ತಮಿಳುನಾಡಿನಲ್ಲಿ ಟಿವಿಕೆ ಮತ್ತು ಡಿಎಂಕೆ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ರಾಜಕೀಯ ಸಮರ ಶುರುವಾಗಿದೆ.ಅಚ್ಚರಿ ಎಂದರೆ ಹಿಂದುತ್ವ ಹಾಗೂ ಹಿಂದೂ ದೇವರುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಈಗ ಹಿಂದೂ ದೇವತೆ ಕಾಳಿ ಮಾತೆಯ ಜಪ ಮಾಡಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ತಮಿಳುನಾಡಿನಲ್ಲಿ ಸದ್ಯ ಮುಖ್ಯಮಂತ್ರಿ ವಿಜಯ್ ಅಲೆ ಜೋರಾಗುತ್ತಿದೆ. ಇದರ ಹುಮ್ಮಸ್ಸಿನಲ್ಲಿರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಅದನ್ನು ಬೇರೆಯದ್ದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ತಮ್ಮ ರಾಜಕೀಯ ಜಾಥಾಗಳಲ್ಲಿ ಡಿಎಂಕೆಯನ್ನು ಗುರಿಯಾಗಿಸಿಕೊಂಡು ಡಿಎಂಕೆ ಒರು ಥೀಯಾ ಶಕ್ತಿ ಎಂದರೆ ಡಿಎಂಕೆ ಒಂದು ದುಷ್ಟ ಶಕ್ತಿ ಎಂಬ ಘೋಷಣೆ ಮಾಡುತ್ತಿದ್ದಾರೆ. ಇದೀಗ ಇದಕ್ಕೆ ಪ್ರತಿಯಾಗಿ ಓಂ ಕಾಳಿ, ಜೈ ಕಾಳಿ ಟಿವಿಕೆ ಒರು ಓಡುಗಾಳಿ ಎಂದರೆ ಟಿವಿಕೆ ಓಡಿಹೋಗುವವರು ಎಂಬ ಹೊಸ ಘೋಷಣೆಯನ್ನು ಉದಯನಿಧಿ ರೂಪಿಸಿದ್ದರೆ. ಕಾರ್ಯಕರ್ತರೊಂದಿಗೆ ಸೇರಿ ಘೋಷಣೆ ಮೊಳಗಿಸಿದ್ದು, ಅಲ್ಲದೆ, ಪಕ್ಷದ ಮುಖ್ಯಸ್ಥರ ಹೆಸರನ್ನು ಉಲ್ಲೇಖಿಸದೆ ಈ ಘೋಷಣೆಯನ್ನು ಜನರ ಬಳಿಗೆ ಕೊಂಡೊಯ್ಯುವಂತೆ ಸೂಚಿಸಿದರು.

ನಾವು ಅವರ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ. ಅವರ ಪಕ್ಷದ ಹೆಸರಿನೊಂದಿಗೆ ಓಂ ಕಾಳಿ, ಜೈ ಕಾಳಿ ಎಂದು ಹೇಳಿ ಎಂದು ಕಾರ್ಯಕರ್ತರಿಗೆ ಉದಯನಿಧಿ ಕರೆ ಕೊಟ್ಟಿದ್ದಾರೆ. ನೀವು ಪ್ರತಿ ಚುನಾವಣಾ ಜಾಥಾದಲ್ಲೂ ಸಾರ್ವಜನಿಕರನ್ನು ಭೇಟಿಯಾದಾಗಲೆಲ್ಲಾ ಇದನ್ನೇ ಹೇಳುತ್ತಾ ಇರಿ ಈ ಮೂಲಕ ಅದನ್ನು ಜನರ ಮನಸ್ಸಿನಲ್ಲಿ ದೃಢವಾಗಿ ಬೇರೂರುವಂತೆ ಮಾಡಿ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಈ ಹಿಂದೆ ಇದೇ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು. ಅಲ್ಲದೇ ಇದನ್ನು ಕೇವಲ ವಿರೋಧಿಸುವುದಷ್ಟೇ ಅಲ್ಲ, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅದಕ್ಕೂ ಮೊದಲು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಗಳು ಹೊರಗಿನಿಂದ ಬಂದವು ಆದರೆ ಹಿಂದೂ ದರ್ಮ ಯಾವಾಗ ಹುಟ್ಟಿತು ಎಂಬುದೇ ಗೊತ್ತಿಲ್ಲ ಎಂದಿದ್ದರು. ಈ ಮೂಲಕ ವಿವಾದವನ್ನು ಮೈ ಮೇಲೆ ಎಳೆದು ಕೊಂಡಿದ್ದರು. ಆದರೆ ಇದೀಗ ಇವರದ್ದೇ ಬಾಯಲ್ಲಿ ಓಂ ಕಾಳಿ- ಜೈ ಕಾಳಿ ಕೇಳಿ ಬಂದಿರುವುದು ಹಿಂದೂಗಳ ಓಲೈಕೆಗಾ ಎನ್ನುವ ಪ್ರಶ್ನೆ ಕಾಡತೊಡಗಿದೆ.