ನವರಾತ್ರಿ ಏಳನೇ ದಿನದಂದು ಕಾಳರಾತ್ರಿ ದೇವಿ ಅಥವಾ ಕಾಳಿದೇವಿಯನ್ನು ಪೂಜಿಸಲಾಗುತ್ತದೆ. ಈಕೆಯನ್ನು ದುರ್ಗಾ ದೇವಿಯ ಉಗ್ರ ರೂಪವೆಂದು ಕರೆಯಲಾಗುತ್ತದೆ. ದುರ್ಗಾ ದೇವಿಯ ಈ ಕಾಳರಾತ್ರಿ ರೂಪವು ಮನುಷ್ಯನ ಜೀವನದಿಂದ ಕತ್ತಲೆ ಮತ್ತು ಭಯವನ್ನು ದೂರ ಮಾಡುತ್ತಾಳೆ ಎಂದು ನಂಬಲಾಗಿದೆ. ಅಜ್ಞಾನವನ್ನು ನಾಶ ಮಾಡುವ, ಕೆಟ್ಟದರ ವಿರುದ್ಧ ವಿಜಯವನ್ನು ಸಂಕೇತಿಸುತ್ತಾಳೆ. ಈಕೆಯನ್ನು ಆರಾಧನೆ ಮಾಡುವುದರಿಂದ ತನ್ನ ಭಕ್ತರನ್ನು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತಾಳೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತಾಳೆ.

ಕಾಳಿದೇವಿಯ 3 ಕಣ್ಣುಗಳು ಹಾಗೂ 4 ಕೈಗಳನ್ನು ಹೊಂದಿದ್ದು, ಕತ್ತೆಯ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಾಳೆ. ಬಲಗೈಯಲ್ಲಿ ವರ್ಮುದ್ರ ಮತ್ತು ಅಭಯಮುದ್ರ ಭಂಗಿಗಳಲ್ಲಿ, ಆಕೆ ಭಕ್ತರಿಗೆ ಆಶೀರ್ವಾದ ಮತ್ತು ರಕ್ಷಣೆಯನ್ನು ನೀಡುತ್ತಾಳೆ. ಎಡಗೈಯಲ್ಲಿ ಕಬ್ಬಿಣದ ಖಡ್ಗ ಮತ್ತು ಕತ್ತಿ ಹಿಡಿದಿದ್ದಾಳೆ. ಕಡು ಕಪ್ಪು ಮೈಬಣ್ಣವನ್ನು ಹೊಂದಿರುವ ಈಕೆಯ ದಿನದಂದು ನಾವು ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಅವಳ ನಾಲಿಗೆಯನ್ನು ಹೆಚ್ಚಾಗಿ ಅವಳ ಬಾಯಿಯಿಂದ ಚಾಚಿಕೊಂಡಿರುವುದನ್ನು ತೋರಿಸಲಾಗುತ್ತದೆ ಮತ್ತು ಜ್ವಾಲೆಗಳು ಕೆಲವೊಮ್ಮೆ ಅವಳನ್ನು ಸುತ್ತುವರೆದಿರುತ್ತವೆ, ಇದು ಅವಳ ಉರಿಯುತ್ತಿರುವ ಸ್ವಭಾವ ಮತ್ತು ದುಷ್ಟತನವನ್ನು ಸುಡುವ ಸಾಮರ್ಥ್ಯವನ್ನು ಸಂಕೇತಿಸುತ್ತದೆ.

ಯಾರು ಈ ಕಾಳಿದೇವಿ.?
ರಕ್ತಬೀಜಾಸುರನನ್ನು ಸಂಹಾರ ಮಾಡುವುದಕ್ಕಾಗಿ ದುರ್ಗಾ ದೇವಿಯು ಕಾಳರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ದಂತಕಥೆಯ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಇದರಿಂದ ಆತಂಕಗೊಂಡ ದೇವತೆಗಳೆಲ್ಲಾ ಶಿವನ ಬಳಿ ಕಾಪಾಡುವಂತೆ ಬೇಡಿಕೊಳ್ಳುತ್ತಾರೆ. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ದುರ್ಗಾ ದೇವಿಯು ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು.

ದೇವಿಯ ಉಗ್ರ ರೂಪವಾದ ಕಾಳರಾತ್ರಿ ದೇವಿಯ ಆರಾಧನೆಗೆ ಸಮರ್ಪಿತವಾಗಿದೆ. ಈ ದಿನವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಭೌತಿಕ ಮತ್ತು ಆಧ್ಯಾತ್ಮಿಕ ಕತ್ತಲೆಯ ನಾಶವನ್ನು ಸೂಚಿಸುತ್ತದೆ. ಕಪ್ಪು ಬಣ್ಣ ಮತ್ತು ನಿರ್ಭೀತ ನಡವಳಿಕೆಯೊಂದಿಗೆ ಕಾಳರಾತ್ರಿ ದೇವಿಯು ಭಯ ಮತ್ತು ನಕಾರಾತ್ಮಕತೆಯನ್ನು ತೊಡೆದುಹಾಕುವ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ. ಅವಳನ್ನು ಪೂಜಿಸುವುದರಿಂದ ಭಕ್ತರನ್ನು ಹಾನಿಯಿಂದ ರಕ್ಷಿಸುತ್ತದೆ, ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ಅವರಿಗೆ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ

ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಭತ್ತು ಅವತಾರಗಳನ್ನು ನೆನೆದು ಪೂಜೆ ಮಾಡುವುದು ಮನೆಗೆ ಸುಖ, ಶಾಂತಿ, ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತದೆ. ತಾಯಿಗೆ ಅರ್ಪಿಸುವ ಪ್ರಸಾದವು ಹಾಲು, ಜೇನುತುಪ್ಪವನ್ನು ಒಳಗೊಂಡಿದ್ದರೇ ಒಳ್ಳೆಯದು. ಪಾಯಸವೂ ಕೂಡ ಶ್ರೇಷ್ಠವೇ. ಮನುಷ್ಯನಿಗೆ ದುಃಖ, ನೋವು, ವಿನಾಶ ಮತ್ತು ಸಾವನ್ನು ಎಂದಿಗೂ ತಪ್ಪಿಸಲಾಗದು. ಅದು ಯಾರನ್ನೂ ಬಿಡುವುದಿಲ್ಲ. ಇವು ಜೀವನದ ಕಹಿ ಸತ್ಯಗಳು ಮತ್ತು ಅವುಗಳನ್ನು ನಿರಾಕರಿಸುವುದು ಅಸಾಧ್ಯ ಎಂಬುದನ್ನು ತಾಯಿ ಅರ್ಥ ಮಾಡಿಸುತ್ತಾಳೆ. ಇನ್ನು ತಾಯಿ ಕಾಲರಾತ್ರಿಯ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ ಧೈರ್ಯ ತುಂಬಿಕೊಳ್ಳುತ್ತದೆ.

ಕಾಳಿಮಾತೆಗೆ ಏನನ್ನು ಅರ್ಪಿಸಬೇಕು?
ನವರಾತ್ರಿಯ ಏಳನೇ ದಿನದಂದು ದೇವಿಗೆ ಖೀರ್ನ್ನು ನೈವೇದ್ಯ ಮಾಡಬೇಕು. ಮಾತೃ ದೇವತೆಗೆ ಆಯಾ ಋತುಮಾನಕ್ಕೆ ದೊರೆಯುವ ಹಣ್ಣುಗಳನ್ನು ಸಹ ಅರ್ಪಿಸಬಹುದು. ಸಂಜೆ ಅಮ್ಮನಿಗೆ ಖಿಚಡಿ ನೈವೇದ್ಯ ಮಾಡಬೇಕು. ದೇವಿಯನ್ನು ಪೂಜಿಸುವ ಮೊದಲು, ಅವಳನ್ನು ಧ್ಯಾನಿಸುತ್ತಾ ಈ ಮಂತ್ರವನ್ನು ಪಠಿಸಿ.

ಯಾವ ಮಂತ್ರದಿಂದ ಆರಾಧಿಸಬೇಕು.?
 ಓಂ ದೇವೀ ಕಾಲರಾತ್ರೈ ನಮಃ
ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ್ ಮೂರ್ಧಂ ಧ್ವಜಾ ಕೃಷ್ಣ ಕಾಳರಾತ್ರಿ ಭಯಂಕರಿ.

ಪುರಾಣಗಳಲ್ಲಿ ಕಾಳರಾತ್ರಿಯನ್ನು ಶನಿ ಗ್ರಹ ಮತ್ತು ರಾತ್ರಿಯನ್ನು ನಿಯಂತ್ರಿಸುವ ದೇವತೆ ಎಂದು ಹೇಳಲಾಗಿದೆ. ತಾಯಿಯನ್ನು ಪೂಜಿಸುವುದರಿಂದ ಶನಿಯ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಸಪ್ತಮಿಯ ರಾತ್ರಿಯನ್ನು ಸಾಧನೆಗಳ ರಾತ್ರಿ ಎಂದು ಹೇಳಲಾಗುತ್ತದೆ ಮತ್ತು ಈ ದಿನ ತಾಂತ್ರಿಕ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.