ಕೋವಿಡ್-19 ಮಹಾಮಾರಿಯ ಕರಾಳ ನೆನಪು ಇನ್ನೂ ಮಾಸಿಲ್ಲ. ಇದರ ನಡುವೆಯೇ ರಷ್ಯಾದ ಸೈಬೀರಿಯಾ ಪ್ರದೇಶದ ಇರ್ಕುಟ್ಸ್ಕ್‌ನಲ್ಲಿ 28 ವರ್ಷದ ಲ್ಯಾಬ್ ಟೆಕ್ನಿಶಿಯನ್ ಸಾವಿನ ಬಳಿಕ ಸಂಭವನೀಯ ನ್ಯುಮೋನಿಕ್ ಪ್ಲೇಗ್ ಕುರಿತು ಆತಂಕ ಮೂಡಿದೆ. ಆದರೆ ಮಹಿಳೆಯ ಸಾವಿಗೆ ಪ್ಲೇಗ್ ಕಾರಣ ಎಂಬುದನ್ನು ರಷ್ಯಾದ ಆರೋಗ್ಯ ಅಧಿಕಾರಿಗಳು ಇದುವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಪ್ರಸ್ತುತ ಪ್ರಕರಣವನ್ನು ಕಾರಣ ತಿಳಿಯದ ನ್ಯುಮೋನಿಯಾ ಎಂದು ಗುರುತಿಸಲಾಗಿದೆ. 

ಲ್ಯಾಬ್‌ನಲ್ಲಿ ಏನಾಯಿತು?

ವರದಿಗಳ ಪ್ರಕಾರ, ದರಿಯಾ ಶಿಪಿಲೋವಾ ಅವರು ಇರ್ಕುಟ್ಸ್ಕ್‌ನ ಆಂಟಿ-ಪ್ಲೇಗ್ ಸಂಶೋಧನಾ ಸಂಸ್ಥೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 25ರಂದು ಲ್ಯಾಬ್ನಲ್ಲಿ ಪರೀಕ್ಷಾ ಮಾದರಿಗಳೊಂದಿಗೆ ಕೆಲಸ ಮಾಡುವ ವೇಳೆ ಪ್ಲೇಗ್ ಬ್ಯಾಕ್ಟೀರಿಯಾ ಇದ್ದಿರಬಹುದಾದ ಟೆಸ್ಟ್ ಟ್ಯೂಬ್ ಒಡೆದಿತ್ತು ಎಂಬ ವರದಿಗಳಿವೆ. ಬಳಿಕ ಅವರಿಗೆ ತೀವ್ರ ನ್ಯುಮೋನಿಯಾ ಕಾಣಿಸಿಕೊಂಡು ಸೆಪ್ಟೆಂಬರ್ 29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 2ರಂದು ಅವರು ಮೃತಪಟ್ಟಿದ್ದಾರೆ ಎಂದು ಹಲವು ವರದಿಗಳು ತಿಳಿಸಿವೆ. 

ಆದರೆ ಈ ಲ್ಯಾಬ್ ಅಪಘಾತವೇ ಅವರ ಅನಾರೋಗ್ಯಕ್ಕೆ ಕಾರಣ ಎಂಬುದೂ ಇನ್ನೂ ಖಚಿತವಾಗಿಲ್ಲ. ರಷ್ಯಾದ ಆರೋಗ್ಯ ಅಧಿಕಾರಿಗಳು ಸೋಂಕಿನ ಮೂಲ ಮತ್ತು ಸಾವಿನ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. 

ಘಟನೆಯ ಹಿನ್ನೆಲೆಯಲ್ಲಿ ಮಹಿಳೆಯ ಸಂಪರ್ಕಕ್ಕೆ ಬಂದ ಸುಮಾರು 200 ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಶೆಲೆಖೋವ್ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೆಲವು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಕ್ರಮಗಳನ್ನು ಜಾರಿಗೊಳಿಸಿರುವ ವರದಿಗಳಿವೆ. ಇರ್ಕುಟ್ಸ್ಕ್ ಅಲ್ಯೂಮಿನಿಯಂ ಘಟಕದಲ್ಲಿಯೂ ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.

ಆದಾಗ್ಯೂ, ನಿಗಾದಲ್ಲಿರುವವರಲ್ಲಿ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ರಷ್ಯಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದೆ. 

ಏನಿದು ನ್ಯುಮೋನಿಕ್ ಪ್ಲೇಗ್?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ಲೇಗ್ Yersinia pestis ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು. ಅದರ ಅತ್ಯಂತ ಗಂಭೀರ ರೂಪಗಳಲ್ಲಿ ನ್ಯುಮೋನಿಕ್ ಪ್ಲೇಗ್ ಕೂಡ ಒಂದು. ಇದು ಶ್ವಾಸಕೋಶವನ್ನು ಬಾಧಿಸುತ್ತದೆ ಮತ್ತು ಸೋಂಕಿತ ವ್ಯಕ್ತಿಯ ಉಸಿರಾಟದ ಕಣಗಳ ಮೂಲಕ ಮತ್ತೊಬ್ಬರಿಗೆ ಹರಡಬಹುದು. 

ಜ್ವರ, ಶೀತ, ತಲೆನೋವು, ದೌರ್ಬಲ್ಯ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಪ್ರಮುಖ ಲಕ್ಷಣಗಳಾಗಿವೆ. ಚಿಕಿತ್ಸೆ ನೀಡದೆ ಬಿಟ್ಟರೆ ನ್ಯುಮೋನಿಕ್ ಪ್ಲೇಗ್ ವೇಗವಾಗಿ ಜೀವಕ್ಕೆ ಅಪಾಯಕಾರಿಯಾಗಬಹುದು. ಆದರೆ ಆರಂಭದಲ್ಲೇ ಸೂಕ್ತ ಆ್ಯಂಟಿಬಯೋಟಿಕ್ ಚಿಕಿತ್ಸೆ ನೀಡಿದರೆ ಗುಣಪಡಿಸುವ ಸಾಧ್ಯತೆ ಉತ್ತಮವಾಗಿದೆ ಎಂದು WHO ತಿಳಿಸಿದೆ. 

ಸೈಬೀರಿಯಾದ ಈ ಘಟನೆ ಪ್ಲೇಗ್ ಬಗ್ಗೆ ಆತಂಕಕ್ಕೆ ಕಾರಣವಾಗಿದ್ದರೂ, ಹೊಸ ಪ್ಲೇಗ್ ಸ್ಫೋಟ ಸಂಭವಿಸಿದೆ ಎಂದು ಸದ್ಯಕ್ಕೆ ಹೇಳಲು ಸಾಕಷ್ಟು ಅಧಿಕೃತ ಪುರಾವೆಗಳಿಲ್ಲ. ತನಿಖೆ ಮತ್ತು ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶದ ಬಳಿಕವೇ ಸೋಂಕಿನ ನಿಖರ ಕಾರಣ ಸ್ಪಷ್ಟವಾಗಲಿದೆ. ಆದ್ದರಿಂದ ವದಂತಿಗಳಿಗಿಂತ ಅಧಿಕೃತ ಆರೋಗ್ಯ ಸೂಚನೆಗಳನ್ನು ಪಾಲಿಸುವುದು ಮುಖ್ಯ.