ಸಿದ್ದರಾಮಯ್ಯ ಇಲ್ಲಿ ಮತ್ತೊಮ್ಮೆ ತಮ್ಮ ಆಪ್ತರ ಪರ ಬ್ಯಾಟ್ ಬೀಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಾದಾಮಿ ಶಾಸಕ ಬಸವರಾಜ ಶಿವಣ್ಣನವರ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಸಿದ್ದರಾಮಯ್ಯ ವೇಣುಗೋಪಾಲ್ ಅವರಲ್ಲಿ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಎರಡೇ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ತಮ್ಮದೇ ಕುರುಬ ಸಮುದಾಯದ ನಾಯಕ ಶಿವಣ್ಣನವರ್ ಅವರನ್ನು ಸಚಿವರನ್ನಾಗಿ ಮಾಡುವಂತೆ ಹೈಕಮಾಂಡ್ಗೆ ಶಿಫಾರಸು ಮಾಡಿದ್ದರು. ಆದರೆ ಆಗ ಆಗಿದ್ದೇ ಬೇರೆ. ಸಿದ್ದರಾಮಯ್ಯರ ಶಿಫಾರಸನ್ನು ಹೈಕಮಾಂಡ್ ಒಪ್ಪದೆ, ಇದೇ ಸಮುದಾಯದ ಚಿಕ್ಕಮಗಳೂರು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಸಚಿವರನ್ನಾಗಿ ಮಾಡಲು ಮುಂದಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಸೇರ್ಪಡೆ ಕೈಬಿಡಲಾಗಿತ್ತು.
ಕೆಲ ಮೂಲಗಳ ಪ್ರಕಾರ, ಶಿವಣ್ಣನವರ್ ಹೆಸರನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ ಎಂಬ ಮಾಹಿತಿ ಇದೆ. ಇನ್ನು ಮಹಿಳಾ ಕೋಟಾದಡಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ ಎನ್ನಲಾಗುತ್ತಿದೆ. ಅದೇ ರೀತಿ ಬಳ್ಳಾರಿ ಸಂಸದ ಈ. ತುಕಾರಾಂ ಪತ್ನಿ, ಪರಿಶಿಷ್ಟ ಪಂಗಡದ ನಾಯಕಿ ಹಾಗೂ ಮೊದಲ ಬಾರಿಗೆ ಶಾಸಕರಾಗಿರುವ ಅನ್ನಪೂರ್ಣ ಮತ್ತು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರುಗಳು ಓಡಾಡುತ್ತಿವೆ.
ಇದೇ ವೇಳೆ ಸಿದ್ದರಾಮಯ್ಯ ನಿಗಮ-ಮಂಡಳಿಗಳ ನೇಮಕಾತಿ ಬಗ್ಗೆಯೂ ವೇಣುಗೋಪಾಲ್ ಜೊತೆ ಚರ್ಚಿಸಿದ್ದಾರಂತೆ. ಸಿದ್ದರಾಮಯ್ಯನವರ ಸಲಹೆ ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡುವ ನಿರೀಕ್ಷೆಯಿದ್ದು, ನಿಗಮ-ಮಂಡಳಿಗಳ ನೇಮಕಾತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನಗಳು ಹಾಗೂ ನಿಗಮ ಮಂಡಳಿಗಳ ನೇಮಕಕ್ಕೆ ಹೈಕಮಾಂಡ್ ಬಹುತೇಕ ಅಸ್ತು ಎಂದಿದೆಯಂತೆ.ಆದರೆ ಐವರು ವಿಧಾನ ಪರಿಷತ್ ಸದಸ್ಯರ ನಾಮನಿರ್ದೇಶನವನ್ನು ನವೆಂಬರ್ವರೆಗೆ ಮುಂದೂಡುವ ಬಗ್ಗೆ ಚಿಂತನೆ ನಡೆಸಿದೆಯಂತೆ. ಇನ್ನು ಇಲ್ಲೊಂದು ಪ್ರಶ್ನೆ ಉದ್ಭವಿಸುತ್ತೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಿಟ್ಟು ಸಿದ್ದರಾಮಯ್ಯ ವೇಣುಗೋಪಾಲ್ ರನ್ನು ಭೇಟಿ ಮಾಡಿದ್ದು ಏಕೆ ಎನ್ನುವುದು. ಅಲ್ಲಿ ನಿಜವಾಗಿಯೂ ಕೇವಲ ಸಂಪುಟ ವಿಸ್ತರಣೆ ಹಾಗೂ ನಿಗಮಮಂಡಳಿಗಳ ಬಗ್ಗೆ ಮಾತ್ರ ಚರ್ಚೆ ಆಯ್ತಾ ಎನ್ನುವುದೇ ವಿಷಯಗಳು ಮುನ್ನೆಲೆಗೆ ಬಂತಾ.? ಈ ವಿಷಯ ಸದ್ಯಕ್ಕೆ ಯಾರಿಗೂ ಗೊತ್ತಿಲ್ಲ.


