ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಆನೆ ಶಿಬಿರದ ಈ ಮಹೇಂದ್ರ ಆನೆಗೆ ಸುಮಾರು 42 ವರ್ಷವಾಗಿದೆ. ಅಂಬಾರಿ ಹೊರುವ ಈ ಕಠಿಣ ಜವಾಬ್ದಾರಿಯನ್ನು ಹೊತ್ತುಕೊಂಡು ಇದು ತರಬೇತಿ ಪಡೆಯುತ್ತಿತ್ತು. ಆದರೆ ಮಹೇಂದ್ರ ಆನೆ ಮರದ ಅಂಬಾರಿ ಹೊರುವಲ್ಲಿ ಎರಡನೇ ಬಾರಿಗೆ ವಿಫಲಾಗಿದೆ. ಕೇವಲ ಐದು ಕಿಲೋಮೀಟರ್ಗಳ ತಾಲೀಮು ಮಾರ್ಗದಲ್ಲೇ ಮುಂದೆ ಸಾಗಲು ಹಿಂದೇಟು ಹಾಕಿದೆ. ಇದರಿಂದ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಿಂದ ಮಹೇಂದ್ರ ಆನೆಯನ್ನು ಕೈಬಿಡಲಾಗಿದೆ.
ಈ ಬಗ್ಗೆ ಮಾತನಾಡಿರುವ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಜಿ. ಪ್ರಭುಗೌಡ, ಮಹೇಂದ್ರ ಆನೆಯನ್ನು ಅಂಬಾರಿ ಆನೆಯಾಗಿ ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದಾರೆ. ಮಹೇಂದ್ರನಿಗೆ ಅಂಬಾರಿ ಹೊರುವುದು ಆರಾಮದಾಯಕವೆನಿಸುತ್ತಿಲ್ಲ. ಆನೆಗೆ ಆರಾಮದಾಯಕವಾಗಿಲ್ಲದಿದ್ದರೆ, ಅದನ್ನು ಬಲವಂತವಾಗಿ ಮುಂದುವರಿಯುವಂತೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹೇಂದ್ರ ಆನೆಗೆ ಇದೆಯಾ ಸಮಸ್ಯೆ.?
ಮಹೇಂದ್ರ ಆನೆಯಲ್ಲಿ ಮೇಲ್ನೋಟಕ್ಕೆ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲ. ಆದರೂ ದೈಹಿಕವಾಗಿ ಅನಾದರೂ ತೊಂದರೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಜೊತೆಗೆ ಇತರ ನಾಲ್ಕು ಗಂಡಾನೆಗಳಾದ ಧನಂಜಯ, ಪ್ರಶಾಂತ, ಸುಗ್ರೀವ ಮತ್ತು ಏಕಲವ್ಯ ಅಂಬಾರಿ ಹೊರಲು ಸಿದ್ಧವಾಗಿವೆ. ಇವುಗಳಲ್ಲಿ ಒಂದು ಆನೆಯನ್ನು ಚಿನ್ನದ ಅಂಬಾರಿ ಹೊರಲು ಆಯ್ಕೆ ಮಾಡಲಾಗುವುದು ಎಂದು ಪ್ರಭುಗೌಡ ಹೇಳಿದ್ದಾರೆ.
ಅಂಬಾರಿ ಹೊರುವ ತರಬೇತಿ ಹೇಗಿರುತ್ತೆ.?
ಇಲ್ಲಿ ಅಂಬಾರಿ ಹೊರುವ ಆನೆಗಳಿಗೆ ಅತ್ಯಂತ ಕಠಿಣವಾದ ತರಬೇತಿ ಕೊಡಲಾಗುತ್ತೆ. ಅದರ ಭಾಗವಾಗಿ ಚಿನ್ನದ ಅಂಬಾರಿಯಷ್ಟೇ ಭಾರವಿರುವ ಮರದ ಅಂಬಾರಿಯನ್ನು ಬಳಸಲಾಗುತ್ತೆ. ಅದರಂತೆ ಮಹೇಂದ್ರ ಆನೆಗೂ ತರಬೇತಿ ನೀಡಲಾಗುತ್ತಿತ್ತು. ಅರಮನೆಯ ಆವರಣದಿಂದ ಮಹೇಂದ್ರನ ತಾಲೀಮು ಆರಂಭವಾದ ಬಳಿಕ, ಸುಮಾರು 1,000 ಕೆ.ಜಿ. ತೂಕದ ಮರದ ಅಂಬಾರಿ, ಮರಳು ಚೀಲಗಳು ಮತ್ತು ಇತರ ಪರಿಕರಗಳನ್ನು ಹೊರಿಸಿ ನಡೆಸಲಾಗುತ್ತಿತ್ತು. ನಿನ್ನೆ ಸಂಜೆ ಕೂಡಾ ಸುಮಾರು 5 ಗಂಟೆಗೆ ಅರಮನೆಯ ಆವರಣದಲ್ಲಿ ತಾಲೀಮು ಆರಂಭವಾಯಿತು. ನಿಗದಿತ ಮಾರ್ಗದಲ್ಲಿ ಬನ್ನಿಮಂಟಪದತ್ತ ಮಹೇಂದ್ರ ಸಾಗತೊಡಗಿತು. ಆದರೆ, ಮಾರ್ಗದುದ್ದಕ್ಕೂ ಹಲವು ಕಡೆಗಳಲ್ಲಿ ಅದು ಮುಂದೆ ಸಾಗಲು ಹಿಂದೇಟು ಹಾಕಿತು.
ಮೊದಲಿಗೆ ಕೆ.ಆರ್. ವೃತ್ತದ ಪ್ರವೇಶದ್ವಾರದ ಬಳಿಯೇ ನಿಂತ ಮಹೇಂದ್ರ ಆನೆ ಸುಧಾರಿಸಿಕೊಳ್ಳಲು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿತು. ಬಳಿಕ ಮತ್ತೆ ನಡೆಯಲು ಆರಂಭ ಮಾಡಿತು. ಆದರೂ ಕೆಲವೇ ಮೀಟರ್ಗಳ ದೂರದಲ್ಲಿ ಮತ್ತೊಮ್ಮೆ ನಿಂತು ಸುಮಾರು ಹತ್ತು ನಿಮಿಷ ಅಲ್ಲಿಯೇ ಉಳಿಯಿತು. ಆನೆಯು ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಾಲೀಮನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು. ಮರದ ಅಂಬಾರಿ, ಮರಳು ಚೀಲಗಳು ಮತ್ತು ಇತರ ಪರಿಕರಗಳನ್ನು ಕೆ.ಆರ್. ಆಸ್ಪತ್ರೆ ವೃತ್ತದ ಸಮೀಪ ಅರ್ಧದಲ್ಲೇ ಕೆಳಗಿಳಿಸಬೇಕಾಯಿತು. ಬಳಿಕ ಈ ಸಾಮಗ್ರಿಗಳನ್ನು ಸರಕು ಸಾಗಣೆ ವಾಹನದಲ್ಲಿ ಮರಳಿ ಅರಮನೆಗೆ ಸಾಗಿಸಲಾಯಿತು. ದಸರಾಗೆ ಉಳಿದಿರುವುದು ಇನ್ನು ಕೆಲವೇ ದಿನಗಳಾಗಿದ್ದು ಯಾವ ಆನೆ ಸೂಕ್ತ ತರಬೇತಿ ಪಡೆದುಕೊಂಡು ಅಂಬಾರಿ ಹೊರಲಿಗೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
