ಇವತ್ತು ಮೊದಲನೇ ದಿನ ಇಂದು ಶೈಲಪುತ್ರಿಯನ್ನು ಅರಾಧನೆ ಮಾಡಲಾಗುತ್ತೆ. ದುರ್ಗಾ ದೇವಿಯ 9 ಅವತಾರಗಳಲ್ಲಿ ಶೈಲಪುತ್ರಿಯೂ ಒಬ್ಬಳು. ಈಕೆಯೇ ಪಾರ್ವತಿ. ಪರ್ವತರಾಜ ಹಿಮವಂತನ ಮಗಳು ಶೈಲಪುತ್ರಿ. ಶೈಲ ಅಂದ್ರೆ ಬೆಟ್ಟ ಅಂತ ಅರ್ಥ.. ಈಕೆ ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದಿರುತ್ತಾಳೆ. ನಮಗೆಲ್ಲಾ ತಿಳಿದಿರುವಂತೆ ದಕ್ಷ ಮಹಾರಾಜನ ಮಗಳು, ಶಿವನ ಪತ್ನಿಯಾದ ಸತಿದೇವಿಯೇ ದಾಕ್ಷಾಯಿಣಿ ಹಾಗೂ ಈ ದಾಕ್ಷಾಯಿಣಿಯೇ ಶೈಲಪುತ್ರಿ. ತನ್ನ ತಂದೆ ದಕ್ಷ ಮಹಾರಾಜನಿಂದ ಅವಮಾನಗೊಂಡು ಯಜ್ಞ ಕುಂಡಕ್ಕೆ ಹಾರಿ ಪ್ರಾಣ ತ್ಯಜಿಸಿದ ದಾಕ್ಷಾಯಿಣಿಯೇ ತನ್ನ ಮುಂದಿನ ಜನ್ಮದಲ್ಲಿ ಶೈಲಪುತ್ರಿಯಾಗಿ ಜನಿಸ್ತಾಳೆ.
ದಸರಾ ಸಂದರ್ಭದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಹ್ವಾನಿಸಿ ಗೌರವಿಸುವ ಸಂಪ್ರದಾಯ ಇದೇ ಕಾರಣಕ್ಕೆ ಬೆಳೆದುಬಂದಿದೆ ಅಂತ ಹೇಳಲಾಗುತ್ತೆ. ಶೈಲಪುತ್ರಿ ದೇವಿಯ ಆರಾಧನೆ ನವರಾತ್ರಿಯ ಮೊದಲ ದಿನದಂದು ಮಾತ್ರವಲ್ಲ..ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಮುಖ್ಯವಾಗಿ ಮಾಡಬೇಕು. ಈಕೆಯ ಆರಾಧನೆಯಿಂದ ತಾಳ್ಮೆ, ಧೈರ್ಯ ಮತ್ತು ಶಾಂತಿ ದೊರಕುತ್ತೆ. ಯಾರಾದ್ರೂ ಏನಾನ್ನಾದ್ರೂ ಸಾಧನೆ ಮಾಡಬೇಕು ಎಂದುಕೊಂಡವರು ಶೈಲಪುತ್ರಿಯನ್ನ ಆರಾಧನೆ ಮಾಡಬೇಕು.. ಯಾರು ಹೀಗೆ ಮಾಡುತ್ತರಾರೋ ಅವರಿಗೆ ಆಕೆಯ ಅನುಗ್ರಹದಿಂದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ತೃಪ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಶೈಲಪುತ್ರಿ ದೇವಿಯ ಹೆಸರು ಸ್ವತಃ ಶಕ್ತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ ಮತ್ತು ಅವಳನ್ನು ಪೂಜಿಸುವುದರಿಂದ ಭಕ್ತನು ಅಪಾರ ಸಂತೋಷ ಮತ್ತು ಶಾಂತಿಯನ್ನು ಪಡೆಯುತ್ತಾರೆ.
ಶೈಲಪುತ್ರಿಯನ್ನು ಪೂಜಿಸುವ ವಿಧಾನ ಯಾವುದು .?
ಹಾಗಿದ್ದರೆ ಈ ಮಾತೆಯನ್ನು ಪೂಜೆ ಮಾಡುವುದು ಹೇಗೆ ಎನ್ನುವುದನ್ನು ನಾವು ನಿಮಗೆ ಹೇಳಿ ಕೊಡುತ್ತೇವೆ. ಮೊದಲು ಪೂಜೆ ಮಾಡುವ ವ್ಯಕ್ತಿ ತಾನು ದೈಹಿಕವಾಗಿ ಶುಚಿಯಾಗ್ಬೇಕು. ಮತ್ತು ಪೂಜೆ ಮಾಡುವ ಸ್ಥಳವನ್ನ ಶುದ್ಧಗೊಳಿಸಬೇಕು. ಶೈಲಪುತ್ರಿ ದೇವಿಯ ವಿಗ್ರಹ ಅಥವಾ ಫೋಟೋವನ್ನ ಪವಿತ್ರ ಸ್ಥಳದಲ್ಲಿ ಸ್ಥಾಪಿಸಿ ಅದಕ್ಕೆ ಹೂವಿನ ಹಾರವನ್ನ ಅರ್ಪಿಸಬೇಕು. ಬಿಳಿ ಬಣ್ಣದ ಬಟ್ಟೆ ಮತ್ತು ಹೂವುಗಳನ್ನ ತಾಯಿಗೆ ಮೀಸಡಿಡಬೇಕು. ಏಕೆಂದರೆ ಈ ಬಣ್ಣವು ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಇದರ ನಂತರ, ಪೂಜೆ ಮಾಡುವ ವ್ಯಕ್ತಿಯು ತಾಯಿ ಶೈಲಪುತ್ರಿಯ ಮಂತ್ರಗಳನ್ನು ಪಠಿಸಬೇಕು. ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಶೈಲಪುತ್ರಿಯ ಮುಖ್ಯ ಮಂತ್ರವೆಂದರೆ
ಶೈಲಪುತ್ರಿಯನ್ನು ಯಾವ ಮಂತ್ರದಿಂದ ಸ್ಮರಿಸಬೇಕು.?
ಓಂ ದೇವಿ ಶೈಲಪುತ್ರಿಯೇ ನಮಃ”ಯಾ ದೇವಿ ಸರ್ವಭೂತೇಷು, ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ಜಯಂತಿ ಮಂಗಳ ಕಾಳಿ, ಭದ್ರ ಕಾಳಿ, ಕಪಾಲಿನಿ ದುರ್ಗಾ ಕ್ಷಮಾ ಶಿವಧಾತ್ರಿ ಸ್ವಾಹ ಸ್ವಧಾ ನಮೋಸ್ತುತೇ ಸರ್ವ ಬಾಧ ವಿನಿರ್ಮುಕ್ತೋ ಧನ ಧಾನ್ಯೇ ಸುತಾನ್ವಿತಃ ಮನುಷ್ಯೋ ಮತ್ ಪ್ರಸಾದೇನ್ ಭವಿಷ್ಯತಿ ನ ಸಂಶಯಃ ಓಂ ಹ್ರೀಂ ಶ್ರೀ ಶೈಲಪುತ್ರಿ ದುರ್ಗಾಯೇ ನಮಃ ಓಂ ದೇವಿ ಶೈಲಪುತ್ರೈ ಸ್ವಾಹಾ ಈ ಮಂತ್ರವನ್ನ ಪಠಿಸ್ಬೇಕು.
ಇದರ ಜೊತೆ ನೀವಿನ್ನೂ ಅವಿವಾಹಿತರಾಗಿದ್ರೆ ಶೀಘ್ರದಲ್ಲೇ ಮದುವೆಯಾಗಲು ಬಯಸಿದ್ರೆ ಹಾಗೇ ಉತ್ತಮ ಜೀವನ ಸಂಗಾತಿಯನ್ನ ಪಡೆಯಲು ಬಯಸಿದ್ರೆ ಅಂತಹ ಪರಿಸ್ಥಿತಿಯಲ್ಲಿ ನೀವು ಈ ಮಂತ್ರವನ್ನು ಪಠಿಸಬಹುದು. ಪುರುಷ ಅಥವಾ ಮಹಿಳೆಯಾಗಿರಲಿ, ನೀವು ಅವಿವಾಹಿತರಾಗಿರಲಿ ಅಥವಾ ವಿವಾಹಿತರಾಗಿರಲಿ, ನೀವು ಯಾರೇ ಆಗಿರಲಿ, ನೀವು ತಾಯಿಯನ್ನು ಪೂಜಿಸಿದರೆ ನೀವು ಈ ಮಂತ್ರವನ್ನು ಪಠಿಸಬೇಕು.ಕೊನೆಯಲ್ಲಿ, ದೇವಿಯ ಬಳಿ ತಿಳಿದೋ ಅಥವಾ ತಿಳಿಯದೆಯೋ ಏನಾದರೂ ತಪ್ಪಾಗಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸ್ಬೇಕು.
ಇದರೊಂದಿಗೆ ತಾಯಿಗೆ ಪ್ರಸಾದವನ್ನ ಅರ್ಪಿಸಿ ಮತ್ತು ಅಂತಿಮವಾಗಿ ತಾಯಿಗೆ ಆರತಿಯನ್ನು ಮಾಡಬೇಕು . ಇನ್ನು ಇದೇ ದಿನ ಘಟಸ್ಥಾಪನೆ ಮಾಡಬೇಕು. ಘಟಸ್ಥಾಪನೆಯು ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದು ಒಂಬತ್ತು ದಿನಗಳ ಹಬ್ಬದ ಆರಂಭವನ್ನ ಸೂಚಿಸುತ್ತದೆ. ಇನ್ನು ದೇವಾನು ದೇವತೆಗಳು ಕೂಡಾ ಶೈಲಪುತ್ರಿಯನ್ನ ಪೂಜೆ ಮಾಡ್ತಾರೆ. ಆಕೆಯ ಶಕ್ತಿಯನ್ನರಿತ ದೇವತೆಗಳು ತುಂಬಾನೇ ವಿನಮ್ರರಾಗಿ ಕೈ ಮುಗಿದು ನಿಲ್ಲುತ್ತಾರೆ ಅನ್ನೋ ನಂಬಿಕೆ ಇದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ಚರ ಕೂಡ ಶೈಲಪುತ್ರಿಗೆ ಅಗ್ರಸ್ಥಾನ ನೀಡಿದ್ದಾರೆ.
ಯಾವ ಬಣ್ಣದ ಬಟ್ಟೆ ಧರಿಸಬೇಕು.? ಏನು ಪ್ರಸಾದ ಮಾಡಬೇಕು.?
ಇನ್ನು ಈಕೆ ಸೌಮ್ಯ ಸ್ವಭಾವದವಳಾಗಿದ್ದಾಳೆ. ಇದರಿಂದ ಕಿತ್ತಳೆ ಅಥವಾ ಹಳದಿ ಬಣ್ಣದ ಬಟ್ಟೆಯನ್ನ ಧರಿಸಬೇಕು. ಅದೇ ರೀತಿ ಪೂಜೆಗೆ ಯಾವ ರೀತಿಯ ವೈವೇದ್ಯೆ ಅರ್ಪಿಸಬೇಕು ಅನ್ನೋದು ಇಲ್ಲಿ ಪ್ರಶ್ನೆ. ದೇವಿಗೆ ನೈವೇದ್ಯವಾಗಿ ಹಾಲು, ತುಪ್ಪ, ಸಕ್ಕರೆ ಮತ್ತು ಅಕ್ಕಿಯಿಂದ ತಯಾರಿಸಿದ ಪಾಯಸ ಅರ್ಪಿಸಬೇಕು. ಶೈಲಪುತ್ರಿಗೆ ದೀಪ ಧೂಪದಾರತಿಯನ್ನ ಮಾಡಿ ಊದುಬತ್ತಿಯಿಂದ ಪೂಜಿಸಬೇಕು. ಹೂ, ಹಣ್ಣು, ಫಲ ಮತ್ತು ಸಿಹಿ ತಿನಿಸು ಸಮರ್ಪಿಸಬೇಕು. ಇದಲ್ಲದೇ ತಾಯಿ ಶೈಲಪುತ್ರಿಯ ಹಸುವಿನ ಮೇಲೆ ಕುಳಿತು ಸವಾರಿ ಮಾಡ್ತಾಳೆ. ಇದ್ರಿಂದ ಹಸುವಿನ ಹಾಲಿನಿಂದ ಮಾಡಿದ ವಸ್ತುಗಳನ್ನ ಮಾತ್ರ ಅವಳಿಗೆ ಅರ್ಪಿಸಲಾಗುತ್ತೆ. ಪಂಚಾಮೃತವನ್ನ ಹೊರತುಪಡಿಸಿ ಶೈಲಪುತ್ರಿ ದೇವಿಗೆ ಹಾಲಿನಿಂದ ಮಾಡಿದ ಖೀರ್ ಅಥವಾ ಬರ್ಫಿ ಅರ್ಪಿಸಬಹುದಾಗಿದೆ. ಇದಲ್ಲದೇ ನೀವು ತುಪ್ಪದಿಂದ ಮಾಡಿದ ಹಲ್ವಾವನ್ನ ಸಹ ನೀಡಬಹುದು. ವಿಶೇಷ ಅಂದ್ರೆ.. ಹಸುವಿನ ಹಾಲಿನಿಂದ ಮಾಡಿದ ಬರ್ಫಿಯನ್ನು ದೇವಿಗೆ ನೈವೇದ್ಯ ಮಾಡುವುದಲ್ಲದೆ ಉಪವಾಸದ ಸಮಯದಲ್ಲಿ ಅದನ್ನ ಸೇವಿಸಬಹುದು.
ಶೈಲಪುತ್ರಿಯ ಆರಾಧನೆಯಿಂದ ಸಿಗುವ ಫಲವೇನು.?
ಶೈಲಪುತ್ರಿಯ ಆರಾಧನೆಯಿಂದ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸೋ ಶಕ್ತಿ ದೊರೆಯುತ್ತೆ. ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಅಡೆತಡೆಗಳಿಗೆ ಪರಿಹಾರ ಸಿಗಲಿದೆ. ಭಕ್ತರು ಈ ದಿನ ಶ್ರದ್ಧಾ ಭಕ್ತಿಯಿಂದ ಶೈಲಪುತ್ರಿಯನ್ನ ಪೂಜಿಸಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗಲಿದೆ. ಅಲ್ಲದೆ ಶೈಲಪುತ್ರಿಯ ಆಶೀರ್ವಾದ ಲಭಿಸಲಿದೆ. ಸರಿ ಹಾಗಿದ್ರೆ ನಾವು ಹೇಳಿದಂತೆ ಪೂಜಾಕ್ರಮಗಳನ್ನ ಅನುಸರಿಸಿ ದೇವಿಯ ಕೃಪೆಗೆ ಪಾತ್ರರಾಗಿ ನಾಳೆ ನಿಮಗೆ ನವರಾತ್ರಿಯ ಎರಡನೇ ದಿನ ಯಾವ ದೇವಿಯನ್ನು ಪೂಜೆ ಮಾಡಬೇಕು ಎನ್ನುವುದರ ಮಾಹಿತಿ ನೀಡುತ್ತೇವೆ. ದೈವಿ ಶೈಲಪುತ್ರಿ ನಿಮಗೆಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂದು ತಾಯ್ನಾಡು ನ್ಯೂಸ್ ಆಶಿಸುತ್ತದೆ.

