ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. 2023ರಲ್ಲಿ ಪಠಾಣ್, ಜವಾನ್ ಮತ್ತು ಡಂಕಿ ಯಶಸ್ಸಿನ ನಂತರ ಸುಮಾರು ಎರಡು ವರ್ಷಗಳ ಗ್ಯಾಪ್ ತೆಗೆದುಕೊಂಡಿದ್ದ ಎಸ್‌ಆರ್‌ಕೆ, ಇದೀಗ ತಮ್ಮ ಬಹುನಿರೀಕ್ಷಿತ 'ಕಿಂಗ್' ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.   

ಶಾರುಖ್ ಅವರ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಅದರಲ್ಲಿ ಅವರು ಧಗಧಗನೆ ಉರಿಯುವ ಬೆಂಕಿಯ ನಡುವೆ, ಕೈಯಲ್ಲಿ ಗನ್ ಹಿಡಿದು ರಗಡ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದರೆ, ಒಂದು ಕೈಯಲ್ಲಿ ಗನ್ ಇದ್ದರೆ ಬಾಯಲ್ಲಿ ಗುಲಾಬಿ ಹೂವು ಇಟ್ಟುಕೊಂಡಿರುವುದು ಅಭಿಮಾನಿಗಳಿಗೆ ಭಾರೀ ಕಿಕ್ ಕೊಟ್ಟಿದೆ. ಅದರ ಜೊತೆಗೆ ಪೋಸ್ಟರ್‌ನಲ್ಲಿ ಮೂಡಿಬಂದಿರುವ "ನಾನು ಕೊಲೆಗಾರನಲ್ಲ, ಪ್ರೇಮಿ" ಎಂಬ ಲೈನ್ ಸಿನಿಮಾ ಮೇಲಿನ ಕುತೂಹಲವನ್ನು ಡಬಲ್ ಮಾಡಿದೆ. ಇಷ್ಟೇ ಅಲ್ಲದೆ 'Do Not Open' ಎಂದು ಬರೆದಿರುವ ಶವಪೆಟ್ಟಿಗೆ ಮಾದರಿಯ ಬಾಕ್ಸ್ ಸಹ ಕಥೆಯ ಬಗ್ಗೆ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.   

ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಮಗಳು ಸುಹಾನಾ ಖಾನ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಅವರಂತಹ ದೊಡ್ಡ ತಾರಾಗಣವೇ ಜತೆಗಿದೆ. ಸುಮಾರು 450 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಆಕ್ಷನ್ ಥ್ರಿಲ್ಲರ್‌ಗೆ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಇದ್ದು, ಸಿನಿಮಾ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 24, 2026 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. SRK ಫ್ಯಾನ್ಸ್ ಅಂತೂ ಈ ಮಾಸ್ ಆಕ್ಷನ್ ಹಬ್ಬ ನೋಡಲು ಕಾತರದಿಂದ ಕಾಯುತ್ತಿದ್ದಾರೆ.