ನಟಿ, ನಿರೂಪಕಿ ಜಾಹ್ನವಿ ಅವರನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಶುಕ್ರವಾರ ನೇಮಕಾತಿ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ವಿತರಣೆ ಮಾಡಿದರು. ಆದರೆ ಈ ಬೆಳವಣಿಗೆ ಪಕ್ಷದ ಒಳಗೆ ಭಿನ್ನಮತದ ಕಿಡಿ ಹೊತ್ತಿಸಿದೆ.
ಜಾಹ್ನವಿ ಮೇ ತಿಂಗಳಲ್ಲಿಯೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ರಾಜ್ಯವು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಎದುರು ನೋಡುತ್ತಿದೆ. ಈ ಚುನಾವಣೆಗಳಲ್ಲಿ ಏಕಾಕಿಯಾಗಿ ಸ್ಪರ್ಧಿಸಲು ಪಕ್ಷ ಬಲವರ್ಧನೆಗೆ ಟೊಂಕಕಟ್ಟಿರುವ ಕುಮಾರಸ್ವಾಮಿಯವರು ಹೊಸ ಹಾಗೂ ಯುವ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.
ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ, ಬಿಗ್ಬಾಸ್ನಲ್ಲಿ ಸ್ಪರ್ಧಿಸಿ, ರಾಜ್ಯದ ಜನರ ಗಮನಸೆಳೆದಿದ್ದ ಜಾಹ್ನವಿ ಅವರ ಜನಪ್ರಿಯತೆಯನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶದೊಂದಿಗೆ ಕುಮಾರಸ್ವಾಮಿಯವರು ಪಕ್ಷದಲ್ಲಿ ಉನ್ನತ ಸ್ಥಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಆದರೆ ಜಾಹ್ನವಿಗೆ ಮಹತ್ತರ ಹೊಣೆ ನೀಡಿರುವುದು ಪಕ್ಷದ ಮನೆಯೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ. ಹಲವಾರು ವರ್ಷಗಳಿಂದ ಪಕ್ಷ ಕಟ್ಟಲು ಮಣ್ಣು ಹೊತ್ತವರನ್ನು ಕಡೆಗಣಿಸಿ ಇಂದು ನಿನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ಈ ಬೆಳವಣಿಗೆಯಿಂದ ಜೆಡಿಎಸ್ ಸಾಮಾಜಿಕ ಜಾಲತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ವರುಣ್ ತಮ್ಮ ಸ್ಥಾನಕ್ಕೆ ಮೂರು ದಿನದ ಹಿಂದೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು ಇದಕ್ಕೆ ಸಂಬಂಧ ಪಟ್ಟವರಿಗೆ ಕಾರಣವನ್ನೂ ತಿಳಿಸಿದ್ದೇನೆ. ಏಕೆ? ಎಂಬುವುದರ ಬಗ್ಗೆ ನನಗೆ ಇಲ್ಲಿ ಚರ್ಚೆ ಮಾಡಲು ಇಷ್ಟವಿಲ್ಲ ಎಂದಿದ್ಜಾರೆ. ಅಲ್ಲದೇ ಒಂದು ದಶಕಕ್ಕಿಂತ ಹೆಚ್ಚು ಕಾಲ ನಾನು ಜೆಡಿಎಸ್ ಕಾರ್ಯಕರ್ತ ಎಂದು ಎಲ್ಲಾ ಕಡೆ ಹೇಳಿಕೊಂಡು ಬಂದಿದ್ದೆ, ಜಗಳವಾಡಿದ್ದೆ, ಸ್ಟೇಷನ್-ಕೋರ್ಟ್ ಅಲೆದಿದ್ದೆ. ಕಾಂಗ್ರೆಸ್ ಜೊತೆಗೆ ಇದ್ದಾಗ ಅವರ ಸಿದ್ಧಾಂತಕ್ಕೆ ಬಗ್ಗದೆ, ಬಿಜೆಪಿ ಜೊತೆಗೆ ಹೋದಾಗ ಇವರ ಸಿದ್ಧಾಂತಕ್ಕೆ ಒಗ್ಗದೆ ಇವತ್ತಿನ ವರೆಗೂ ಜೆಡಿಎಸ್ ಕಾರ್ಯಕರ್ತ ಆಗಿದ್ದೆ ಅನ್ನೋದು ನನಗೆ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ FB ಅಲ್ಲಿ ನನ್ನ ಸ್ನೇಹಿತರ ಲಿಸ್ಟ್ ನಲ್ಲಿ ಇರುವ ಯಾರಾದರೂ, ನಾನು ಕೇವಲ ಜೆಡಿಎಸ್ ಕಾರ್ಯಕರ್ತ ಎಂಬುದಕ್ಕೆ ಮಾತ್ರ ಸ್ನೇಹಿತರು ಆಗಿದ್ದರೆ, ದಯವಿಟ್ಟು ನನ್ನನ್ನು Unfriend ಮಾಡಿ ಎಂದು ಮನವಿ ಮಾಡಿದ್ದಾರೆ.
ಇದು ವರುಣ್ ಒಬ್ಬರ ಮನದಾಳದ ಮಾತಲ್ಲ. ಇಂಥಹದ್ದೇ ಅಭಿಪ್ರಾಯಗಳನ್ನು ಕಾಯಕರು ಹಾಗೂ ತಳ ಮಟ್ಟದ ನಾಯಕರು ಒಳಗೊಳಗೆ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಇವತ್ತು ಬಂದವರಿಗೆ ಪಕ್ಷ ದೊಡ್ಡ ದೊಡ್ಡ ಹುದ್ದೆಗಳನ್ನು ನೀಡುತ್ತಾ ಬಂದರೆ ನಮ್ಮ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಜೆಡಿಎಸ್ ಹಿಂದಿನಿಂದ ಅನುಸರಿಸಿಕೊಂಡು ಬಂದಿರುವುದು ಇದನ್ನೇ ಎನ್ನವುವುದು ಇಲ್ಲಿ ಗಮನಾರ್ಹ. ಕೇವಲ ಪಕ್ಷದ ಹುದ್ದೆಗಳನ್ನು ನೀಡುವುದರಲ್ಲಿ ಮಾತ್ರವಲ್ಲ.. ಚುನಾವಣೆಗಳಲ್ಲಿ ಟಿಕೆಟ್ ನೀಡುವಾಗಲೂ ಇಂಥದ್ದೇ ಧೋರಣೆಯನ್ನು ಅನುಸರಿಸುತ್ತಿದೆ.
ಸದ್ಯ ಜಾಹ್ನವಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದೆ . ಜಾಹ್ನವಿ ಕೂಡಾ ಪಕ್ಷಕ್ಕಾಗಿ ಅವಿರತವಾಗಿ ದುಡಿಯುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಕಾರ್ಯಕರ್ತರ ಅಸಮಾಧಾನ ಹೆಚ್ಚಿದೆ. ಈಗಾಗಲೇ ಜೆಡಿಎಸ್ ಕಾರ್ಯಕರ್ತರಿಂದ ಇಂಥಹ ಮುನಿಸಿಗೆ ಗುರಿಯಾಗಿ ವೆಂಟಿಲೇಟರ್ ನಲ್ಲಿ ಮಲಗಿದೆ. ಹೀಗಿದ್ದರೂ ಅದನ್ನೇ ಮಾಡುತ್ತಿದೆ ಎಂದರೆ ಆ ಪಕ್ಷ ಎದ್ದು ಓಡಾಡುವುದು ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ.
