ನಾನೊಬ್ಬ ಅನಾಥ, ದಯವಿಟ್ಟು ನನ್ನ ಮದುವೆಗೆ ಬರ್ತೀರಾ?" ಎಂದು ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಮಾಡಿದ್ದ ಭಾವನಾತ್ಮಕ ಮನವಿಗೆ ಚೀನಾದ ಸಾರ್ವಜನಿಕರಿಂದ ಅಭೂತಪೂರ್ವ ಮತ್ತು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಬೆರಳೆಣಿಕೆಯಷ್ಟು ಅತಿಥಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ಮದುವೆ, ಸಾವಿರಾರು ಅಪರಿಚಿತರ ಪ್ರೀತಿ ಮತ್ತು ಸಹಕಾರದಿಂದಾಗಿ ಇದೀಗ ಒಂದು ಅದ್ಧೂರಿ ಸಮಾರಂಭವಾಗಿ ಮಾರ್ಪಟ್ಟಿದೆ.

ಚೀನಾದ ಯುನ್ನಾನ್ ಪ್ರಾಂತ್ಯದ ಝಾವೊಟಾಂಗ್ ಪ್ರದೇಶದ ಯಿಲಿಯಾಂಗ್ ಕೌಂಟಿಯ ನಿವಾಸಿಯಾದ ಷು ಚೆಂಗ್ಹಾಂಗ್ ಎಂಬ ಯುವಕನ ಬಾಲ್ಯ ಸುಲಭವಾಗಿರಲಿಲ್ಲ. ಶಾಲೆಯಲ್ಲಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡ ಈತನಿಗೆ, ತಾಯಿ ಮರುಮದುವೆಯಾದ ಕಾರಣ ಆಪ್ತರು ಯಾರೂ ಇರಲಿಲ್ಲ. ಆತ ಮತ್ತು ಆತನ ತಮ್ಮ ಪರಸ್ಪರ ಆಸರೆಯಾಗಿ ಬೆಳೆದು, ಹಲವು ಕಷ್ಟಗಳ ನಡುವೆ ದುಡಿದು ಜೀವನ ಕಟ್ಟಿಕೊಂಡಿದ್ದರು. ತಾನು ಪ್ರೀತಿಸಿದ ಯುವತಿಯನ್ನು ವಿವಾಹವಾಗಲು ಷು ಹಣವನ್ನೇನೋ ಕೂಡಿಟ್ಟಿದ್ದ, ಆದರೆ ಮದುವೆಗೆ ಆಹ್ವಾನಿಸಲು ಸಂಬಂಧಿಕರೇ ಇಲ್ಲದ ಕಾರಣ ಇಡೀ ಮದುವೆ ಮಂಟಪ ಜನರಿಲ್ಲದೆ ಖಾಲಿ ಉಳಿಯಬಹುದು ಎಂಬ ಚಿಂತೆ ಆತನನ್ನು ಕಾಡಿತ್ತು.

ಸಹಾಯಕ್ಕೆ ಧಾವಿಸಿದ ಇಂಟರ್ನೆಟ್ ಜಗತ್ತು
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಷು ತನ್ನ ಜೀವನದ ಕಥೆಯನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅಪರಿಚಿತರನ್ನೇ ಮದುವೆಗೆ ಆಹ್ವಾನಿಸಿದ್ದ. ಈ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದ್ದು, ಸಾವಿರಾರು ಜನರು ಮದುವೆಗೆ ಬರಲು ಒಪ್ಪಿಕೊಂಡರು. ಕೇವಲ ಅತಿಥಿಗಳಾಗಿ ಬರುವುದಷ್ಟೇ ಅಲ್ಲದೆ, ಬಂದ ಅಪರಿಚಿತರು ಮದುವೆಯ ಸಿದ್ಧತೆಗಳ ಜವಾಬ್ದಾರಿಯನ್ನು ಹೊತ್ತುಕೊಂಡರು. ಕೆಲವರು ಮದುವೆಯ ಅಡುಗೆ ಇನ್ನು ಕೆಲವರು ಮನೆ ಅಲಂಕಾರ ಮತ್ತು ಮೇಣದಬತ್ತಿಗಳ ವ್ಯವಸ್ಥೆ ಮಾಡಲು ನೆರವಾದರು

ಅತಿಥಿಗಳು ಕೇವಲ ಕೈಬೀಸುತ್ತಾ ಬರಲಿಲ್ಲ, ಬದಲಿಗೆ ಆಹಾರ ಸಾಮಗ್ರಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಹಲವು ವಿಶಿಷ್ಟ ಉಡುಗೊರೆಗಳನ್ನು ತಂದಿದ್ದರು. ಕೆಲವು ವರದಿಗಳ ಪ್ರಕಾರ, ಮದುವೆಗೆ ಬಂದವರು ಪ್ರಾಣಿಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಧು-ವರರ ಮೆರವಣಿಗೆಗಾಗಿ ಐಷಾರಾಮಿ ಮೇಬ್ಯಾಕ್ ಕಾರುಗಳ ಸಾಲನ್ನೇ ಸಿದ್ಧಪಡಿಸಲಾಗಿತ್ತು ಮತ್ತು ಒಂದು ಐಷಾರಾಮಿ ಕಾರನ್ನು ದಂಪತಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ವಧುವಿನ ತಂದೆಯೂ ತಮಗೆ ವರದಕ್ಷಿಣೆಯಾಗಿ ನೀಡಿದ್ದ 1.28 ಲಕ್ಷ ಯುವಾನ್ ಹಣವನ್ನು ಮರಳಿ ದಂಪತಿಗೇ ನೀಡಿ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ.

ಸ್ಥಳೀಯ ಆಡಳಿತದ ನೆರವು ಮತ್ತು ವೈರಲ್:
ಆರಂಭದಲ್ಲಿ ಕೆಲವೇ ಜನರು ಬರಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಸಾವಿರಾರು ಜನರು ಮದುವೆಗೆ ಆಗಮಿಸಿದ್ದರಿಂದ ಮೂಲ ಮದುವೆ ಸ್ಥಳದಲ್ಲಿ ಜಾಗದ ಅಭಾವ ಉಂಟಾಯಿತು. ಹೀಗಾಗಿ ಸಮಾರಂಭವನ್ನು ದೊಡ್ಡ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಜನಸಂದಣಿ ನಿಯಂತ್ರಣ, ವಾಹನ ಸಂಚಾರ ಮತ್ತು ಆಹಾರದ ಸುರಕ್ಷತೆಗಾಗಿ ಸ್ಥಳೀಯ ಆಡಳಿತವೂ ವಿಶೇಷ ವ್ಯವಸ್ಥೆಗಳನ್ನು ಮಾಡಿಕೊಟ್ಟಿತ್ತು.

ಈ ಅಪೂರ್ವ ಮದುವೆಯ ವಿಡಿಯೋಗಳು ಸದ್ಯ ಚೀನಾದ ಜಾಲತಾಣಗಳು ಹಾಗೂ Reddit ನಲ್ಲಿ ಭಾರೀ ವೈರಲ್ ಆಗಿದ್ದು, ಅಪರಿಚಿತರೊಬ್ಬರ ಸಂತೋಷಕ್ಕಾಗಿ ಇಡೀ ಸಮುದಾಯವೇ ಒಂದಾಗಿರುವುದನ್ನು ಕಂಡು ಜಗತ್ತಿನಾದ್ಯಂತ ಜನರು ಭಾವುಕರಾಗಿದ್ದಾರೆ. ಇಂಟರ್ನೆಟ್ನ ಸಕಾರಾತ್ಮಕ ಶಕ್ತಿ ಮತ್ತು ಮಾನವೀಯತೆಗೆ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ.