ಇನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ಈ ಬಾರಿ ವಿಶೇಷ ಆಕರ್ಷಣೆ ಇತ್ತು. ಭಕ್ತರಿಂದ ಸಂಗ್ರಹಿಸಿದ ಸುಮಾರು 3 ಲಕ್ಷ ಮೌಲ್ಯದ ಹೊಸ ನೋಟುಗಳಿಂದ ದೇವಿಗೆ ಅತ್ಯಾಕರ್ಷಕ 'ಧನಲಕ್ಷ್ಮಿ' ಅಲಂಕಾರ ಮಾಡಲಾಗಿತ್ತು. 10, 50, 100 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಗರ್ಭಗುಡಿಯ ಸುತ್ತ ಕಲಾತ್ಮಕವಾಗಿ ಜೋಡಿಸಿದ್ದು ಎಲ್ಲರ ಗಮನ ಸೆಳೆಯಿತು.

ಇಂದು ಹಬ್ಬದ ಪ್ರಯುಕ್ತ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ಅಮ್ಮನ ದೇವಸ್ಥಾನ ಹಾಗೂ ಮಹಾಲಕ್ಷ್ಮಿ ಲೇಔಟ್ನ ಲಕ್ಷ್ಮಿ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಬರೀ ರಾಜಧಾನಿಯಷ್ಟೇ ಅಲ್ಲದೆ, ರಾಜ್ಯದ ಪ್ರಮುಖ ಶಕ್ತಿಪೀಠಗಳಲ್ಲೂ ದೇವಿಗೆ ಅಭಿಷೇಕ ಮತ್ತು ಸುಂದರ ಅಲಂಕಾರಗಳನ್ನು ಮಾಡಲಾಗಿದೆ.

ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತಾಯಿಗೆ ಬಣ್ಣ ಬಣ್ಣದ ಹೂವುಗಳಿಂದ ಕಣ್ಣು ಕೋರೈಸುವಂತೆ ಸಿಂಗರಿಸಲಾಗಿತ್ತು. ಮುಂಜಾನೆಯಿಂದಲೇ ದೇವಿಗೆ ಕ್ಷೀರಾಭಿಷೇಕ, ಮಹಾಮಂಗಳಾರತಿ ನಡೆದಿವೆ. ದೇವಿಯ ದರ್ಶನ ಪಡೆಯಲು ಸಾಲು ಸಾಲಾಗಿ ನಿಂತಿದ್ದ ಭಕ್ತರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ದಾಸೋಹದ ಏರ್ಪಾಟು ಮಾಡಲಾಗಿತ್ತು. ದೇವಸ್ಥಾನಕ್ಕೆ ಬಂದ ಹೆಣ್ಣುಮಕ್ಕಳಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ನೀಡಿ ಗೌರವಿಸಲಾಯಿತು.

ಹಾಗೆಯೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಂತೂ ಹಬ್ಬ ಮತ್ತು ಶುಕ್ರವಾರ ಎರಡೂ ಜೊತೆಯಾಗಿ ಬಂದಿದ್ದರಿಂದ ಭಕ್ತರ ದಂಡೇ ಹರಿದುಬಂದಿದೆ. ಮುಂಜಾನೆ 5 ಗಂಟೆಯಿಂದಲೇ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿತು. ಇಂದು ಚಾಮುಂಡೇಶ್ವರಿಯನ್ನು ಮಹಾಲಕ್ಷ್ಮಿಯ ಅವತಾರದಲ್ಲೇ ರೇಷ್ಮೆ ಸೀರೆ, ತರೇವಾರಿ ಆಭರಣಗಳು ಮತ್ತು ಹೂವುಗಳಿಂದ ಶೃಂಗರಿಸಲಾಗಿತ್ತು. ಮಧ್ಯಾಹ್ನ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ವಿಶೇಷ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನಾಡಿನಾದ್ಯಂತ ಲಕ್ಷ್ಮಿ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.


