ಸಾಂವಿಧಾನಿಕ ಪ್ರಾಧಿಕಾರಗಳು ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ಪದೇ ಪದೇ ಕಳ್ಳರು ಮತ್ತು “ಅನ್ಯಾಯದ ಜೊತೆ ಶಾಮೀಲಾದವರು ಎಂದು ಸಾರ್ವಜನಿಕವಾಗಿ ನಿಂದಿಸಲಾಗುತ್ತಿದ್ದು ಇದರ ವಿರುದ್ಧ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಮತ್ತು ನಿರಂತರ ದಾಳಿಗಳು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ದೇಶದ ಜನರು ಇಟ್ಟಿರುವ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತವೆ ಎಂದು ಅವರು ಆತಂಕ ಹೊರಹಾಕಿದ್ದಾರೆ.
ಪತ್ರದಲ್ಲಿ ಪ್ರಜಾಪ್ರಭುತ್ವದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಯನ್ನು ನೆನಪಿಸಿರುವ ನಿವೃತ್ತ ನ್ಯಾಯಾಧೀಶರುಗಳು ಯಾವುದೇ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯನ್ನು ವಿಮರ್ಶಿಸುವುದು ಅಥವಾ ಆರೋಗ್ಯಕರವಾಗಿ ಟೀಕಿಸುವುದು ಪ್ರಜಾಪ್ರಭುತ್ವ ನೀಡಿರುವ ಸಾಂವಿಧಾನಿಕ ಹಕ್ಕಾಗಿದೆ. ಆದರೆ ರಾಜಕೀಯ ದ್ವೇಷ ಸಾಧನೆಗಾಗಿ ಸಂಸ್ಥೆಗಳನ್ನು ವೈಯಕ್ತಿಕವಾಗಿ ನಿಂದಿಸುವುದು ಅಥವಾ ಅವುಗಳ ಸಾರ್ವಜನಿಕ ಘನತೆಗೆ ಧಕ್ಕೆ ತರುವುದು ಯಾವುದೇ ಕಾರಣಕ್ಕೂ ನಾಗರಿಕರ ಹಕ್ಕಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಪ್ರತಿಪಕ್ಷಗಳು ಮಾಡುತ್ತಿರುವ ವೋಟ್ ಕಳ್ಳತನದ ಆರೋಪಗಳನ್ನು ಕಟುವಾಗಿ ಟೀಕಿಸಿರುವ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳನ್ನು ಕೇವಲ ರಾಜಕೀಯ ಪ್ರೇರಿತ ಮಾಧ್ಯಮ ಗೋಷ್ಠಿಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಆದರೆ, ಇದೇ ವಿಷಯವನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ನ್ಯಾಯಾಲಯದ ಮುಂದೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳನ್ನು ಸಲ್ಲಿಸುತ್ತಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ.ಚುನಾವಣಾ ಆಯೋಗವು ಅಫಿಡವಿಟ್ ನೀಡುವಂತೆ ಕೋರಿದಾಗ ಮಾತ್ರ ಯಾರೂ ಸಲ್ಲಿಸುವುದಿಲ್ಲ. ಹಾಗೇ, ಚುನಾವಣೆಯಲ್ಲಿ ಸೋತಾಗ ಇವಿಎಂ ಯಂತ್ರಗಳನ್ನು ದೂಷಿಸಿ, ಗೆದ್ದಾಗ ಅದೇ ಇವಿಎಂಗಳನ್ನು ಪ್ರಶ್ನಿಸದಿರುವ ವಿರೋಧ ಪಕ್ಷಗಳ ದ್ವಂದ್ವ ನೀತಿಯನ್ನು ನ್ಯಾಯಾಧೀಶರುಗಳು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
