ಅಸ್ಸಾಂನ ಒಂದು ಲೋಕಸಭಾ ಕ್ಷೇತ್ರ ಮತ್ತು ಪಶ್ಚಿಮ ಬಂಗಾಳ, ತಮಿಳುನಾಡು, ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಐದು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಇವತ್ತು ಬೆಳಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯ ನಡುವೆ ಪ್ರಾರಂಭವಾಗಿದೆ. ಅಕ್ಟೋಬರ್ 6ರಂದು ಈ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ಪೈಕಿ ನಂದಿಗ್ರಾಮ, ನಗಾಂವ್ ಕ್ಷೇತ್ರದ ಫಲಿತಾಂಶವು ಹೆಚ್ಚು ಕುತೂಹಲಕಾರಿಯಾಗಿದೆ.

ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮುಕ್ತಾಯದ ನಂತರ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ 9,600 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ರಾಜಕೀಯ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ಈ ಫಲಿತಾಂಶವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಮಂಗಳವಾರ ನಡೆದಿದ್ದ ಮತದಾನದಲ್ಲಿ ಶೇ. 80.89 ರಷ್ಟು ಮತದಾನ ದಾಖಲಾಗಿತ್ತು. ಮತದಾನದ ವೇಳೆ ವೋಟರ್ಗಳಿಗೆ ಬೆದರಿಕೆ ಹಾಗೂ ಸಣ್ಣಪುಟ್ಟ ಘರ್ಷಣೆಗಳ ಆರೋಪಗಳು ಕೇಳಿಬಂದಿದ್ದವು. ಪಶ್ಚಿಮ ಬಂಗಾಳದ ರೇಜಿನಗರದಲ್ಲಿಯೂ ಉಪಚುನಾವಣೆ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿಯ ಶಂಖರಾವ್ ಸರ್ಕಾರ್ 16,550 ಮತಗಳ ಬೃಹತ್ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸೆ ನ ಮೊಹಮ್ಮದ್ ಅಬ್ದುಲ್ಲಾಹಿಲ್ ಕಾಫಿ ಅವರನ್ನು ಹಿಂದಿಕ್ಕಿ ಮುನ್ನಡೆ ಕಾಯ್ದು ಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಆಮ್ ಜನತಾ ಇನ್ನಯನ್ ಪಕ್ಷದ ಗುಲಾಮ್ ನಬಿ ಆಜಾದ್ ಇದ್ದಾರೆ. ಮುಂದಿನ ಫಲಿತಾಂಶವನ್ನು ನಿರೀಕ್ಷೆ ಮಾಡಲಾಗುತ್ತಿದೆ.