ನಮ್ಮ ಮನೆಗಳಲ್ಲಿ ಸಂಭ್ರಮದ ವಾತಾವರಣ ತರುವ ಶ್ರಾವಣ ಮಾಸ ಬಂದೊಡನೆ ಮೊದಲು ನೆನಪಾಗುವುದೇ ವರಮಹಾಲಕ್ಷ್ಮಿ ಹಬ್ಬ. ಮನೆಯಲ್ಲಿ ಸಿರಿ, ಸಂಪತ್ತು, ಶಾಂತಿ ಮತ್ತು ಎಲ್ಲರ ಆರೋಗ್ಯ ಚೆನ್ನಾಗಿರಲಿ ಎಂದು ಲಕ್ಷ್ಮೀ ದೇವಿಯನ್ನು ಪೂಜಿಸುವ ಸುಂದರ ಹಬ್ಬವಿದು. ಶ್ರಾವಣದ ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದಂದು ಗೃಹಿಣಿಯರು ಈ ವ್ರತವನ್ನು ಶ್ರದ್ಧೆಯಿಂದ ಮಾಡುತ್ತಾಳೆ.

ಇನ್ನು ಈ ಹಬ್ಬದ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಕುಂದಿನಗರ ಎಂಬ ಊರಿನಲ್ಲಿ ಚಾರುಮತಿ ಅನ್ನುವ ಹೆಣ್ಣುಮಗಳಿದ್ದಳು. ಅವಳು ತುಂಬಾ ಒಳ್ಳೆಯ ಗುಣದವಳು. ಗಂಡ, ಅತ್ತೆ-ಮಾವಂದಿರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾ ಸಂಸಾರ ನಡೆಸುತ್ತಿದ್ದಳು. ಅವಳ ಈ ಸದ್ಗುಣಗಳಿಗೆ ಮೆಚ್ಚಿದ ಲಕ್ಷ್ಮೀ ದೇವಿ, ಒಂದು ರಾತ್ರಿ ಚಾರುಮತಿಯ ಕನಸಿನಲ್ಲಿ ಪ್ರತ್ಯಕ್ಷಳಾದಳು. ಶ್ರಾವಣ ಮಾಸದ ಹುಣ್ಣಿಮೆಗೆ ಮುಂಚೆ ಬರುವ ಶುಕ್ರವಾರದಂದು ನನ್ನನ್ನು ಪೂಜೆ ಮಾಡು. ನಿನ್ನ ಮನಸ್ಸಿನ ಎಲ್ಲ ಆಸೆಗಳನ್ನು ಈಡೇರಿಸಿ, ಮನೆಗೆ ಒಳಿತನ್ನು ಮಾಡುತ್ತೇನೆ ಎಂದು ದೇವಿ ಅಭಯ ನೀಡಿದಳು.

ಬೆಳಿಗ್ಗೆ ಎದ್ದ ತಕ್ಷಣ ಚಾರುಮತಿ ತನ್ನ ಕನಸಿನ ವಿಷಯವನ್ನು ಮನೆಯವರಿಗೂ, ನೆರೆಹೊರೆಯ ಹೆಂಗಸರಿಗೂ ತಿಳಿಸಿದಳು. ಎಲ್ಲರೂ ಸೇರಿ ಶ್ರಾವಣ ಶುಕ್ರವಾರದಂದು ದೇವಿಯ ಪೂಜೆಯನ್ನು ಅಚ್ಚುಕಟ್ಟಾಗಿ ಮಾಡಿದರು. ಪೂಜೆ ಮುಗಿಯುತ್ತಿದ್ದಂತೆ ಅಲ್ಲೊಂದು ಪವಾಡವೇ ನಡೆದುಹೋಯಿತು. ಪೂಜೆ ಮಾಡಿದ ಮಹಿಳೆಯರಿಗೆ ಚಿನ್ನಾಭರಣಗಳು ಒಲಿದು ಬಂದವು, ಅವರ ಮನೆಗಳು ಧನ,ಧಾನ್ಯಗಳಿಂದ ತುಂಬಿ ತುಳುಕಿದವು. ಅಂದಿನಿಂದ ಶುರುವಾದ ಈ ಸಂಪ್ರದಾಯ ಇಂದಿಗೂ ಪ್ರತಿಯೊಬ್ಬರ ಮನೆಯಲ್ಲಿ ಸಡಗರ, ಸಂಭ್ರಮದಿಂದ ಮುಂದುವರಿಯುತ್ತಾ ಬಂದಿದೆ.  

ವರಮಹಾಲಕ್ಷ್ಮಿಯನ್ನು ಪೂಜಿಸಿದರೆ ಧನ, ಧಾನ್ಯ, ಧೈರ್ಯ, ವಿಜಯ ಸೇರಿದಂತೆ ಅಷ್ಟಲಕ್ಷ್ಮಿಯರ ಆಶೀರ್ವಾದ ಒಂದೇ ಬಾರಿ ಸಿಗುತ್ತದೆ ಎಂಬ ನಂಬಿಕೆಯಿದೆ. ಹೆಣ್ಣುಮಕ್ಕಳು ತಮ್ಮ ಮುತ್ತೈದೆತನ ಚಿರಕಾಲವಿರಲಿ, ಪತಿ ಮತ್ತು ಮಕ್ಕಳ ಆಯುಷ್ಯ ಹೆಚ್ಚಾಗಲಿ, ಮನೆಯಲ್ಲಿ ಸದಾ ಸಂತೋಷ ನೆಲೆಸಲಿ ಎಂದು ಪ್ರಾರ್ಥಿಸಿ ದೇವಿಗೆ ಬಾಗಿನ ಅರ್ಪಿಸುತ್ತಾರೆ.