ಗದಗದಲ್ಲಿ ನಿಜಕ್ಕೂ ತಲೆಬಾಗಿಸುವಂಥ ಘಟನೆಯೊಂದು ನಡೆದಿದೆ. ಕೆಲಸ ಮಾಡಿದ ಮೇಲೂ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗದಿದ್ದಕ್ಕೆ, ಇತ್ತ ಕಡೆ ಸಬ್-ಕಾಂಟ್ರಾಕ್ಟರ್‌ಗಳ ನಿರಂತರ ಕಿರುಕುಳ ತಾಳಲಾರದೆ ಕೆಆರ್‌ಐಡಿಎಲ್‌ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಫ ಫರ್ವೀಜ್ ಧಾರವಾಡ ಎಂಬುವವರು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ ಗದಗ ಜಿಲ್ಲೆಯಲ್ಲಿ ನಡೆದಿದ್ದ ಹಲವು ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರಬೇಕಿತ್ತು. ಆದರೆ ಎಷ್ಟು ದಿನ ಕಾದರೂ ಹಣ ಮಾತ್ರ ಕೈಸೇರಲಿಲ್ಲ. ಇದರಿಂದಾಗಿ ಇಂಜಿನಿಯರ್ ಫರ್ವೀಜ್ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಲೇ ಹೋಯಿತು.

ಫರ್ವೀಜ್ ಅವರು ಸೆಪ್ಟೆಂಬರ್ 12ರಂದೇ ತಮ್ಮ ಇಲಾಖೆಯ ಎಂ‌ಡಿ ಅವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಸರ್ಕಾರದಿಂದ ಅನುದಾನ ಬರದಿದ್ದಕ್ಕೆ ಸಬ್-ಕಾಂಟ್ರಾಕ್ಟರ್‌ಗಳು ಪ್ರತಿದಿನ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದಾರೆ. ಫೋನ್ ಮಾಡಿ ನೆಮ್ಮದಿ ಇಲ್ಲದಂತೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ತಲೆ ಕೆಟ್ಟು ಹೋಗಿದೆ, ಮಾನಸಿಕ ನೆಮ್ಮದಿಯೇ ಇಲ್ಲದಂತಾಗಿದೆ. ಈ ಪರಿಸ್ಥಿತಿ ನಿಭಾಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ, ಹಾಗಾಗಿ ಜೀವ ಕಳೆದುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಹೊಣೆ. ದಯವಿಟ್ಟು ನಮ್ಮ ಉಪವಿಭಾಗಕ್ಕೆ ತಕ್ಷಣ ಹಣ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಿ, ನನ್ನ ಕುಟುಂಬಕ್ಕೆ ಮಾತ್ರ ಯಾವುದೇ ತೊಂದರೆ ಕೊಡಬೇಡಿ ಎಂದು ನೋವಿನಿಂದ ಬರೆದಿದ್ದಾರೆ.

ಸೆಪ್ಟೆಂಬರ್ 13ರಂದು ಮೀಟಿಂಗ್ ಇದೆ ಎಂದು ಬೆಂಗಳೂರಿಗೆ ಹೊರಟಿದ್ದ ಫರ್ವೀಜ್, ಪತ್ನಿ ಸೆಗುಪ್ತಾರಿಗೆ ಕರೆ ಮಾಡಿ ಬೆಂಗಳೂರು ತಲುಪಿದ್ದಾಗಿ ಹೇಳಿದ್ದರು. ಆದರೆ ಅದಾದ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಗಾಬರಿಗೊಂಡ ಕುಟುಂಬದವರು ಆಫೀಸಿಗೆ ಕರೆ ಮಾಡಿ ವಿಚಾರಿಸಿದಾಗ ಅವರು ಅಲ್ಲಿಗೆ ತಲುಪೇ ಇಲ್ಲ ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ.

ಕೊನೆಗೆ ಬೇರೆ ದಾರಿ ಕಾಣದೆ, ಕುಟುಂಬಸ್ಥರು ಸೆಪ್ಟೆಂಬರ್ 16ರಂದು ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಕ್ಷಣವೇ ಸ್ಪೆಷಲ್ ಟೀಮ್ ಮಾಡಿ ಅವರನ್ನು ಹುಡುಕಿಕೊಡಿ, ಸರ್ಕಾರ ಅವರ ಸಮಸ್ಯೆಯನ್ನು ಬಗೆಹರಿಸಲಿ ಎಂದು ಕಂಗಾಲಾದ ಕುಟುಂಬಸ್ಥರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ. ಸದ್ಯಕ್ಕೆ ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಂಜಿನಿಯರ್ ಹುಡುಕಾಟ ತೀವ್ರಗೊಳಿಸಿದ್ದಾರೆ.