ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕಬಡ್ಡಿ ಪಡೆ ಹೊಸ ಇತಿಹಾಸ ಬರೆದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಬಲಶಾಲಿ ಇರಾನ್ ತಂಡಕ್ಕೆ ಸೋಲುಣಿಸಿದ ಭಾರತೀಯ ನಾರಿಯರು, ಜಿದ್ದಾಜಿದ್ದಿನ ಹೋರಾಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಆರಂಭದಿಂದಲೇ ಎರಡೂ ತಂಡಗಳ ನಡುವೆ ಭಾರೀ ಪೈಪೋಟಿ ಇತ್ತು. ಮೊದಲಾರ್ಧದ ವೇಳೆಗೆ ಭಾರತ 22-16 ಅಂಕಗಳಿಂದ ಸಣ್ಣ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಕಡೆಯಿಂದ ಕಠಿಣ ಸವಾಲು ಎದುರಾದರೂ, ಕೊನೆ ಹಂತದಲ್ಲಿ ಚಾಣಾಕ್ಷ ಆಟ ಪ್ರದರ್ಶಿಸಿದ ಭಾರತೀಯ ಆಟಗಾರರು 37-34 ಅಂಕಗಳ ರೋಚಕ ಅಂತರದಲ್ಲಿ ಪಂದ್ಯವನ್ನು ಗೆದ್ದಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಮಹಿಳಾ ಕಬಡ್ಡಿ ತಂಡ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಪ್ರಾಬಲ್ಯ ಮೆರೆದು 4ನೇ ಬಾರಿಗೆ ಬಂಗಾರದ ಪದಕಕ್ಕೆ ಮುತ್ತಿಕ್ಕಿದೆ.

ಮಹಿಳಾ ಕಬಡ್ಡಿ ತಂಡ ತಂದುಕೊಟ್ಟ ಈ ಬಂಗಾರ ಭಾರತಕ್ಕೆ ಸಿಕ್ಕ 3ನೇ ಚಿನ್ನದ ಪದಕವಾಗಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 27ಕ್ಕೆ ಏರಿದೆ. 3 ಚಿನ್ನ, 11 ಬೆಳ್ಳಿ ಹಾಗೂ 13 ಕಂಚು ಈವರೆಗೂ ಪಡೆದ ಪದಕಗಳು. ಪ್ರಸ್ತುತ ಭಾರತ ಪದಕಗಳ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದು, ಇನ್ನು ಹಲವು ಪ್ರಮುಖ ಕ್ರೀಡೆಗಳು ಬಾಕಿ ಇರುವ ಕಾರಣ ಭಾರತದ ಪದಕಗಳ ಬೇಟೆ ಮತ್ತಷ್ಟು ಹೆಚ್ಚಾಗುವ ಎಲ್ಲ ನಿರೀಕ್ಷೆಗಳಿವೆ.