ಒಂದು ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದು ಕೊನೆಗೂ ಬೆಳಕಿಗೆ ಬಂದಿದೆ. ಸಂಪಿಗೆಹಳ್ಳಿಯ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನಲ್ಲಿ ಜಿಬಿಎ ಆದೇಶದಂತೆ ಖಾಲಿ ಸೈಟ್ ಸ್ವಚ್ಛಗೊಳಿಸುವಾಗ, ನಾಯಿಗಳು ಕಚ್ಚಿ ತಿಂದಿದ್ದ ಕೊಳೆತ ಸ್ಥಿತಿಯ ಮಹಿಳೆಯ ಶವ ಪತ್ತೆಯಾಗಿತ್ತು.

ತನಿಖೆಗಿಳಿದ ಸಂಪಿಗೆಹಳ್ಳಿ ಪೊಲೀಸರಿಗೆ ಶವದ ಮೇಲಿದ್ದ ಒಂದು ಬಟ್ಟೆಯ ಮಾಲ್ ಟ್ಯಾಗ್ ಸಿಕ್ಕಿತ್ತು. ಆ ಮಾಲ್‌ನ ಬಿಲ್ ಮತ್ತು ಸಿಸಿಟಿವಿ ಪರಿಶೀಲಿಸಿದಾಗ ಮೃತರನ್ನು ಒಡಿಶಾ ಮೂಲದ ಅನುಸೂಯ (28) ಎಂದು ಗುರುತಿಸಲಾಯಿತು. ಆಕೆಯ ಪತಿ ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ಸತ್ಯ ಹೊರಬಂತು.

ಹಣಕಾಸಿನ ಗಲಾಟೆಯಿಂದಾಗಿ ಆಗಸ್ಟ್ 11ರಂದೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದಿದ್ದ ಸಾಗರ್, ಮೂರು ದಿನ ಶವದ ಜೊತೆಯಲ್ಲೇ ಮನೆಯಲ್ಲಿ ಕಾಲಳೆದಿದ್ದ. ನಂತರ ಹಾಸಿಗೆಯಲ್ಲಿ ಸುತ್ತಿ ತಂದು ಖಾಲಿ ಸೈಟ್‌ನಲ್ಲಿ ಎಸೆದು ಪರಾರಿಯಾಗಿದ್ದ. ಬಟ್ಟೆ ಟ್ಯಾಗ್, ಸಿಸಿಟಿವಿ ಹಾಗೂ ಕಾಲ್ ಡೇಟಾ ಆಧರಿಸಿ ಪೊಲೀಸರು ಕೊಲೆಗಾರ ಪತಿಯನ್ನು ಬಂಧಿಸಿದ್ದಾರೆ.