ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ತೀರ್ಮಾನಿಸಿದೆ. ಜ್ಞಾನೇಶ್ ಕುಮಾರ್ ರನ್ನು ಹುದ್ದೆಯಿಂದ ತೆಗೆದು ಹಾಕಲೇ ಬೇಕು ಎನ್ನುವ ಒತ್ತಾಯವನ್ನು ತೀವ್ರಗೊಳಿಸಿದೆ. ಅಲ್ಲದೇ ಜ್ಞಾನೇಶ್ ಕುಮಾರ್ ವಿರುದ್ಧ ದೇಶವ್ಯಾಪಿ ಮತ ಬಚಾವೋ, ದೇಶ್ ಬಚಾವೋ ಎಂಬ ಹೆಸರಿನಲ್ಲಿ ಅಭಿಯಾನ ಮಾಡುವುದಾಗಿ ಘೋಷಣೆ ಮಾಡಿದೆ. ಅಕ್ಟೋಬರ್ 10 ರಿಂದ ನವೆಂಬರ್ 26 ರವರೆಗೆ ಬ್ಲಾಕ್ ಮಟ್ಟದಿಂದ ದೆಹಲಿಯವರೆಗೆ ಮೆರವಣಿಗೆ ಹಾಗೂ ಸಭೆಗಳನ್ನು ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಈ ವಿಷಯ ತಿಳಿಸಿದ್ದು ಜ್ಞಾನೇಶ್ ಕುಮಾರ್ ಹುದ್ದೆ ವಜಾಗೊಳ್ಳಬೇಕರು ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎಂದು ಪಕ್ಷ ಒತ್ತಾಯಿಸಿದರು. 

ಬ್ಲಾಕ್ ಮತ್ತು ಗ್ರಾಮ ಮಟ್ಟದಿಂದ ರಾಷ್ಟ್ರ ರಾಜಧಾನಿ ದೆಹಲಿವರೆಗೆ ಮೆರವಣಿಗೆ ಜಾಥಾ ಹಾಗೂ ಜನಾಂದೋಲನಗಳನ್ನು ಕಾಂಗ್ರೆಸ್ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ ಅಕ್ಟೋಬರ್ 10ರಿಂದ 20ರವರೆಗೆ ದೇಶಾದ್ಯಂತ ಬ್ಲಾಕ್ ಮಟ್ಟದಲ್ಲಿ ಬೈಕ್ ಹಾಗೂ ಸೈಕಲ್ ಜಾಥಾ ಮತ್ತು ಪಾದಯಾತ್ರೆಗಳನ್ನು ನಡೆಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವೇಣುಗೋಪಾಲ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳ ನಡುವೆಯೂ ಸಿಇಸಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಮತ್ತು ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಗಂಭೀರ ಆರೋಪಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಸಂಘರ್ಷಕ್ಕೆ ಇಳಿದಿವೆ.

ಈ ಅಭಿಯಾನ ಕೆಲವೇ ದಿನಗಳಿಗೆ ಸೀಮಿತವಾಗುವುದಿಲ್ಲ ಎಂದು ತಿಳಿಸಿದ ವೇಣುಗೋಪಾಲ್ ಸಿಇಸಿ ಜ್ಞಾನೇಶ್ ಕುಮಾರ್ ರನ್ನು ತೆಗೆದುಹಾಕುವವರೆಗೆ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ಆಗುವವರೆಗೆ ಅಭಿಯಾನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.