ಬಿಹಾರದ ಮುಜಫರ್‌ಪುರ ಜಿಲ್ಲೆಯ ಗೋಬರ್‌ಸಾಹಿ ಡುಮ್ರಿ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಭೀಕರ ದುರಂತವೊಂದು ಸಂಭವಿಸಿದೆ. ಚರಂಡಿ ಕಾಮಗಾರಿ ವೇಳೆ ಪಿಎನ್‌ಜಿ ಗ್ಯಾಸ್ ಪೈಪ್‌ಲೈನ್ ಒಡೆದು ಬೆಂಕಿ ಕಾಣಿಸಿಕೊಂಡಿದೆ. ರಸ್ತೆ ನಿರ್ಮಾಣ ಇಲಾಖೆ ನಡೆಸುತ್ತಿದ್ದ ಕಾಮಗಾರಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮಧ್ಯಾಹ್ನ ಸುಮಾರು 12 ಗಂಟೆಯ ಸಮಯದಲ್ಲಿ ರಸ್ತೆ ಬದಿ ಚರಂಡಿ ತೋಡಲು ಜೆಸಿಬಿ ಯಂತ್ರದಿಂದ ಅಗೆಯಲಾಗುತ್ತಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದಾಗಿ ಭೂಮಿಯ ಅಡಿಯಲ್ಲಿದ್ದ ಗ್ಯಾಸ್ ಪೈಪ್‌ಲೈನ್‌ಗೆ ಜೆಸಿಬಿ ತಾಗಿದ್ದು, ಭಾರಿ ಒತ್ತಡದಲ್ಲಿ ಗ್ಯಾಸ್ ಸೋರಿಕೆಯಾಗಲು ಶುರುವಾಗಿದೆ. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡು ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ಭೀಕರತೆಗೆ ಸ್ಥಳದಲ್ಲೇ ಒಬ್ಬರು ಪ್ರಾಣ ಕಳೆದುಕೊಂಡಿದ್ದು, 6ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಎಸ್.ಕೆ.ಎಂ.ಸಿ.ಎಚ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಫೋಟದ ಶಬ್ದ ಎಷ್ಟು ಭೀಕರವಾಗಿತ್ತೆಂದರೆ, ಬರೋಬ್ಬರಿ 3 ರಿಂದ 5 ಕಿಲೋಮೀಟರ್ ದೂರದವರೆಗೂ ಸದ್ದು ಕೇಳಿಸಿದೆ. ಘಟನಾ ಸ್ಥಳದ ಸುತ್ತಮುತ್ತಲಿದ್ದ ಮನೆಗಳ ಹಾಗೂ ನಾಲ್ಕು ಅಂತಸ್ತಿನ ಕಟ್ಟಡದ ಕಿಟಕಿ ಗಾಜುಗಳು ಚೂರಾಗಿವೆ. ರಸ್ತೆಯಲ್ಲಿದ್ದ ಮಹೀಂದ್ರಾ ಥಾರ್ ಕಾರು ಸೇರಿದಂತೆ ಹಲವು ವಾಹನಗಳು ಕಣ್ಣುಮುಚ್ಚಿ ತೆರೆಯುವುದರೊಳಗೆ ಸುಟ್ಟು ಭಸ್ಮವಾಗಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಇಡೀ ಪ್ರದೇಶವನ್ನು ಖಾಲಿ ಮಾಡಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು. ತಕ್ಷಣವೇ ಗ್ಯಾಸ್ ಕಂಪನಿಯ ಸಿಬ್ಬಂದಿ ಮುಖ್ಯ ವಾಲ್ವ್ ಬಂದ್ ಮಾಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.