ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ಹೈಕೋರ್ಟ್‌ನಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಏಕಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ನಿರ್ಧಾರ ಕಾನೂನುಬಾಹಿರವಾಗಿದೆ ಎಂದು ಹೇಳಲು ಸೂಕ್ತ ಆಧಾರಗಳಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯನ್ನು ಸಹ ಆರೋಪಿಗಳು ನೇರವಾಗಿ ಪ್ರಶ್ನಿಸಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದು ಆರೋಪಿ ಮತ್ತು ನ್ಯಾಯಾಲಯದ ನಡುವಿನ ಪ್ರಕ್ರಿಯೆಯಾಗಿದ್ದು, ಪ್ರಾಸಿಕ್ಯೂಷನ್ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. ಆದರೆ ವಿಚಾರಣೆ ವೇಳೆ ಪ್ರದೋಷ್ ಅವರ ಸಾಕ್ಷ್ಯವನ್ನು ಪಾಟೀ ಸವಾಲು ನಡೆಸಲು ದರ್ಶನ್ ಪರ ವಕೀಲರಿಗೆ ಸಂಪೂರ್ಣ ಅವಕಾಶವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಬೇಕಾದ ಪ್ರಶ್ನೆಗಳನ್ನು ಕೇಳಿ, ಅವುಗಳನ್ನು ಟ್ರಯಲ್ ಕೋರ್ಟ್ ಮುಂದೆ ಮಂಡಿಸಬಹುದು ಎಂದು ಸೂಚಿಸಿದೆ.

ಪ್ರದೋಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿ ಕೆಲವರ ಸಂಪರ್ಕಕ್ಕೆ ಬಂದಿದ್ದು, ಒತ್ತಡದ ಹಿನ್ನೆಲೆಯಲ್ಲಿ ಮಾಫಿ ಸಾಕ್ಷಿಯಾಗಿದ್ದಾರೆ ಎಂದು ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದಿಸಿದರು. ತನಿಖೆ ಪೂರ್ಣಗೊಳ್ಳುವವರೆಗೆ ಅವರ ಹೇಳಿಕೆ ದಾಖಲಿಸಬಾರದು ಎಂದು ಮನವಿ ಮಾಡಿದರು.

ಆದರೆ ಪ್ರಾಸಿಕ್ಯೂಷನ್ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಈ ವಾದವನ್ನು ವಿರೋಧಿಸಿದರು. ಪ್ರದೋಷ್ ಅಧಿಕೃತ ಲ್ಯಾಂಡ್ಲೈನ್ ಮೂಲಕ ತಮ್ಮ ಪತ್ನಿಯೊಂದಿಗೆ ಮಾತ್ರ ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು. ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ಸೆಷನ್ಸ್ ಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪಕ್ಕೆ ಕಾರಣವಿಲ್ಲ ಎಂದು ತೀರ್ಮಾನಿಸಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.