ನಮ್ಮ ದೇಶದಲ್ಲಿ ಕೆಲವೊಂದು ಕ್ರೀಡೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಸಿಗುವ ಪ್ರೋತ್ಸಾಹ ಮನ್ನಣೆ ಕೆಲ ಕ್ರೀಡೆಗಳಿಗೆ ಸಿಗಲ್ಲ.. ಆ ಕ್ರೀಡಾಪಟುಗಳಿಗೂ ದೊರಕಲ್ಲ. ಇದಕ್ಕೆ ಉತ್ತಮ ಉದಾಹರಣೆ ಏಷ್ಯಾನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಹೆಮ್ಮೆ ತಂದ ಕಬಡ್ಡಿ ಆಟಗಾರ್ತಿ ಸಂಜು ದೇವಿಗೆ ಆಗಿರುವ ಬೇಸರ. ಬಂಗಾರ ಗೆದ್ದು ತವರಿಗೆ ಮರಳಿದಾಗ ಅದ್ದೂರಿ ಸ್ವಾಗತ ಸಿಗದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. 

ಸಂಜು ದೇವಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕೇರಕಛಾರ್ ಗ್ರಾಮದವರು. 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ಸಂಜು ದೇವಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇರಾನ್ ವಿರುದ್ಧ 37-34 ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಅಷ್ಟಕ್ಕೂ ಸಂಜು ದೇವಿ ಅವರ ಕ್ರೀಡಾ ಪಯಣ ಸಾಮಾನ್ಯವಾಗಿರಲಿಲ್ಲ. ಗ್ರಾಮದ ಮೈದಾನಗಳಲ್ಲಿ ಕಬಡ್ಡಿ ಆಡುತ್ತಾ ಬೆಳೆದ ಅವರು, ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದವರು. ಏಷ್ಯನ್ ಗೇಮ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದು ಮಿಂಚಿದವರು. ಭಾರತದ ಪರ ಚಿನ್ನದ ಪದಕ ಗೆದ್ದ ಬಳಿಕ ಸಂಜು ತವರಿಗೆ ಮರಳಿದಾಗ ದೊಡ್ಡ ಮಟ್ಟದ ಸಾರ್ವಜನಿಕ ಸ್ವಾಗತ ಅಥವಾ ಸಂಭ್ರಮಾಚರಣೆ ಕಂಡುಬರಲಿಲ್ಲ ಎನ್ನಲಾಗಿದೆ. ಅವರು ಸರಳವಾಗಿ ಮನೆಗೆ ಮರಳಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಸಂಜುದೇವಿ ಸಾಧನೆಯನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅಭಿನಂದಿಸಿದ್ದಾರೆ. ಅಲ್ಲದೆ, ಅವರ ಸಾಧನೆಗೆ 51 ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಪದಕ ಗೆದ್ದ ಬಳಿಕ ತವರಿಗೆ ಮರಳಿದ ಸಂದರ್ಭದಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಸ್ವಾಗತ ಸಿಗಲಿಲ್ಲ ಎಂಬ ವಿಚಾರ ಕ್ರೀಡಾಭಿಮಾನಿಗಳಲ್ಲಿ ಬೇಸರ ತರಿಸಿದೆ. ಗ್ರಾಮೀಣ ಪ್ರದೇಶಗಳಿಂದ ಬರುವ ಪ್ರತಿಭಾವಂತ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟ ತಲುಪಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಸಾಂಜು ದೇವಿಗೆ ಈಗ ಸರಿಯಾದ ಗೌರವ ಸಿಗದಂತಾಗಿದೆ. ಇದೀಗ ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಪ್ರತಿಭೆ ಬೆಳೆಸುತ್ತಿರುವ ಆಟಗಾರರಿಗೂ ಸೂಕ್ತ ಪ್ರೋತ್ಸಾಹ, ಮೂಲಸೌಕರ್ಯ ಮತ್ತು ಗುರುತಿಸುವಿಕೆ ಸಿಗಬೇಕೆಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಸಂಜು ದೇವಿ ಸಾಧನೆ ದೇಶಕ್ಕೆ ಹೆಮ್ಮೆ ತಂದಿದ್ದರೂ, ಅವರು ತವರಿಗೆ ಮರಳಿದ ಸಂದರ್ಭದಲ್ಲಿ ಅವರುರಿಗದೆ ಸರಿಯಾದ ಗೌರವ ದೊರಕದೇ ಹೋಗಿರುವುದು ವಿಷಾದನೀಯ. ಒಂದೇ ದೇಶಕ್ಕಾಗಿ ಚಿನ್ನ ಗೆಲ್ಲುವ ಗ್ರಾಮೀಣ ಕ್ರೀಡಾಪಟುಗಳಿಗೆ ಇನ್ನಷ್ಟು ಗೌರವ ಮತ್ತು ಪ್ರೋತ್ಸಾಹ ಸಿಗಬೇಕಲ್ಲವೇ ಎಂದು ದೇಶದ ಜನರು ಕೇಳುತ್ತಿದ್ದಾರೆ.