ನವೆಂಬರ್ 1ರಂದು ನವದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಜಾಥಾ ನಡೆಸಲು ಮುಂದಾಗಿದೆ. ವೋಟ್ ಬಚಾವೋ, ದೇಶ್ ಬಚಾವೋ (ಮತ ಉಳಿಸಿ, ದೇಶ ಉಳಿಸಿ) ಎನ್ನುವ ಈ ಜಾಥಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ ಇದೇ ವೇಳೆ ಒಂದಷ್ಟು ಕಠಿಣ ನಿಬಂಧನೆಗಳನ್ನು ಹೇರಿದೆ. ಸಂಜೆ 5 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸುವುದು ಹಾಗೂ ಉದ್ರೇಕಕಾರಿ ಭಾಷಣಗಳ ಮೇಲಿನ ನಿಷೇಧ ಸೇರಿದಂತೆ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ.

ಜಾಥಾ ಆರಂಭವಾಗುವ ಮೊದಲು ಅಥವಾ ನಂತರದಲ್ಲಿ ರಾಮಲೀಲಾ ಮೈದಾನದಲ್ಲಿ ರಾತ್ರಿ ತಂಗಲು ಯಾರಿಗೂ ಅವಕಾಶವಿಲ್ಲ ಎಂದು ಪೊಲೀಸರು ಷರತ್ತು ವಿಧಿಸಿದ್ದಾರೆ. ಇದನ್ನು ಉಲ್ಲಂಘಿಸಿದರೆ ಅಥವಾ ಪೋಲಿಸ್ ನಿರ್ದೇಶನಗಳನ್ನು ಪಾಲಿಸದಿದ್ದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ನೀಡಲಾದ ಅನುಮತಿಯನ್ನು ರದ್ದುಗೊಳಿಸಲಾಗುವುದು ಎಂದು ನೋಟಿಸ್ನಲ್ಲಿ ಎಚ್ಚರಿಕೆ ಕೊಡಲಾಗಿದೆ. 

ಪೊಲೀಸರು ವಿಧಿಸಿರುವ ಷರತ್ತುಗಳು ಯಾವುವು.?
ಪ್ರತಿಭಟನಾ ಸಮಾವೇಶವು ಶಾಂತಿಯುತವಾಗಿರಬೇಕು,ಅಲ್ಲಿ ಯಾವುದೇ ರೀತಿಯ ಹಿಂಸಾಚಾರ, ಸಾರ್ವಜನಿಕ ಶಾಂತಿಗೆ ಭಂಗ ಅಥವಾ ಗಲಾಟೆಗಳು ನಡೆಯಬಾರದು ಎಂದು ಪೊಲೀಸರು ಆಯೋಜಕರಿಗೆ ನಿರ್ದೇಶಿಸಿದ್ದಾರೆ. ಜಾಥಾ ಸಂಜೆ 5 ಗಂಟೆಗೆ ಸರಿಯಾಗಿ ಮುಕ್ತಾಯಗೊಳ್ಳಬೇಕು ಮತ್ತು ತಕ್ಷಣವೇ ಭಾಗವಹಿಸಿದವರು ಮೈದಾನದಿಂದ ನಿರ್ಗಮಿಸಲು ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕ್ರಮದ ಸಮಯವನ್ನು ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಇದೇ ವೇಳೆ ರಾಮಲೀಲಾ ಮೈದಾನದಿಂದ ದೆಹಲಿಯ ಇತರ ಭಾಗಗಳಿಗೆ ಯಾವುದೇ ರೀತಿಯ ಪ್ರದರ್ಶನ ಅಥವಾ ಪಾದಯಾತ್ರೆ ನಡೆಸಲು ಅನುಮತಿ ನೀಡಿಲ್ಲ. ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ವೇದಿಕೆ, ಆಸನ ವ್ಯವಸ್ಥೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ-ಡೆಫಿನಿಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರೆಕಾರ್ಡಿಂಗ್ ಸೌಲಭ್ಯ ಹಾಗೂ ಕನಿಷ್ಠ 5 ಮಾನಿಟರ್ಗಳನ್ನು ಹೊಂದಿರುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಬೇಕು ಎಂಬುದನ್ನೂ ಪೊಲೀಸರು ತಮ್ಮ ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.
 

ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಹಾಗೂ ‘ಫಾರ್ಮ್ 6’ ರಲ್ಲಿ ಅಕ್ರಮ ತಿದ್ದುಪಡಿ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಮತದಾರರ ಪಟ್ಟಿಪರಿಷ್ಕರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಇಂಡಿಯಾ ಒಕ್ಕೂಟ ಒತ್ತಾಯಿಸುತ್ತಿದೆ.