ದೇಶದಲ್ಲಿ ಎಸ್ ಐಆರ್ ನಲ್ಲಿ ಆಗಿರುವ ಎಡವಟ್ಟು ಒಂದೆರೆಡಲ್ಲ.. ಅದರ ವಿರುದ್ಧ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರಮಾಣದ ಹೋರಾಟಗಳೇ ನಡೆಯುತ್ತಿವೆ. ಇದರ ಮಧ್ಯೆ ರಾಜ್ಯದಲ್ಲೂ ಸಹಾ ಮತದಾರರ ಹೆಸರು ಅಳಿಸಿ ಹಾಕುವ  ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಫಾರಂ-7 ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಮತದಾರರ ಹೆಸರುಗಳನ್ನು ಅಳಿಸಿ ಹಾಕಿಸಲು ತಂತ್ರಗಳು ನಡೆಯುತ್ತಿವೆ ಎನ್ನುವ ಆಪಾದನೆಗಳು ಇವೆ. ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಹೋರಾಟವನ್ನೂ ಮಾಡುತ್ತಿದೆ. ಇದೆಲ್ಲಾ ನಡೆಯುತ್ತಿರುವಾಗಲೇ ಚಿಕ್ಕಮಗಳೂರಿನ ಕೊಪ್ಪ ಹಾಗೂ ಬಳ್ಳಾರಿಯಲ್ಲಿ ಮತದಾರರ ಹೆಸರು ಡಿಲೀಟ್ ಗೆ  ಬಿಜೆಪಿ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು ಎಂಬ ವಿಚಾರ ಬಯಲಾಗಿದೆ.

ಕೊಪ್ಪದಲ್ಲಿ ಅರ್ಜಿ ಸಲ್ಲಿಸಿದ  ಬಿಜೆಪಿ ನಾಯಕ  
ಕೊಪ್ಪ ತಾಲೂಕಿನಲ್ಲಿ ಒಟ್ಟು 243 ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವಂತೆ ಬಿಜೆಪಿ ಮುಖಂಡ ದಿನೇಶ್ ಕೋರಿ ಚುನಾವಣಾ ಆಯೋಗಕ್ಕೆ ಫಾರಂ-7 ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ರಾಜ್ಯಾದ್ಯಂತ ಫಾರಂ-7 ದುರ್ಬಳಕೆ ಮಾಡಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇದರಿಂದ ಪೊಲೀಸರು ಪ್ರಕರಣಗಳನ್ನು ದಾಖಲಿಸಲು ಆರಂಭಿಸಿದ್ದಾರೆ. ಇದಾಗುತ್ತಾ ಇದ್ದಂತೆ ದಿನೇಶ್ ತಾವು 243 ಮತದಾರರ ಹೆಸರು ಡಿಲೀಟ್ಗೆ ಸಲ್ಲಿಸಿದ್ದ ಫಾರಂ-7 ಅರ್ಜಿಯನ್ನು ಅಧಿಕೃತವಾಗಿ ಹಿಂದಕ್ಕೆ ಪಡೆದುಕೊಂಡಿದ್ದಾರೆ.  

ರಾಜ್ಯದಲ್ಲಿ SIR ಪ್ರಕ್ರಿಯೆಯಡಿ ಸಾಮೂಹಿಕವಾಗಿ ಫಾರಂ-7 ಬಳಸಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಯತ್ನಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವದಲ್ಲಿ ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದರು. ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಈ ಕಾನೂನು ಕ್ರಮಗಳು ಹಾಗೂ ತೀವ್ರ ರಾಜಕೀಯ ಒತ್ತಡದ ಪರಿಣಾಮವಾಗಿ ಅರ್ಜಿ ಹಿಂಪಡೆಯಲಾಗಿದೆ ಎನ್ನಲಾಗಿದೆ.

ಬಳ್ಳಾರಿಯಲ್ಲಿ 7,500 ಹೆಸರು ಅಳಿಸಲು ಅರ್ಜಿ 
ಇದು ಕೇವಲ ಕೊಪ್ಪಕ್ಕೆ ಮಾತ್ರ ಸೀಮಿತವಾಗಿಲ್ಲ.ಮತ್ತೊಂದು ಕಡೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಇಂಥದ್ದೇ ಪ್ರಯತ್ನ ನಡೆದಿರುವುದು ಕಂಡು ಬಂದಿುದೆ. ಇಲ್ಲಿ ಆಗಿರುವುದು ಏನಂದರೆ ಕರಡು ಮತದಾರರ ಪಟ್ಟಿಯಲ್ಲಿರುವ 7,500ಕ್ಕೂ ಹೆಚ್ಚು ಮತದಾರರು ಒಂದೇ ಈ ಭಾಗದಲ್ಲಿ ವಾಸಿಸುತ್ತಿಲ್ಲ. ಅವರು ಬೇರೆಡೆಗೆ ವಲಸೆ ಹೋಗಿದ್ದಾರೆ ಹೀಗಾಗಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಿ ಅರ್ಜಿ ಸಲ್ಲಿಸಿಲಾಗಿದೆ. ಬಿಜೆಪಿಯ ಬೂತ್ ಏಜೆಂಟ್ ಹಾಗೂ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಟಿ. ಶ್ರೀನಿವಾಸ್ ಮೋತ್ಕುರ್ ಎಂಬವರೇ ಹೀಗೆ ಅರ್ಜಿ ಸಲ್ಲಿಕೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವುದು. ಈ ಆರೋಪದ ಮೇಲೆ, ಶ್ರೀನಿವಾಸ್ ಮೋತ್ಕುರ್ ವಿರುದ್ಧ ಅಕ್ಟೋಬರ್ 1 ರಂದು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಫಾರಂ-7 ದುರ್ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದಾಖಲಾಗಿರುವ 6ನೇ ಎಫ್ಐಆರ್ ಇದಾಗಿದೆ. 

ಟಿ.ಶ್ರೀನಿವಾಸ್ ಮೋತ್ಕುರ್ ಒಟ್ಟು 7,561 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕರಡು ಪಟ್ಟಿಯಲ್ಲಿರುವ ಮತದಾರರ ವಿರುದ್ಧ ಆಕ್ಷೇಪಣೆ ಎತ್ತಿದ್ದ ಶ್ರೀನಿವಾಸ ಮೋತ್ಕರ್ ಮೊದಲಿಗೆ ಎಂದರೆ ಸೆಪ್ಟಂಬರ್ 22ರಂದು ನಮೂನೆ 7 ರ ಮೂಲಕ ಅರ್ಜಿಗಳನ್ನು ಸಲ್ಲಿಸಿ ಹೆಸರುಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ್ದರು. ಆದರೆ, ಸೂಕ್ತ ಆಧಾರಗಳಿಲ್ಲದ ಕಾರಣ ಚುನಾವಣಾ ಪ್ರಾಧಿಕಾರವು ಈ ಹಕ್ಕುಸ್ವಾಮ್ಯದ ಕ್ಲೈಮ್ಗಳನ್ನು ತಿರಸ್ಕರಿಸಿತ್ತು.

ಅರ್ಜಿಗಳು ತಿರಸ್ಕೃತಗೊಂಡ ಬೆನ್ನಲ್ಲೇ, ಸದರಿ ಬೂತ್ ಏಜೆಂಟ್ ಮತ್ತೊಮ್ಮೆ ಅದೇ ಮತದಾರರ ಹೆಸರುಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಕೋರಿ ಮರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಹೆಸರನ್ನು ತೆಗೆದುಹಾಕಲು ಒತ್ತಾಯಿಸಿದ್ದರು. ಕರಡು ಮತದಾರರ ಪಟ್ಟಿಯಲ್ಲಿ ಕ್ರಮಬದ್ಧವಾಗಿಯೇ ಇರುವ ಸಾವಿರಾರು ಹೆಸರುಗಳ ವಿರುದ್ಧ ಈ ರೀತಿ ಸಾರಾಸಗಟಾಗಿ ಆಕ್ಷೇಪಣೆ ಸಲ್ಲಿಸಿರುವುದು ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು ಪದೇ ಪದೇ ನಡೆಸಲಾದ ಪ್ರಯತ್ನಗಳಿಂದ ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್ ಗೌತಮ್ ದೂರು ನೀಡಿದ್ದರು. ತಮ್ಮ ದೂರಿನಲ್ಲಿ ಶ್ರೀನಿವಾಸ್ ಮೋತ್ಕುರ್ 7,561 ಮತದಾರರ ವಿರುದ್ಧ ನಮೂನೆ-7 ಅರ್ಜಿಗಳನ್ನು ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಕೆಲವು ಮತಗಟ್ಟೆಗಳಲ್ಲಿ ಚುನಾವಣಾ ಅಧಿಕಾರಿಗಳು ಮೋತ್ಕುರ್ ಆಕ್ಷೇಪಣೆಗಳನ್ನೇ ಆಧಾರವಾಗಿಟ್ಟುಕೊಂಡು ಆ ಹೆಸರುಗಳನ್ನು ಮರು-ಪರಿಶೀಲನೆಗೆ ಒಳಪಡಿಸಿದ್ದಾರೆ ಎಂದೂ ಅವರು ದೂರಿದ್ದರು. ಆಕ್ಷೇಪಣೆಗೊಳಪಟ್ಟ ಬಹುಪಾಲು ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವುಗಳಾಗಿವೆ. ಬಿಜೆಪಿ ಬೂತ್ ಮಟ್ಟದ ಏಜೆಂಟರು ಉದ್ದೇಶಪೂರ್ವಕವಾಗಿಯೇ ಅಲ್ಪಸಂಖ್ಯಾತ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಗೌತಮ್ ಆಪಾದಿಸಿದ್ದಾರೆ. 

ಆದರೆ ಈ ಎಲ್ಲಾ ಆರೋಪಗಳನ್ನು ಶ್ರೀನಿವಾಸ್ ಮೋತ್ಕುರ್ ತಳ್ಳಿ ಹಾಕಿದ್ದಾರೆ. ತಾವೊಬ್ಬರೇ ಎಲ್ಲಾ ಕಡೆ ಗಮನಹರಿಸಲು ಸಾಧ್ಯವಿಲ್ಲದ ಕಾರಣ, ಬೂತ್ ಮಟ್ಟದ ಏಜೆಂಟ್-2 (BLA-2) ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ಬೇರೆಡೆಗೆ ವಲಸೆ ಹೋದ ಅಥವಾ ಗೈರುಹಾಜರಾಗಿರುವ ಮತದಾರರನ್ನು ಗುರುತಿಸಿ ಪಟ್ಟಿ ನೀಡುವಂತೆ ಸೂಚಿಸಿದ್ದಾಗಿ ತಿಳಿಸಿದ್ದಾರೆ. ಅಲ್ದೇ ಬಿಎಲ್ಎ-2 ಅವರು ಗುರುತಿಸಿ ನೀಡಿದ ಮತದಾರರ ವಿವರಗಳ ಆ ಪಟ್ಟಿಯನ್ನು ಕೇವಲ ನಿಯಮಾನುಸಾರ ಪರಿಶೀಲನೆ ನಡೆಸುವಂತೆ ಕೋರಿ ಚುನಾವಣಾ ನೋಂದಣಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ. ತಾವು ಸಲ್ಲಿಸಿದ ಪಟ್ಟಿಯಲ್ಲಿದ್ದ ಮಾಹಿತಿ ನೂರಕ್ಕೆ ನೂರು ಸರಿ ಎಂದು ತಾವೆಲ್ಲೂ ಪ್ರತಿಪಾದಿಸಿಲ್ಲ. ಹಾಗೆಯೇ ಆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುವಂತೆಯೂ ತಾವು ಎಲ್ಲಿಯೂ ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ತೆಲಂಗಾಣದಲ್ಲಿ ಗೊಂದಲವೋ...ಗೊಂದಲ.! 
ಇನ್ನು ತೆಲಂಗಾಣದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕೂಡಾ ಭಾರೀ ಗೊಂದಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 2,01,249 ಮತದಾರರಿಗೆ ತಮ್ಮ ಪಟ್ಟಿಯಲ್ಲಿನ ಯಾವ ಲೋಪದೋಷಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸದೆಯೇ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಸಬರ್ ಇನ್ಸ್ಟಿಟ್ಯೂಟ್ ಮತ್ತು ಕಾನ್ಸ್ಟಿಟ್ಯೂಷನಲ್ ಗಾರ್ಡಿಯನ್ಸ್ ಫೋರಂ ಜಂಟಿಯಾಗಿ ನಡೆಸಿರುವ ಇತ್ತೀಚಿನ ಚುನಾವಣಾ ದತ್ತಾಂಶಗಳ ವಿಶ್ಲೇಷಣೆಯಿಂದ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಸಂಸ್ಥೆಗಳು ರಾಜ್ಯದ ಒಟ್ಟು ಮತದಾರರ ಪೈಕಿ ಶೇಕಡ 31.3 ರಷ್ಟಿರುವ 92.85 ಲಕ್ಷ ಲೋಪದೋಷ ನೋಟಿಸ್ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಅದರಲ್ಲಿ ಈ ಕೆಳಗಿನ ಪ್ರಮುಖ ಅಂಶಗಳು ಬೆಳಕಿಗೆ ಬಂದಿವೆ

ಮತದಾರರ ಧಾರ್ಮಿಕ ಹಿನ್ನೆಲೆಯ ಕುರಿತು ನಡೆದಿರುವ ಜಂಟಿ ಅಧ್ಯಯನವೊಂದು ಮಹತ್ವದ ಅಂಕಿ-ಅಂಶಗಳನ್ನು ಹೊರಹಾಕಿದೆ. ರಾಜ್ಯಾದ್ಯಂತ ಜಾರಿಯಾಗಿರುವ ಒಟ್ಟು ನೋಟಿಸ್‌ಗಳ ಪೈಕಿ ಮುಸ್ಲಿಂ ಮತದಾರರ ಪಾಲು ಶೇಕಡ 14.16 ರಷ್ಟಿದೆ ಎಂದು ವರದಿ ತಿಳಿಸಿದೆ. ಅದಲ್ಲೂ ಹೈದರಾಬಾದ್ ನ ಕೆಲವು ನಿರ್ದಿಷ್ಟ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಹೆಸರುಗಳಿರುವ ನೋಟಿಸ್‌ಗಳ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದು ಅಧ್ಯಯ ತಿಳಿಸಿದೆ. 

ಬಹಾದೂರ್ ಪುರ್ ಚಾಂದ್ರಾಯಣಗುಟ್ಟ, ಕಾರ್ವನ್ ಮತ್ತು ಯಕತ್ ಪುರ ಸೇರಿದಂತೆ ಸೇರಿದಂತೆ ಹೈದರಾಬಾದನ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಯಾಗಿರುವ ನೋಟಿಸ್‌ಗಳ ಪೈಕಿ ಮುಸ್ಲಿಂ ಮತದಾರರ ಪಾಲು ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಬಹಾದೂರ್ ಪುರ್ ಕ್ಷೇತ್ರದಲ್ಲಿ ನೀಡಲಾಗಿರುವ ಒಟ್ಟು ನೋಟಿಸ್‌ಗಳ ಪೈಕಿ ಶೇಕಡ 85.18 ರಷ್ಟು ಮುಸ್ಲಿಂ ಮತದಾರರ ಹೆಸರುಗಳೇ ಆಗಿವೆ. ಉಳಿದಂತೆ ಚಾಂದ್ರಾಯಣಗುಟ್ಟ ಕ್ಷೇತ್ರದಲ್ಲಿ ಶೇಕಡ 71.15 ಹಾಗೂ ಕಾರ್ವನ್ ಕ್ಷೇತ್ರದಲ್ಲಿ ಶೇಕಡ 54.56ರಷ್ಟು ಮತ್ತು ಯಾಕುತ್ ಪುರ ಕ್ಷೇತ್ರದಲ್ಲಿ ಶೇಕಡ 61.16ರಷ್ಟು ನೋಟಿಸ್‌ಗಳು ಮುಸ್ಲಿಂ ಸಮುದಾಯದ ಮತದಾರರ ಹೆಸರಿನಲ್ಲಿವೆ ಎಂದು ವರದಿಗಳು ತಿಳಿಸಿವೆ.

ಇಲ್ಲಿ ನೀಡಲಾಗಿರುವ ನೋಟಿಸ್‌ಗಳಲ್ಲಿ ದಾಖಲಿಸಲಾದ ಕಾರಣಗಳು ಒಂದಕ್ಕಿಂಥ ಮತ್ತೊಂದು ಸಾಕಷ್ಟು ಭಿನ್ನವಾಗಿವೆ. ಮ್ಯಾಪ್ ಆಗದ ಮತದಾರರು ಮತ್ತು ಪೋಷಕರ ಹೆಸರು ಹೊಂದಾಣಿಕೆಯಾಗದಿರುವುಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಸ್ವತಃ ಮತದಾರರ ಹೆಸರಿನಲ್ಲಿನ ವ್ಯತ್ಯಾಸ, ಪೋಷಕರು ಮತ್ತು ಮಕ್ಕಳ ನಡುವಿನ ವಯಸ್ಸಿನ ವ್ಯತ್ಯಾಸ ಹಾಗೂ ಒಡಹುಟ್ಟಿದವರ ನಡುವೆ 9 ತಿಂಗಳಿಗಿಂತ ಕಡಿಮೆ ಅವಧಿಯ ಅಂತರವಿರುವ ಕಾರಣಗಳಿಗೂ ನೋಟಿಸ್ ನೀಡಲಾಗಿದೆ. ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಪ್ರಕರಣಗಳಿಗೂ ನೋಟಿಸ್ ಜಾರಿಯಾಗಿವೆ. ಇವುಗಳಲ್ಲಿ ಶೇಕಡ 50.5 ರಷ್ಟು ಮುಸ್ಲಿಂ ಹೆಸರುಗಳಾಗಿವೆ ಎಂಬುದು ಇಲ್ಲಿ ಗಮನಾರ್ಹ 

ಹೆಸರು ಅಳಿಸುವುದು ಸಂವಿಧಾನ ಬಾಹಿರ-ನ್ಯಾ. ಉಜ್ವಲ್ ಭುಯಾನ್ 
ಹೀಗೆ ದೇಶದಲ್ಲಿ ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿವೆ. ಹೀಗಿರುವಾಗಲೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನಿನ್ನ(ಭಾನುವಾರ) ಮಹತ್ವದ ಹೇಳಿಕೆ ನೀಡಿದ್ದಾರೆ. ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ ಎಂದು ಅವರು ಹೇಳಿದ್ದಾರೆ. ಇದು ಮತ್ತೊಂದು ಚರ್ಚೆಗೆ ಆಯಾಮ ನೀಡಿದೆ. ಮತದಾರರು ಮೃತಪಟ್ಟಿರುವ ಸಂದರ್ಭವನ್ನು ಹೊರತುಪಡಿಸಿ, ಒಮ್ಮೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ನಂತರ, ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡದೆ ಮತ್ತು ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡದೆ ಆ ಹೆಸರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ

ಹೆಚ್ಚಿನ ಸಂಖ್ಯೆಯ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಲು ಕಾರಣವಾಗುವ ಯಾವುದೇ ಪ್ರಕ್ರಿಯೆಯು ನಿರಂಕುಶವಾದವಾಗಿದೆ. ಸಂವಿಧಾನದ 326 ಹಾಗೂ 14ನೇ ವಿಧಿಗಳ ನೇರ ಉಲ್ಲಂಘನೆಯಾಗಿದೆ ಎಂದು ಉಜ್ವಲ್ ಭುಯಾನ್ ಹೇಳಿದ್ದಾರೆ. ಲಕ್ಷಾಂತರ ಭಾರತೀಯರನ್ನು ಮತದಾನದ ಹಕ್ಕಿಲ್ಲದವರನ್ನಾಗಿ ಮಾಡುವುದು ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರು ಎಂದು ಪರಿಗಣಿಸುವಂತಹ ಯಾವುದೇ ಪ್ರಕ್ರಿಯೆ ಮೂಲಭೂತವಾಗಿ ನಿರಂಕುಶವಾದುದಾಗಿದೆ ಎಂದು ಅವರು ಹೇಳಿದ್ದಾರೆ. 

ಈ ವಿಚಾರದಲ್ಲಿ ಯಾರು ಏನೆಲ್ಲಾ ಹೇಳಿದರೂ ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂವಿಧಾನದ ಮೂಲ ಆಶಯದ ಮೇಲೆಯೇ ದಾಳಿ ನಡೆಸುತ್ತದೆ ಎಂದು ಉಜ್ವಲ್ ಭುಯಾನ್ ಅಭಿಪ್ರಾಯ ಪಟ್ಟರು. ಸಂವಿಧಾನವು ನಾಗರಿಕರನ್ನು ಮತದಾನದ ಹಕ್ಕುಳ್ಳವರು ಮತ್ತು ಹಕ್ಕಿಲ್ಲದವರು ಎಂಬ ಎರಡು ವರ್ಗಗಳಾಗಿ ವಿಂಗಡಿಸುವುದಿಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು. ಇನ್ನೂ ಮುಂದುವರೆದು ಭಾರತೀಯ ಸಂವಿಧಾನ ಮತದಾನದ ಹಕ್ಕು ಇರುವವರು ಮತ್ತು ಮತದಾನದ ಹಕ್ಕಿಲ್ಲದ ನಾಗರಿಕರು ಎಂದು ಎರಡು ವರ್ಗಗಳಾಗಿ ವಿಂಗಡನೆಗೆ ಅವಕಾಶ ನೀಡಿಲ್ಲ. ಸಂವಿಧಾನದ 326 ಮತ್ತು 14ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಭಾರತೀಯ ಪ್ರಜೆಯೊಬ್ಬರ ಮತದಾನದ ಹಕ್ಕನ್ನು ಅಥವಾ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸುವ ಹಕ್ಕನ್ನು ಕಸಿದುಕೊಳ್ಳುವುದು, ದೇಹದಿಂದ ಆತ್ಮವನ್ನು ಬೇರ್ಪಡಿಸಿದಂತೆಯೇ ಎಂದು ಅವರು ಅಭಿಪ್ರಾಯ ಪಟ್ಟರು. ಇದೇ ವೇಳೆ ಸಂವಿಧಾನಕ್ಕಿಂತ ಮಿಗಿಲಾದವರು ಯಾರೂ ಇಲ್ಲ.ಯಾವುದೇ ಪ್ರಾಧಿಕಾರವು ಹೀಗೆ ಮಾಡಲು ಸಾಧ್ಯವಿಲ್ಲ ಮತ್ತು ಯಾವುದೇ ನ್ಯಾಯಾಲಯವು ಅಂತಹ ಪ್ರಕ್ರಿಯೆಯನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದರು 

ಮೇಲ್ನೋಟಕ್ಕೆ ಯಾವುದೇ ರೀತಿಯಲ್ಲಿ ನೋಡಿದರೂ ಒಂದು ವರ್ಗವನ್ನು ಮತದಾನದ ಪ್ರಕ್ರಿಯೆಯಿಂದ ಹೊರಗಡಿಲು ಪ್ರಯತ್ನ ಮಾಡಲಾಗುತ್ತಿದೆ ಎಂಬ ಶಂಕೆಯಂತೂ ಖಂಡಿತಾ ಇದೆ.ಇದರ ವಿರುದ್ಧ ವಿಪಕ್ಷಗಳು ಸಂಘಟನೆಗಳು ಹೋರಾಟ ಮಾಡುತ್ತಿವೆ. ಇದು ಯಾವ ದಿಕ್ಕಿಗೆ ಸಾಗುತ್ತೋ ನೋಡಬೇಕು.