ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ನ್ಯಾಯಾಲಯದಲ್ಲಿ AISF ನಾಯಕಿ ಆಯಿಷಾ ಘೋಷ್ ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. SIR ವಿರೋಧಿ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಈ ಬೃಹತ್ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮತ ಕದಿಯುವವರೇ ಅಧಿಕಾರ ಬಿಟ್ಟು ತೊಲಗಿ ಎಂದು ಹೇಳುತ್ತಾ ಭಾಷಣ ಆರಂಭಿಸಿದ ಅವರು ದೇಶದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಕಳವಳ ವ್ಯಕ್ತಪಡಿಸಿದರು. ನಾವು ದೇಶದಲ್ಲಿ ಪ್ರಸ್ತುತ ಏನೇನು ನಡೆಯುತ್ತಿದೆ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ. ದೇಶದ ಬೆನ್ನೆಲುಬನ್ನು ಮುರಿಯಲು ಮತ್ತು ನಾಗರಿಕರ ಮೂಲಭೂತ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಿತ್ತುಕೊಳ್ಳಲು ಪ್ರಸ್ತುತ ಸರ್ಕಾರ ನಿರಂತರವಾಗಿ ಯತ್ನಿಸುತ್ತಿದೆ ಎಂದು ಆರೋಪ ಮಾಡಿದರು. ಇಂತಹ ಸರ್ವಾಧಿಕಾರಿ ಧೋರಣೆಯನ್ನು ನಾವ್ಯಾರೂ ಎಂದಿಗೂ ಸುಮ್ಮನೆ ಸಹಿಸುವುದಿಲ್ಲ ಎಂದು ಅವರು ಕೇಂದ್ರ ಸರ್ಕಾರಕ್ಕೆ ನೇಕವಾಗಿ ಎಚ್ಚರಿಸಿದರು.
ಹೋರಾಟಗಾರರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಅವರ ಮನೋಬಲ ಕಿಚ್ಚನ್ನು ಕುಗ್ಗಿಸಲು ಆಡಳಿತಾರೂಢ ಸರ್ಕಾರ ನಿರಂತರವಾಗಿ ಯತ್ನ ನಡೆಸುತ್ತಿದೆ. ಆದರೆ ಎಷ್ಟೇ ಬಂಧನಗಳು ಎದುರಾದರೂ ನಮ್ಮ ಹೋರಾಟದ ಉತ್ಸಾಹ, ಬದ್ಧತೆ ಹಾಗೂ ಆತ್ಮಸ್ಥೈರ್ಯವನ್ನು ಹಾಳುಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಈ ಸರ್ವಾಧಿಕಾರಿ ಸರ್ಕಾರದ ವಿರುದ್ಧ ನಾವೆಲ್ಲಾ ಒಟ್ಟಾಗಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಮತ್ತಷ್ಟು ಬಲವಾದ ಒಗ್ಗಟ್ಟಿನಿಂದ ಹೋರಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು ಈ ದೇಶವು ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಇಷ್ಟದಂತೆ ನಡೆಯಲು ಸಾಧ್ಯವಿಲ್ಲ. ಬದಲಾಗಿ, ಭಾರತದ ಪವಿತ್ರ ಸಂವಿಧಾನದಲ್ಲಿ ಉಲ್ಲೇಖಿಸಲಾದ ಪ್ರಜಾಪ್ರಭುತ್ವದ ಮೌಲ್ಯಗಳು, ಸಮಾನತೆ ಹಾಗೂ ಆಶಯಗಳ ಪ್ರಕಾರವೇ ದೇಶ ಸಾಗಬೇಕು. ಆದರೆ ಪ್ರಸ್ತುತ ಆಡಳಿತ ನಡೆಸುತ್ತಿರುವವರಿಗೆ ಸಂವಿಧಾನದ ಆಶಯಗಳ ಮೇಲೆ ಯಾವುದೇ ಗೌರವವಿಲ್ಲ. ಸಂವಿಧಾನದ ಹಾದಿಯಲ್ಲಿ ದೇಶವನ್ನು ಮುನ್ನಡೆಸುವುದು ಅವರಿಗೆ ಬೇಕಾಗಿಲ್ಲ ಎಂದು ಕಟುವಾಗಿ ಆಕ್ಷೇಪಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ನಾಗರಿಕರು ಜಾಗೃತರಾಗಿದ್ದಾರೆ ಎಂದ ಆಯಿಷಾ ಘೋಷ್ ನಾವೆಲ್ಲರೂ ಒಗ್ಗೂಡಿ ನಡೆಸುತ್ತಿರುವ ಈ ವ್ಯವಸ್ಥಿತ ಹೋರಾಟ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವವರೆಗೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು ಕಾರ್ಯಕ್ರಮದ ಅಂತ್ಯದಲ್ಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ಒಗ್ಗೂಡಿರುವ ಎಲ್ಲ ಸಂಘಟನೆಗಳಿಗೆ ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಿದ ಜೈ ಭೀಮ್ ಹಾಗೂ ಇಂಕ್ವಿಲಾಬ್ ಜಿಂದಾಬಾದ್’ ಎಂಬ ಕ್ರಾಂತಿಕಾರಿ ಘೋಷಣೆಗಳೊಂದಿಗೆ ಭಾಷಣ ಮುಕ್ತಾಯ ಮಾಡಿದರು
