ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸುತ್ತ ಹಲವಾರು ಬೆಳವಣಿಗಳು ನಡೆಯುತ್ತಲೇ ಇವೆ. ಇದು ಆಡಳಿತ ಪಕ್ಷಕ್ಕೆ ತೀರಾ ಮುಜುಗರದ ವಿಷಯವಾಗಿದ್ದರೆ, ವಿಪಕ್ಷಗಳಿಗೆ ಬ್ರಹ್ಮಾಸ್ತ್ರವೇ ಕೈಗೆ ಸಿಕ್ಕಿದಂತೆ ಆಗಿದೆ. ಈ ವಿವಾದ ಗಳಿಗೆಗೊಂದು ಮಗ್ಗಲು ಬದಲಿಸುತ್ತಿರುವಾಗಲೇ ನಿನ್ನೆ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಿಢೀರನೆ ಸಿದ್ದರಾಮಯ್ಯನವರನ್ನು ಅವರ ಮೈಸೂರು ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ.

ನಿನ್ನೆ ಮುಖ್ಯಮಂತ್ರಿ ಶಿವಕುಮಾರ್ ಸಿದ್ದರಾಮಯ್ಯನವರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿ ಆಗಿರಲಿಲ್ಲ. ಆದರೆ KRS ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಕಾವೇರಿ ಮಾತೆಗೆ ಪತ್ನಿ ಜೊತೆಗೂಡಿ ಆರತಿ ನೆರವೇರಿಸಿದ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಮನೆಗೆ ತೆರಳುವ ಮೊದಲು ಗೃಹಸಚಿವ ಪ್ರಿಯಾಂಕ್ ಖರ್ಗೆ ಅಲ್ಲಿಗೆ ತೆರಳಿ ಸಿದ್ದರಾಮಯ್ಯನರ ಜೊತೆ ಮಾತುಕತೆ ನಡೆಸಿದ್ದರು. ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ, ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ, ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 

ಶಿವಕುಮಾರ್ ಸಿದ್ದರಾಮಯ್ಯನವರ ಮನೆಗೆ ರಾತ್ರಿ ಊಟಕ್ಕೆ ಆಗಮಿಸಿದ್ದರು ಎಂದು ಕೆಲವರು ಹೇಳುತ್ತಿದ್ದರೆ, ರಾಜ್ಯದ ಪ್ರಚಲಿತ ರಾಜಕೀಯ ಬೆಳವಣಿಗೆಗಳನ್ನು ಚರ್ಚಿಸಲು ಹೋಗಿದ್ದರು ಎಂಬ ಮಾತುಗಳು ಹರಿದಾಡುತ್ತಿವೆ. ಇತ್ತೀಚೆಗೆ ಚರ್ಚೆಯಲ್ಲಿರುವ ಸ್ಟಿಂಗ್ ಆಪರೇಷನ್ ವಿಚಾರವೂ ಉಭಯ ನಾಯಕರ ಮಾತುಕತೆಯಲ್ಲಿ ಪ್ರಸ್ತಾಪವಾಗಿದೆಯೇ ಎಂಬ ವಿಷಯ ರಾಜಕೀಯ ವಲಯದಲ್ಲಿ ಜೋರು ಸದ್ದು ಮಾಡುತ್ತಿದೆ. 

ಇನ್ನು ಸ್ಟಿಂಗ್ ಆಪರೇಷನ್ ವಿಷಯ ರಾಜ್ಯ ರಾಜಕಾರಣದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿರುವಾಗಲೇ ಸಿದ್ದರಾಮಯ್ಯನವರನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಭೇಟಿಯಾಗಿದ್ದಾರೆ. ಇದು ಕೂಡಾ ಹಲವಾರು ಚರ್ಚೆಗಳನ್ನು ಹುಟ್ಟು ಹಾಕಿದೆ. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯನವರು ನಮ್ಮ ಹಿರಿಯ ನಾಯಕರು ಅವರ ಆಶೀರ್ವಾದ ಪಡೆಯಲು ಬಂದಿದ್ದೆ ಅಷ್ಟೇ ಎಂದಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ವಿಪಕ್ಷ ನಾಯಕ ಆರ್. ಅಶೋಕ್ ಇದರ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಲು ಸುಮಾರು 10ರಿಂದ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈ ಕಪ್ಪುಹಣ ಎಲ್ಲಿಂದ ಬಂತು? ಯಾರಿಂದ ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಲೂಟಿ ಮಾಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಎಲ್ಲಾ ವಿಚಾರಗಳು ಬಹಿರಂಗವಾಗಲು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದೆಲ್ಲವೂ ತನಿಖೆಯ ಮೂಲಕ ಹೊರಬರಬೇಕು. ಇಲ್ಲದಿದ್ದರೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರ ಅಧೀನದಲ್ಲಿರುವುದರಿಂದ ಯಾವುದೇ ವಿಳಂಬವಿಲ್ಲದೆ ತನಿಖೆಗೆ ಆದೇಶಿಸಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ. ಕಾಂಗ್ರೆಸ್ನ ಕೆಲ ನಾಯಕರು ಸಿದ್ದರಾಮಯ್ಯ ಅವರ ಪರವಾಗಿದ್ದರೆ, ಇನ್ನು ಕೆಲವರು ವಿರೋಧವಾಗಿದ್ದಾರೆ. ಮತ್ತೊಂದಷ್ಟು ನಾಯಕರು ತಟಸ್ಥ ನಿಲುವು ಹೊಂದಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳು ಇವೆ. ಬರದ ಪರಿಸ್ಥಿತಿ ತೀವ್ರವಾಗಿದೆ. ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಹೊಸ ಯೋಜನೆಗಳ ಘೋಷಣೆ ಆಗುತ್ತಿಲ್ಲ. ಹೀಗಿರುವಾಗ ಸ್ಟಿಂಗ್ ಆಪರೇಷನ್ ಸುದ್ದಿಯೇ ದೊಡ್ಡದಾಗಿ ಚರ್ಟೆ ಆಗುತ್ತಾ ಇರುವುದು ವಿಪರ್ಯಾಸ.