ತಮ್ಮ ಖಾತೆಗೆ ರಾಜೀನಾಮೆ ನೀಡಿದ ಬಳಿಕ ಬಹುತೇಕ ಮೌನವಾಗಿದ್ದ ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರೋಧ ಪಕ್ಷದ ವಿರುದ್ಧ ಗುಡುಗಿದ್ದಾರೆ. SIR ಪ್ರಕ್ರಿಯೆಯನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿರುವ ಇಂಡಿಯ ಒಕ್ಕೂಟದ ವಿರುದ್ಧವೂ ಕಿಡಿ ಕಾರಿದ್ದಾರೆ. ಅದರಲ್ಲೂ ರಾಹುಲ್ ಗಾಂಧಿ ಬಗ್ಗೆ ಟೀಕಾಪ್ರಹಾರವನ್ನೇ ನಡೆಸಿದ್ದಾರೆ. ರಾಜಕೀಯ ಅವಕಾಶವಾದಕ್ಕೆ ಮತ್ತೊಂದು ಹೆಸರೇ ರಾಹುಲ್ ಗಾಂಧಿ ಎಂದು ಛೇಡಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಡುವವರಿಗೆ ಇತಿಹಾಸವೇ ತಕ್ಕ ಪಾಠ ಕಲಿಸಿದೆ ಎಂದ ಪ್ರಧಾನ್ ದೇಶದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಗಳು ಎಂದಿಗೂ ಚೌಕಾಸಿಗೆ ಒಳಪಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನೆನಪಿಟ್ಟುಕೊಳ್ಳಬೇಕು ಎಂದು ಧರ್ಮೇಂದ್ರ ಪ್ರಧಾನ್ ಎಚ್ಚರಿಸಿದ್ದಾರೆ.

ರಾಹುಲ್ ಗಾಂಧಿ ಹೋರಾಟವೇ ಹಾಗೇ..ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡುತ್ತಾರೆ.,ಸ್ವತಃ ಭಾರತೀಯ ಒಕ್ಕೂಟ ವ್ಯವಸ್ಥೆಯ ವಿರುದ್ಧವೇ ಹೋರಾಟ ಘೋಷಿಸುವವರೆಗೆ ರಾಹುಲ್ ಗಾಂಧಿಯವರ ಆದ್ಯತೆಗಳು ಯಾವಾಗಲೂ ಅನುಮಾನಾಸ್ಪದವಾಗಿ ಕಾಣಿಸುತ್ತವೆ ಎಂದು ಹರಿಹಯ್ಜಿದ್ದಾರೆ. ಈ ಹಿಂದೆ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕಾಂಗ್ರೆಸ್ ಪಕ್ಷವೇ ವಿರೋಧಿಸಿದ್ದ ಪ್ರಮುಖ ವಿಚಾರವೊಂದರಲ್ಲಿ, ಈಗ ತನ್ನ ನಿಲುವನ್ನು ಸಂಪೂರ್ಣವಾಗಿ ಉಲ್ಟಾ ಮಾಡಿದೆ. ರಾಜಕೀಯ ಅನುಕೂಲಕ್ಕಾಗಿ ತತ್ವ ಮತ್ತು ಸಿದ್ಧಾಂತಗಳನ್ನು ಬಲಿಕೊಡಲು ಸಾಧ್ಯವಿಲ್ಲ. ಕೇವಲ ಒಂದು ವರ್ಷದಲ್ಲಿ ಕಾಂಗ್ರೆಸ್ನ ಈ ಬದಲಾವಣೆಗೆ ಕಾರಣವೇನು?” ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು ದೃಢ ನಿಲುವು ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಎಂದಿಗೂ ಯಾವುದೇ ಬಾಹ್ಯ ಒತ್ತಡಕ್ಕೆ ಮಣಿಯುವುದಿಲ್ಲ. ಯಾವುದೇ ರಾಜಕೀಯ ಉದ್ದೇಶ ಅಥವಾ ಪ್ರಚೋದನೆಗಳು ದೇಶದ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲ್ಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. 

ದೇಶವು ಜಾಗತಿಕ ಕಂಪನಿಗಳು, ಇನೋವೇಶನ್ ಮತ್ತು ಹೂಡಿಕೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತದೆ. ದೇಶದ ಕಾನೂನು ಮತ್ತು ಭದ್ರತಾ ನಿಯಮಗಳನ್ನು ಗೌರವಿಸುವ ಉದ್ಯಮಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳಿವೆ. ಆದರೆ, ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಯಾವುದನ್ನೂ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಧಾನ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.