರಂದು ನಾಲ್ಕು ತಿಂಗಳ ಬಳಿಕ ಮೂವರು ಆಯುಕ್ತರ ಸಭೆ
ಈ ಸರಣಿ ಆಕ್ಷೇಪಗಳ ಬಳಿಕ ಸೆಪ್ಟೆಂಬರ್ 9ರಂದು ಮುಖ್ಯ ಚುನಾವಣಾ ಆಯ್ತುಕ್ತರಾದ ಜ್ಞಾನೇಶ್ ಕುಮಾರ್, ಸಂಧು ಮತ್ತು ಜೋಶಿ ಅವರ ಸಂಪೂರ್ಣ ಸಭೆ ನಡೆಯಿತು.
ನಾಲ್ಕು ತಿಂಗಳ ಬಳಿಕ ನಡೆದ ಆ ಸಭೆಯಲ್ಲಿ ಇಬ್ಬರು ಆಯುಕ್ತರು ಎತ್ತಿದ ವಿಷಯಗಳ ಕುರಿತು ಏನು ನಿರ್ಧಾರವಾಯಿತು ಎಂಬುದು ಸಾರ್ವಜನಿಕವಾಗಿ ಸ್ಪಷ್ಟವಾಗಿಲ್ಲ. 'ದಿ ಇಂಡಿಯನ್ ಎಕ್ಸ್ಪ್ರೆಸ್' ಈ ಕುರಿತು ಚುನಾವಣಾ ಆಯೋಗ ಮತ್ತು ಇಬ್ಬರು ಆಯುಕ್ತರಿಂದ ಪ್ರತಿಕ್ರಿಯೆ ಕೇಳಿದ್ದರೂ ವರದಿ ಪ್ರಕಟಿಸುವ ವೇಳೆಗೆ ಉತ್ತರ ಸಿಕ್ಕಿರಲಿಲ್ಲ.
ಆತಂರಿಕ ಭಿನ್ನಾಭಿಪ್ರಾಯ, ಸಾಫ್ಟ್ವೇರ್ ಆಕ್ಸೆಸ್ಗಷ್ಟೇ ಸೀಮಿತವಾಗದೆ ಇಬ್ಬರು ಚುನಾವಣಾ ಆಯುಕ್ತರು ಸುದೀರ್ಘ ಹತ್ತು ತಿಂಗಳ ಅವಧಿಯಲ್ಲಿ ಎತ್ತಿರುವ ಆಕ್ಷೇಪಗಳನ್ನು ಉಪೇಕ್ಷಿಸಿರುವುದೇಕೆ ಎಂಬ ಗಂಭೀರ ಪ್ರಶ್ನೆಯನ್ನು 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ದೇಶದ ಮುಂದಿರಿಸಿದೆ.


