ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕತ್ತಿ ಮಸೆಯಾಗುತ್ತಿದೆಯಾ.. ಅವರಿಗೆ ಹಳ್ಳ ತೋಡಲು ಪ್ರತಿಕ್ಷಣವೂ ಕಾಯುತ್ತಿದ್ದಾರಾ ಇಂಥದೊಂದು ಕಳವಳವನ್ನು ಸ್ವತಃ ನಿಖಿಲ್ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ನಾನು ಸರ್ಕಾರದ ವಿರುದ್ಧ ಗುಡುಗುತ್ತಿದ್ದಾನೆ ಅಂತ ಈ ರೀತಿಯ ಸಂಚು ಮಾಡಲಾಗುತ್ತಿದೆ, ಒಂದು ವೇಳೆ ನನ್ನದು ಏನಾದರೂ ಲೋಪ ಇದ್ದಿದ್ದರೆ, ಇಷ್ಟರಲ್ಲಿ ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದರು ಎಂದು ಕಿಡಿ ಕಾರಿದ್ದಾರೆ. ಇದರಿಂದ ನಾನು ಧೈರ್ಯವಾಗಿ ರೈತರ ಪರವಾಗಿ ನಿಂತು ಹೋರಾಟ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಬಂಗಾರಪೇಟೆಯ ಎಪಿಎಂಸಿ ಆವರಣದಲ್ಲಿ ಇವತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಮಾತಾಡಿದ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

 ರೈತರ ಅಹವಾಲುಗಳನ್ನು ಆಲಿಸಿದ ನಿಖಿಲ್ ಕುಮಾರಸ್ಲಾಮಿ ನನಗೆ ನಿಮ್ಮ ಪರವಾಗಿ ವಿಧಾನಸೌಧಕ್ಕೆ ಹೋಗಿ ಮಾತನಾಡಲು ಇನ್ನೂ ಅವಕಾಶ ಸಿಕ್ಕಿಲ್ಲ, ಆದರೆ ಈ ಪ್ರಜಾಪ್ರಭುತ್ವದಲ್ಲಿ ಬೀದಿಯಲ್ಲಿ ನಿಂತು ಹೋರಾಟ ಮಾಡಲು ಅವಕಾಶವಿದೆ. ನಾನು ಸತತವಾಗಿ ಚುನಾವಣೆ ಸೋತಿರಬಹುದು, ಆದರೆ ಎದೆಗುಂದಿಲ್ಲ ಎಂದು ಹೇಳಿದರು.

ಬೋರ್ವೆಲ್ ಕೊರೆಸಲು 2 ಲಕ್ಷ ರೂಪಾಯಿ ಖರ್ಚು ಮಾಡಿ 1600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬೆಳೆಗೆ ಕನಿಷ್ಠ 8 ಗಂಟೆಯಾದರೂ 3 ಫೇಸ್ ಕರೆಂಟ್ ಕೊಡಬೇಕು. ಲೋಡ್ ಶೆಡ್ಡಿಂಗ್ನಿಂದ ರೈತ ಕಂಗಾಲಾಗಿದ್ದಾನೆ. ಅದೆಲ್ಲೋ ಗೃಹಜ್ಯೋತಿ, ಗೃಹಲಕ್ಷ್ಮೀ ಅಂತೀರಾ, ಎಲ್ಲಿದೆ ಜ್ಯೋತಿ? ರೈತರ ಜೀವನವೇ ಕತ್ತಲೆಯಾಗಿದೆ. ಬರೀ ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಕಿಡಿಕಾರಿದರು.

ಕೋಲಾರ ಜಿಲ್ಲೆಯ ಜಮೀನುಗಳು ನೀರಿಲ್ಲದೆ ಬರಡಾಗುತ್ತಿದೆ ಎಂಬ ರೈತರ ಅಳಲಿಗೆ ಪ್ರತಿಕ್ರಿಯಿಸಿದ ನಿಖಿಲ್ ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ತರುವುದಕ್ಕೆ ಅವಕಾಶ ಇದೆ. ಈಗಾಗಲೇ ಕುಮಾರಣ್ಣನವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಈ ಬಗ್ಗೆ ಮನವಿ ಮಾಡಿದ್ದಾರೆ ಎಂದರು. ನಿಮ್ಮ ಈ ಸಮಸ್ಯೆಗೆ ನೂರಕ್ಕೆ ನೂರು ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು.

ಇನ್ನು ಕೆ.ಸಿ. ವ್ಯಾಲಿ ಯೋಜನೆಯ ನೀರು ಕನಿಷ್ಠ ಮೂರನೇ ಹಂತದ ಶುದ್ಧೀಕರಣವಾಗಬೇಕು, ಅದು ಆಗಿಲ್ಲ. ಇದರಿಂದ ಬೆಳೆದ ಬೆಳೆ ತಿನ್ನಲು ಯೋಗ್ಯವಿಲ್ಲ, ಯಾರೂ ಖರೀದಿಸುವುದೂ ಇಲ್ಲ. ಇದು ಕೇವಲ ಬೆಂಗಳೂರಿನ ಕೊಳಚೆ ನೀರು, ಇದರಿಂದ ನಮ್ಮ ಅಂತರ್ಜಲ ಮಲಿನವಾಗುತ್ತಿದೆ. ಕೋಲಾರದ ಕೆರೆಗಳಿಗೆ ಕೃಷ್ಣೆಯ ಶುದ್ಧ ನೀರು ಹರಿಸಿದರೆ ಮಾತ್ರ ಜಿಲ್ಲೆ ಉಳಿಯುತ್ತದೆ ಎಂದು ರೈತರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.