ಹಿಂದೂ ಧರ್ಮದಲ್ಲಿ ಪವಿತ್ರ ಹಾಗೂ ಮಂಗಲಕರವೆಂದು ಪರಿಗಣಿಸಲ್ಪಟ್ಟಿರುವ ವರಮಹಾಲಕ್ಷ್ಮಿ ವ್ರತವನ್ನು ಈ ವರ್ಷ ಶ್ರಾವಣ ಮಾಸದ ಹುಣ್ಣಿಮೆಗೂ ಮುನ್ನ ಬರುವ ಶುಕ್ರವಾರವಾದ ಆಗಸ್ಟ್ 21, 2026 ರಂದು ಆಚರಿಸಲಾಗುತ್ತದೆ. ಕೆಲ ಪಂಚಾಂಗಗಳಲ್ಲಿ ದಿನಾಂಕದ ಬಗ್ಗೆ ಸಣ್ಣ ಗೊಂದಲಗಳಿದ್ದರೂ, ಶ್ರಾವಣ ಹುಣ್ಣಿಮೆಗೆ ಹಿಂದಿನ ಸರಿಯಾದ ಶುಕ್ರವಾರದ ನಿಯಮದಂತೆ ಆಗಸ್ಟ್ 21ರಂದು ಪೂಜೆ ನಡೆಸುವುದು ಶಾಸ್ತ್ರಸಮ್ಮತವಾಗಿದೆ.

ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯಕ್ಕಾಗಿ ಈ ವ್ರತವನ್ನು ಅತ್ಯಂತ ಶ್ರದ್ಧಾ,ಭಕ್ತಿಗಳಿಂದ ಆಚರಿಸುತ್ತಾರೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಅಷ್ಟ ಲಕ್ಷ್ಮಿಯರಾದ ಆದಿ, ಧಾನ್ಯ, ಧೈರ್ಯ, ಗಜ, ಸಂತಾನ, ವಿಜಯ, ವಿದ್ಯಾ ಮತ್ತು ಧನ ಲಕ್ಷ್ಮಿ ದೇವಿಯರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಪೂಜಾ ವಿಧಾನ ಮತ್ತು ಆಚರಣೆ

ಪೂಜೆಯ ದಿನದಂದು ಮನೆಯನ್ನು ಸ್ವಚ್ಛಗೊಳಿಸಿ, ಸುಂದರವಾದ ಮಂಟಪ ಅಥವಾ ಹೂವು, ಹಣ್ಣುಗಳಿಂದ ಅಲಂಕರಿಸಿದ ಜಾಗದಲ್ಲಿ ಅಕ್ಕಿಯನ್ನು ಹರವಿ ಅದರ ಮೇಲೆ ಕಲಶವನ್ನು ಸ್ಥಾಪಿಸಲಾಗುತ್ತದೆ. ಕಲಶಕ್ಕೆ ತೆಂಗಿನಕಾಯಿ ಮತ್ತು ಮಾವಿನ ಎಲೆಗಳನ್ನು ಇಟ್ಟು, ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಆವಾಹನೆ ಮಾಡಲಾಗುತ್ತದೆ. ಈ ಪೂಜೆಯಲ್ಲಿ ಹಳದಿ ದಾರಕ್ಕೆ ಒಂಬತ್ತು ಗಂಟುಗಳನ್ನು ಹಾಕಿ, ದೇವಿಯ ಬಳಿ ಇಟ್ಟು ಪೂಜಿಸಿ ನಂತರ ಮುತ್ತೈದೆಯರು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ದೇವರಿಗೆ ವಿವಿಧ ಬಗೆಯ ನೈವೇದ್ಯ ಮತ್ತು ಸಿಹಿ ಪದಾರ್ಥಗಳನ್ನು ಅರ್ಪಿಸಿ, ಪೂಜೆಯ ನಂತರ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಹಣ್ಣು ಹಾಗೂ ಮಂಗಲ ದ್ರವ್ಯಗಳನ್ನೊಳಗೊಂಡ ಬಾಗಿನವನ್ನು ನೀಡಿ ಆಶೀರ್ವಾದ ಪಡೆಯಲಾಗುತ್ತದೆ.

ಪೂಜಾ ಮುಹೂರ್ತದ ಮಹತ್ವ

ಆಗಸ್ಟ್ 21, 2026 ರ ವರಮಹಾಲಕ್ಷ್ಮಿ ವ್ರತದ ಪೂಜೆಗೆ ಪಂಚಾಂಗದ ಪ್ರಕಾರ ಸ್ಥಿರ ಲಗ್ನ ಮುಹೂರ್ತಗಳು ಅತ್ಯಂತ ಸೂಕ್ತವಾಗಿವೆ. ಚಲಿಸದ 'ಸ್ಥಿರ' ಲಗ್ನದಲ್ಲಿ ಪೂಜೆ ಸಲ್ಲಿಸುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ಸದಾಕಾಲ ಸ್ಥಿರವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಸ್ಥಿರ ಲಗ್ನಗಳಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ಸಕಲ ಸಂಪತ್ತು ಮತ್ತು ಸೌಭಾಗ್ಯಗಳು ಸಿದ್ಧಿಸುತ್ತವೆ.

ವರಮಹಾಲಕ್ಷ್ಮಿ ವ್ರತದ ಲಕ್ಷ್ಮಿ ಪೂಜೆಗೆ ಬೆಳಿಗ್ಗೆ 06:53 ರಿಂದ 08:56 ರವರೆಗಿನ ಸಿಂಹ ಲಗ್ನ ಹಾಗೂ ಸಂಜೆ 07:39 ರಿಂದ 09:05 ರವರೆಗಿನ ಕುಂಭ ಲಗ್ನವು ಪೂಜೆಗೆ ಅತ್ಯಂತ ಶುಭವಾದ ಪ್ರಮುಖ ಸಮಯವಾಗಿದೆ.

ಬೆಳಿಗ್ಗೆ - ಸಿಂಹ ಲಗ್ನ : ಬೆಳಿಗ್ಗೆ 06:53 ರಿಂದ 08:56 ಮುಖ್ಯ ಪೂಜೆಗೆ ಉತ್ತಮ ಸಮಯ

ಮಧ್ಯಾಹ್ನ - ವೃಶ್ಚಿಕ ಲಗ್ನ : ಮಧ್ಯಾಹ್ನ 01:35 ರಿಂದ 03:54

ಸಂಜೆ - ಕುಂಭ ಲಗ್ನ / ಪ್ರದೋಷ ಕಾಲ : ಸಂಜೆ 07:39 ರಿಂದ 09:05 ದೇವಿಯ ಆರಾಧನೆಗೆ ಅತ್ಯಂತ ಶ್ರೇಷ್ಠ

ರಾತ್ರಿ - ವೃಷಭ ಲಗ್ನ : ರಾತ್ರಿ 12:03 ರಿಂದ 01:58 (ಆಗಸ್ಟ್ 22)