ಘಟನೆ 2018ರಲ್ಲಿ ನಡೆದಿದ್ದು, ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಸ್. ಶಂಕರ್ ಎಂಬ ಕೈದಿಯನ್ನು ಸುಪ್ರೀಂ ಕೋರ್ಟ್ನ ನಕಲಿ ಆದೇಶದ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.

2018ರಲ್ಲಿ ನಕಲಿ ಆದೇಶದ ಆಧಾರದ ಮೇಲೆ ಬಿಡುಗಡೆ
2001ರಲ್ಲಿ ಕೊಲೆ, ಅಪಹರಣ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364A ಮತ್ತು 120B ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಶಂಕರ್ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಬಳಿಕ 2018ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಕೆಯಾಗಿದ್ದು, ಅದರ ಆಧಾರದ ಮೇಲೆ ಬಿಡುಗಡೆ ಆದೇಶ ಹೊರಬಿದ್ದಿದೆ ಎಂದು ನಕಲಿ ದಾಖಲೆ ಸಿದ್ಧಪಡಿಸಿ ಜೈಲು ಅಧಿಕಾರಿಗಳಿಗೆ ನೀಡಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ನಕಲಿ ಆದೇಶದ ಆಧಾರದ ಮೇಲೆ 2018ರ ನವೆಂಬರ್ 13ರಂದು ಶಂಕರ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ನಕಲಿ ಸುಪ್ರೀಂ ಕೋರ್ಟ್ ಆದೇಶವನ್ನು ಜೈಲಿನ ಎಸ್ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈದಿ ಶಂಕರ್ ಮತ್ತು ನಕಲಿ ಆದೇಶ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಇದೀಗ ಅಂದಿನ ಪರಪ್ಪನ ಅಗ್ರಹಾರ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ನಕಲಿ ಆದೇಶದ ಆಧಾರದ ಮೇಲೆ ಕೈದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಯಾವ ರೀತಿಯ ಕ್ರಮ ಕೈಗೊಂಡಿದ್ದರು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದಲ್ಲಿ ನಕಲಿ ದಾಖಲೆ ಹೇಗೆ ಸಿದ್ಧವಾಯಿತು, ಅದು ಜೈಲು ಅಧಿಕಾರಿಗಳ ಪರಿಶೀಲನೆಯನ್ನು ಹೇಗೆ ದಾಟಿತು ಮತ್ತು ಕೈದಿ ಬಿಡುಗಡೆಗೆ ಯಾರ್ಯಾರ ಪಾತ್ರವಿತ್ತು ಎಂಬುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.

