ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ವಾಹನಗಳ ಸಂಖ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮದ ಬಗ್ಗೆ ಮಹತ್ವದ ಸೂಚನೆ ನೀಡಿದೆ. ವಾಹನಗಳಿಗೆ ಮಾನ್ಯ ವಿಮೆ ಇಲ್ಲದಿದ್ದರೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಪೂರೈಕೆಯನ್ನು ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಪ್ರಸ್ತಾವಿತ ಯೋಜನೆಯ ಪ್ರಕಾರ, ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮೊದಲು ವಾಹನದ ವಿಮೆ ಮಾನ್ಯವಾಗಿದೆಯೇ ಎಂಬುದನ್ನು ಪೆಟ್ರೋಲ್ ಬಂಕ್ಗಳಲ್ಲಿ ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆಯನ್ನು ಅಧ್ಯಯನ ಮಾಡಲಾಗುತ್ತದೆ. ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಅಗತ್ಯ ವಿಮೆ ಪಡೆಯುವವರೆಗೆ ಇಂಧನ ಪೂರೈಕೆಯನ್ನು ನಿರಾಕರಿಸುವ ಮಾದರಿಯನ್ನು ಪೈಲಟ್ ಯೋಜನೆಯಾಗಿ ಪರೀಕ್ಷಿಸುವ ಕುರಿತು ಚಿಂತನೆ ನಡೆದಿದೆ.

ಈ ಕ್ರಮದ ಉದ್ದೇಶ ರಸ್ತೆಗಳಲ್ಲಿ ವಿಮೆ ಇಲ್ಲದೆ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಅಪಘಾತಗಳ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ದೊರಕುವಂತೆ ನೋಡಿಕೊಳ್ಳುವುದು ಹಾಗೂ ವಾಹನ ಮಾಲೀಕರಲ್ಲಿ ವಿಮೆ ಕಡ್ಡಾಯ ಎಂಬ ಅರಿವು ಮೂಡಿಸುವುದಾಗಿದೆ.