ಸಂತಾನ ಗೋಪಾಲನ್ ಅವರ ಈ ನಿರ್ಧಾರ ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ. ಆದರೆ ಈ ನಿವೃತ್ತಿ ನಿರ್ಧಾರಕ್ಕೂ ತಾವು ನಡೆಸಿದ ಚುನಾವಣಾ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ ಎಂದು ಗೋಪಾಲನ್ ಸ್ಪಷ್ಟಪಡಿಸಿದ್ದಾರೆ. ಕೆಲ ವೈಯಕ್ತಿಕ ಮತ್ತು ಆರೋಗ್ಯದ ಕಾರಣಗಳನ್ನು ನೀಡಿ ಅವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವುದಾಗಿ ಕೆಲ ಮಾಹಿತಿಗಳಿಂದ ಗೊತ್ತಾಗಿದೆ.
ಅಷ್ಟಕ್ಕೂ ಈ ಆರ್. ಸಂತಾನ ಗೋಪಾಲನ್ ಯಾರು ಎನ್ನುವುದನ್ನು ನೋಡುವುದಾದರೆ ಇವರು ಒಡಿಶಾ ಕ್ಯಾಡರ್ನ 2001ರ ಬ್ಯಾಚ್ನ ಐಎಎಸ್ ಅಧಿಕಾರಿ. ಮೂಲತಃ ತಮಿಳುನಾಡು ಮೂಲದವರು. ಈಗ ಒಡಿಸ್ಸಾ ರಾಜ್ಯದ ಮುಖ್ಯಚುನಾವಣಾಧಿಕಾರಿಯಾಗಿದ್ದರು. ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಪೂರ್ಣಗೊಂಡ ಒಂದು ವಾರದ ನಂತರ ಅಂದರೆ ಬುಧವಾರ ತಮ್ಮ ರಾಜೀನಾಮೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಹೇಳಬೇಕು ಎಂದರೆ ಇವರ ಸೇವಾವಧಿ ಮುಗಿಯಲು ಇನ್ನಬ 18 ತಿಂಗಳು ಬಾಕಿ ಇದೆ. ಆದರೆ ಗೋಪಾಲನ್ ಕೆಲವು ತಿಂಗಳುಗಳಿಂದಲೇ ಸೇವೆಯಿಂದ ಹೊರನಡೆಯುವ ಬಗ್ಗೆ ಆಲೋಚಿಸುತ್ತಿದ್ದರಂತೆ. ಆದರೆ ಒಡಿಸ್ಸಾದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮುಕ್ತಾಯಗೊಂಡು, ಪರಿಷ್ಕೃತ ಪಟ್ಟಿ ಪ್ರಕಟವಾಗುವವರೆಗೆ ತಮ್ಮ ನಿರ್ಧಾರವನ್ನು ಮುಂದೂಡಿದ್ದರಂತೆ.
17 ಲಕ್ಷ ಮತದಾರರ ಹೆಸರು ಕೈಬಿಟ್ಟಿದ್ದಕ್ಕೆ ವಿರೋಧ
ಇಲ್ಲಿ ವಿಚಾರ ಏನೆಂದರೆ ವಿಶೇಷ ತೀವ್ರ ಪರಿಷ್ಕರಣೆಯ ನಂತರ ಸೆಪ್ಟೆಂಬರ್ 21ರಂದು ಒಡಿಶಾದ 3.16 ಕೋಟಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಈ ಪಟ್ಟಿಯಿಂದ ಸುಮಾರು 17 ಲಕ್ಷ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಇದನ್ನು ವಿರೋಧ ಪಕ್ಷಗಳಾದ ಬಿಜು ಜನತಾ ದಳ ಮತ್ತು ಕಾಂಗ್ರೆಸ್ ತೀವ್ರವಾಗಿ ಪ್ರಶ್ನಿಸಿದ್ದವು.
ಚುನಾವಣಾ ಆಯೋಗದ ಒಳಗಿನ ಅಸಮಾಧಾನ
ಇನ್ನು ವಿವಿಧ ರಾಜ್ಯಗಳಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಭಾರತೀಯ ಚುನಾವಣಾ ಆಯೋಗವನ್ನು ಅನುಮಾನದಿಂದ ನೋಡುವಂತಾಗಿದೆ. ಹೀಗಿರುವಾಗಲೇ ಗೋಪಾಲನ್ ಈ ನಿರ್ಧಾರ ಹೊರಬಿದ್ದಿದೆ. ಕಳೆದ 10 ತಿಂಗಳುಗಳಲ್ಲಿ ಚುನಾವಣಾ ಆಯೋಗದ ಹೆಸರಿನಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ಕಳೆದ ವಾರ 'ದಿ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಳಸುವ ಫಾರ್ಮ್ 6 ನಲ್ಲಿನ ಬದಲಾವಣೆಗಳು, ದೆಹಲಿಯಲ್ಲಿ ನಿಯಂತ್ರಣಗಳನ್ನು ಕೇಂದ್ರೀಕರಿಸುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರು ಕೈಬಿಟ್ಟಿರುವುದರ ವಿರುದ್ಧದ ಮೇಲ್ಮನವಿಗಳು ಹಾಗೂ ಗೋವಾದಲ್ಲಿ ಅರ್ಹ ಮತದಾರರನ್ನು ಸೇರಿಸಲು ವಿಫಲವಾಗಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಈ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂದು ವರದಿಯಾಗಿದೆ.
ಸಂತಾನ ಗೋಪಾಲನ್ 25 ವರ್ಷಗಳ ಸೇವಾವಧಿಯನ್ನು ಮುಗಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 16 ಕಡೆಗಳಲ್ಲಿ 20 ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದಿನ ಹುದ್ದೆಗಳಲ್ಲಿ ಕಂದಾಯ ವಿಭಾಗದ ಕಂದಾಯ ವಿಭಾಗೀಯ ಆಯುಕ್ತರಾಗಿ ಮತ್ತು ಕಾರ್ಮಿಕ ಮತ್ತು ಇಎಸ್ಐ ಇಲಾಖೆಯ ಆಯುಕ್ತರು ಮತ್ತು ಕಾರ್ಯದರ್ಶಿಗಳಾಗಿ ಕೆಲ ಮಾಡಿದ್ದರು. ಅಲ್ಲದೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲೂ ಸೇವೆ ಸಲ್ಲಿದ್ದಾರೆ. 2024ರ ಜುಲೈ ತಿಂಗಳಿನಿಂದ ಒಡಿಸ್ಸಾ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದಾರೆ. ಆದರೆ ತಮ್ಮ ಮಗನ ಶಿಕ್ಷಣವನ್ನು ಪೂರ್ಣಗೊಳಿಸಲು ಸಂತಾನ ಗೋಪಾಲನ್ ಅವರು ಇನ್ನು ಸುಮಾರು ಎರಡು ವರ್ಷಗಳ ಕಾಲ ಒಡಿಶಾದಲ್ಲಿಯೇ ಉಳಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕಳೆದ 3 ವರ್ಷಗಳಲ್ಲಿ ನಾಲ್ವರು ಅಧಿಕಾರಿಗಳ ರಾಜೀನಾಮೆ
ಅಚ್ಚರಿ ಎಂದರೆ ಒಡಿಸ್ಸಾದಲ್ಲಿ ಐಎಎಸ್ ಅಧಿಕಾರಿಗಳು ಸಾಲು ಸಾಲು ರಾಜೀನಾಮೆ ನೀಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಹೀಗೆ ನಾಲ್ವರು ಅಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಜೊತೆಗೆ ಐಪಿಎಸ್ ಅಧಿಕಾರಿಗಳೂ ಸೇರಿದ್ದಾರೆ. ಇವರಲ್ಲಿ ಪ್ರಮುಖವಾಗಿ ಇಲ್ಲಿನ ಮಾಜಿ ಮುಖ್ಯಮಂತ್ರಿ ನವೀನ್ ಪಟ್ಯಾಯಕ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಐಎಎಸ್ ಅಧಿಕಾರಿ ವಿ.ಕೆ. ಪಾಂಡಿಯನ್ 2024ರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೂ ಮುನ್ನ ಎಂದರೆ 2023ರಲ್ಲಿ ರಾಜೀನಾಮೆ ನೀಡಿ ಬಿಜೆಡಿ ಸೇರಿದ್ದರು. ಅವರ ಪತ್ನಿಯೂ ಒಡಿಶಾ ಕ್ಯಾಡರ್ನ ಐಎಎಸ್ ಅಧಿಕಾರಿ ಸುಜಾತಾ ಕಾರ್ತಿಕೇಯನ್ 2025ರ ಮಾರ್ಚ್ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರು ಇದೇ ವರ್ಷದ ಜೂನ್ ತಿಂಗಳಿನಲ್ಲಿ ಬಿಜೆಡಿ ಸೇರಿದ್ದರು
ಕಾರ್ಪೊರೇಟ್ ಸಂಸ್ಥೆ ಸೇರಲು ಐಪಿಎಸ್ ಅಧಿಕಾರಿಯ ರಾಜೀನಾಮೆ
2013ರ ಬ್ಯಾಚ್ನ ಐಪಿಎಸ್ (IPS) ಅಧಿಕಾರಿ ಜಗಮೋಹನ್ ಮೀನಾ ಕಾರ್ಪೊರೇಚ್ ಸಂಸ್ಥೆ ಸೇರುವ ಸಲುವಾಗಿ ಕಳೆದ ತಿಂಗಳು ಸ್ವಯಂ ನಿವೃತ್ತಿ ಪಡೆದಿದ್ದಾರೆ.
ತರಬೇತಿ ಅವಧಿಯಲ್ಲೇ ಹೊರನಡೆದ ಪ್ರೊಬೇಷನರಿ ಅಧಿಕಾರಿ
ಇದೇ ವರ್ಷದ ಆರಂಭದಲ್ಲಿ, 2025ರ ಬ್ಯಾಚ್ನ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಸಿ.ಎ. ರಾಮದಾಸ್ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಇನ್ನೂ ತರಬೇತಿ ಪಡೆಯುತ್ತಿರುವಾಗಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಸಂತಾನ ಗೋಪಾಲನ್ ರಾಜೀನಾಮೆ ನೀಡಿದ್ದಾರೆ. ಇದನ್ನು ಸರ್ಕಾರ ಅಂಗೀಕಾರ ಮಾಡುತ್ತದೋ ಇಲ್ಲವೋ ಅದು ಮುಂದಿನ ವಿಚಾರ. ಆದರೆ ಸದ್ಯಕ್ಕಂತೂ ಈ ಬಗ್ಗೆ ಸಾಕಷ್ಟು ಅನುಮಾನಗಳು ಇರುವುದಂತೂ ಸತ್ಯ.

ಪಶ್ಚಿಮ ಬಂಗಾಳದಲ್ಲಿ ನ್ಯಾಯಮೂರ್ತಿಗಳೇ ರಾಜೀನಾಮೆ
ಒಡಿಸ್ಸಾದಲ್ಲಿ ಮುಖ್ಯಚುನಾವಣಾ ಆಯುಕ್ತರು ರಾಜೀನಾಮೆ ಸಲ್ಲಿಸಿದ್ದರೆ ಪಶ್ಚಿಮ ಬಂಗಾಳದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದ್ರಜಿತ್ ಚಟರ್ಜಿ ಎಸ್ ಐಆರ್ ನ್ಯಾಯಮಂಡಳಿಯ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅವರು ಅದಕ್ಕೆ ಕೊಟ್ಟಿರುವ ಕಾರಣ ಎಂದರೆ ಪ್ರಯಾಣದ ಸಮಸ್ಯೆ. ತಾವು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಪ್ರತಿದಿನ 60 ಕಿಲೋಮೀಟರ್ಗೂ ಅಧಿಕ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.
ಈ ಸುದೀರ್ಘ ಪ್ರಯಾಣದಿಂದ ಉಂಟಾಗುತ್ತಿರುವ ದೈಹಿಕ ಆಯಾಸ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ಚುನಾವಣಾ ಆಯೋಗ ತಮಗೆ ಮನೆಯಿಂದಲೇ ಕೆಲಸ ಮಾಡಲು ಅಥವಾ ತಮ್ಮ ನಿವಾಸದ 10 ರಿಂದ 12 ಕಿ.ಮೀ ವ್ಯಾಪ್ತಿಯ ಸಮೀಪದ ಕಚೇರಿಯಿಂದ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ, ತಾವು ಸೇವೆಯನ್ನು ಮುಂದುವರಿಸಲು ಸಿದ್ಧರಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.ತಮ್ಮ ಪತ್ರದಲ್ಲಿ ಕಠಿಣ ಪ್ರಯಾಣದ ಪರಿಸ್ಥಿತಿಯನ್ನು ಉಲ್ಲೇಖಿಸಿರುವ ಅವರು, ಸಾಲ್ಟ್ಲೇಕ್ ನಲ್ಲಿರುವ ನನ್ನ ನಿವಾಸದಿಂದ ದಕ್ಷಿಣ 24 ಪರಗಣ ಜಿಲ್ಲೆಯ ಜೋಕಾದಲ್ಲಿರುವ ನ್ಯಾಯಮಂಡಳಿಗೆ 27 ಕಿ.ಮೀ.ಗೂ ಅಧಿಕ ದೂರವಿದೆ. ಕಳಪೆ ರಸ್ತೆ ಹಾಗೂ ವಿಪರೀತ ಸಂಚಾರ ದಟ್ಟಣೆಯಿಂದಾಗಿ ಪ್ರತಿದಿನ ಹೋಗಿ ಬರಲು 60 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ಇದು ದೈಹಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆಯಾಗುತ್ತಿದೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಆಯೋಗದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದರೆ, ನವೆಂಬರ್ 2, 2026 ರಿಂದ ತಮ್ಮ ರಾಜೀನಾಮೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯಾಯಮೂರ್ತಿ ಇಂದ್ರಜಿತ್ ಚಟರ್ಜಿ ರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ವಿಶೇಷ ತೀವ್ರ ಪರಿಷ್ಕರಣೆ ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ತಾಂತ್ರಿಕ ಕಾರಣಗಳಿಂದ ಸುಮಾರು 4.5 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಸುಮಾರು 7.47 ಲಕ್ಷಕ್ಕೂ ಅಧಿಕ ಮೇಲ್ಮನವಿ ಅರ್ಜಿಗಳ ವಿಚಾರಣೆಯ ಜವಾಬ್ದಾರಿಯನ್ನು ಈ ನ್ಯಾಯಮಂಡಳಿ ಹೊಂದಿದೆ.
ಇಲ್ಲಿ ಇಂದ್ರಜಿತ್ ಚಟರ್ಜಿ ರಾಜೀನಾಮೆ ನಿರ್ಧಾರದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ನಂತರ ಬರೋಬ್ಬರಿ 91 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಡೀ ದೇಶದಲ್ಲೇ ಯಾವ ರಾಜ್ಯದಲ್ಲೂ ಇಷ್ಟೊಂದು ಮತದಾರರ ಹೆಸರನ್ನು ಕೈಬಿಟ್ಟಿರೋದು ಕಂಡು ಬಂದಿಲ್ಲ.ಎರಡನೇ ಸ್ಥಾನದಲ್ಲಿ ಇರುವುದು ಕರ್ನಾಟಕ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಪರಿಷ್ಕರಣೆಯಲ್ಲಿ ಸುಮಾರು 63.66 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ನಂತರದ ತಪಾಸಣೆಗಳ ಬಳಿಕ ಒಟ್ಟು ಅಳಿಸಲಾದ ಹೆಸರುಗಳ ಸಂಖ್ಯೆ 91 ಲಕ್ಷಕ್ಕೆ ತಲುಪಿದೆ. ಇದರಿಂದಾಗಿ ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.66 ಕೋಟಿಯಿಂದ 7.04 ಕೋಟಿಗೆ ಇಳಿಕೆಯಾಗಿದೆ
ಇಷ್ಟೊಂದು ಪ್ರಮಾಣದಲ್ಲಿ ಮತದಾರರ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಮಮತಾ ಬ್ಯಾನರ್ಜಿ ಆರಂಭದಿಂದಲೂ ಆಕ್ಷೇಪ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಇಲ್ಲಿ ಭರ್ಜರಿ ಗೆಲುವು ಸಾಧಿಸಿದೆ ಎಂದು ಆರೋಪಿಸುತ್ತಲೇ ಇದ್ದಾರೆ. ಇದೀಗ ಇದರ ಬಗ್ಗೆ ಇಂದ್ರಜಿತ್ ಚಟರ್ಜಿ ಇದರ ಬಗ್ಗೆ ತನಿಖೆ ನಡೆಸುತ್ತಿದ್ದರು. ಆದರೆ ಇವರೂ ಕೂಡಾ ಈಗ ಪ್ರಯಾಣದ ಕಾರಣ ಹೇಳಿ ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಇದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದಾ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಉತ್ತರ ನೀಡುವರಾದ್ರೂ ಯಾರು.?



