ಜಂತರ್ ಮಂತರ್ ನಲ್ಲಿಮಹಿಳಾ ಪತ್ರಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ದೆಹಲಿಯ ಕನ್ನಾಟ್ ಪ್ಲೇಸ್ ವಿಭಾಗದ ಎಸಿಪಿ ವಿವೇಕ್ ಭಗತ್ ವಿರುದ್ಥ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಬದಲಿಗೆ ಹೆಚ್ಚುವರಿ ಡಿಸಿಪಿ ಆಗಿ ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ವಿವೇಕ್ ಭಗತ್ ವಿರುದ್ಧ ಲೈಂಗಿಕ ಕಿರುಕುಳದಂಥ ಗಂಭೀರ ಆರೋಪ ಕೇಳಿ ಬರುತ್ತಿರುವಾಗಲೇ ಆಈ ಬಡ್ತಿ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಹಿರಿಯ ಅಧಿಕಾರಿಗಳು ಇದೊಂದು ವಾಡಿಕೆಯ ಪ್ರಕ್ರಿಯೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳ ಬಡ್ತಿಗೆ ಸಂಬಂಧಿಸಿದ ಕಡತಗಳನ್ನು ಬಹಳ ಹಿಂದೆಯೇ ಸರ್ಕಾರಕ್ಕೆ ರವಾನಿಸಲಾಗಿತ್ತು. ಅದರಂತೆ ವಿವೇಕ್ ಭಗತ್ ಅವರೊಂದಿಗೆ ಇತರ 11 ಅಧಿಕಾರಿಗಳಿಗೂ ಬಡ್ತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಶನಿವಾರ ಜಂತರ್ ಮಂತರ್‌ನಲ್ಲಿ ಸಿಜೆಪಿ ಕಾರ್ಯಕರ್ಕರು ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಮೂವರು ಮಹಿಳಾ ಪತ್ರಕರ್ತೆಯರು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದರು, ಆದರೆ ಆ ಸ್ಥಳದಲ್ಲಿ ಯಾವುದೇ ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಈ ಬಗ್ಗೆ ನಾನು ಎಸಿಪಿ ವಿವೇಕ್ ಭಗತ್ ಅವರನ್ನು ಪ್ರಶ್ನಿಸಿದಾಗ, ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಹಿಂದಕ್ಕೆ ತಳ್ಳಿದರು ಎಂದು ಸಂತ್ರಸ್ತ ಪತ್ರಕರ್ತೆಯೊಬ್ಬರು ಆರೋಪಿಸಿದ್ದರು.
ಈ ಎಲ್ಲಾ ಘಟನೆಗಳ ನಂತರ ಶನಿವಾರ ಸಂಜೆ ಹಲವಾರು ಸ್ವತಂತ್ರ ಪತ್ರಕರ್ತರು ಸಂಸತ್ ಮಾರ್ಗ ಪೊಲೀಸ್ ಠಾಣೆ ಎದುರು ಜಮಾಯಿಸಿ, ಆರೋಪಿ ಎಸಿಪಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಎಫ್ಐಆರ್ (FIR) ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಸದ್ಯ ದೆಹಲಿ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮಹಿಳಾ ಪತ್ರಕರ್ತೆಯರ ದೂರುಗಳನ್ನು ಸ್ವೀಕರಿಸಲಾಗಿದ್ದು, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ‘ಕ್ರೈಂ ಬ್ರ್ಯಾಂಚ್’ಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಆರೋಪಿತ ಅಧಿಕಾರಿಗೆ ಬಡ್ತಿ ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ “ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಈ ಬಡ್ತಿಯೇ ಬಹುಮಾನವೇ?” ಎಂದು ಕಿಡಿಕಾರಿದೆ.
ಇನ್ನು ಈ ಘಟನೆಗಳನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತೆಯೊಬ್ಬರು ಪೊಲೀಸ್ ಅಧಿಕಾರಿಯ ವಿರುದ್ಧ ದುರ್ವರ್ತನೆಯ ಆರೋಪ ಮಾಡಿದ್ದಾರೆ. ಎಫ್ಐಆರ್ ದಾಖಲಿಸಬೇಕೆಂಬ ಒಂದೇ ಬೇಡಿಕೆಯಿಟ್ಟುಕೊಂಡು ನೂರಾರು ಪತ್ರಕರ್ತರು ಗಂಟೆಗಟ್ಟಲೆ ಧರಣಿ ನಡೆಸಿದ್ದಾರೆ. ಇಂಥಹ ದೂರು ಬಂದಾಗ ಎಫ್ ಐಆರ್ ದಾಖಲಿಸುವುದು ಪೊಲೀಸರ ಕನಿಷ್ಠ ಕರ್ತವ್ಯವ. ಆದರೆ ಅವರು ಅದನ್ನೂ ಮಾಡಿಲ್ಲ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ ರಕ್ಷಣೆ ನೀಡಬೇಕಾದ ಪೊಲೀಸರೇ ಮಹಿಳೆಯರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಪತ್ರಕರ್ತೆಯರವರೆಗೆ ಎಲ್ಲೆಡೆ ಮಹಿಳೆಯರು ಅಭದ್ರತೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹತ್ತಾರು ಪತ್ರಕರ್ತರು ಪ್ರತಿಭಟಿಸಿದರೂ ಎಫ್ಐಆರ್ ದಾಖಲಿಸಿಲ್ಲ ಯಾವುದೇ ಕಠಿಣ ಕ್ರಮವನ್ನೂ ಕೈಗೊಂಡಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಮಹಿಳೆಯರೊಂದಿಗೂ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರ ಮೇಲಿನ ಪೊಲೀಸರ ವರ್ತನೆ ಕುರಿತು ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕೂಡಾ ಬೇಸರ ವ್ಯಕ್ತಪಡಿಸಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ವರ್ತನೆಗಳನ್ನು ಸಾಮಾನ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದೆ. ಪತ್ರಕರ್ತರು ಯಾವುದೇ ಭಯ, ಬೆದರಿಕೆಗಳಿಲ್ಲದೆ ಮುಕ್ತವಾಗಿ ತಮ್ಮ ಕರ್ತವ್ಯ ನಿಭಾಯಿಸಲು ಅವಕಾಶ ನೀಡಬೇಕು. ರಾಷ್ಟ್ರದ ರಾಜಧಾನಿಯಲ್ಲೇ ಮಾಧ್ಯಮ ಸ್ವಾತಂತ್ರ್ಯಕ್ಕೆ ಈ ರೀತಿಯ ಅಡ್ಡಿಯಾಗುತ್ತಿರುವುದು ಕೆಟ್ಟ ಬೆಳವಣಿಗೆ ಎಂದಿದೆ. ದೆಹಲಿ ಪೊಲೀಸರು ತಕ್ಷಣವೇ ಮಹಿಳಾ ಪತ್ರಕರ್ತೆಯ ದೂರಿನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.