ಚುನಾವಣಾ ಆಯೋಗ ಎಂಬುದು ಒಂದು ಸ್ವಾಯತ್ತೆ ಸಂಸ್ಥೆ. ಇದು ಯಾರ ಹಂಗಿನ ಅರಮನೆಯಲ್ಲ. ಯಾರ ಮಾತಿಗೂ ತಲೆದೂಗಬೇಕಿಲ್ಲ. ಸರ್ಕಾರದ ಆದೇಶವನ್ನೂ ಪಾಲಿಸಬೇಕಾಗಿಲ್ಲ ಆದರೆ ಈಗ ಎಲ್ಲವೂ ಇದರ ವಿರುದ್ಧವಾಗಿದೆ. ಚುನಾವಣಾ ಆಯೋಗ ತನ್ನ ಸ್ವಂತಿಕೆ ಕಳೆದುಕೊಂಡು ಪರಾವಂಬಿಯಾಗಿ ನಿಂತಿದೆ ಎನ್ನುವ ಆರೋಪಗಳನ್ನು ಎದುರಿಸುತ್ತಿದೆ.
90 ರ ದಶಕದ ತನಕ ನಡೆದ ಚುನಾವಣೆಗಳನ್ನ ನೋಡಿದ್ರೆ ಅದನ್ನ ಸೂಕ್ಷ್ಮವಾಗಿ ಗಮನಿಸಿದ್ದರೆ ಶೇಷನ್ ಅವರು ಮಾಡಿದ ಕೆಲ್ಸ ಏನು..?ಅವ್ರ ತಾಕತ್ತು ಎಂಥಾದ್ದು ಅನ್ನೋದು ಗೊತ್ತಾಗುತ್ತೆ. ಅಂದಿನ ದಿನಗಳಲ್ಲಿ ಕೆಲ ರಾಜ್ಯಗಳು ಅದ್ರಲ್ಲೂ ಉತ್ತರ ಭಾರತದ ಕಡೆ ಸದ್ದು ಮಾಡ್ತಾ ಇದ್ದಿದ್ದು ಎಂದರೆ ಬೂತ್ ಕ್ಯಾಪ್ಚರಿಂಗ್. ಅದರಲ್ಲೂ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಬೂತ್ ಕ್ಯಾಪ್ಚರಿಂಗ್ ಎನ್ನುವುದು ಸಾಧಾರಣವಾಗಿತ್ತು. ಅಂಥಹ ದಿನದಲ್ಲೇ ಕೇಂದ್ರ ಮಖ್ಯಚುನಾವಣಾಧಿಕಾರಿಯಾಗಿ ಟಿ.ಎನ್. ಶೇಷನ್ ಅಧಿಕಾರ ವಹಿಸಿಕೊಂಡರು. ಅಂದಿನಿಂದಲೇ ದೇಶದಲ್ಲಿ ಚುನಾವಣೆಯ ದಿಕ್ಕು ಬದಲಾಗಿ ಹೋಯಿತು. ಚುನಾವಣಾ ಆಯೋಗ ಅಂದ್ರೆ ಅದು ಹಲ್ಲು ಕಿತ್ತ ಹಾವಲ್ಲ ಅನ್ನೋದನ್ನ ತೋರಿಸಿಕೊಟ್ಟರು. ಆಯೋಗಕ್ಕೆ ಶಕ್ತಿ-ಸ್ವಂತಿಕೆ ತುಂಬಿ. ದರ್ಪದಿಂದ ಮೆರೀತಾ ಇದ್ದವರಿಗೆ ಬಿಸಿ ಮುಟ್ಟಿಸಿದ್ರು. ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿದ್ರು.. ಚುನಾವಣಾ ಅಖಾಡದಲ್ಲಿ ತಾವೇ ಹುಲಿಗಳು ಅಂತ ಅಬ್ಬರಿಸುತ್ತಿದ್ದವರನ್ನ ಇಲಿಗಳಂತೆ ಮಾಡಿ ಬಿಟ್ಟರು.
ಇವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರಕ್ಕೆ ಬಂದಾಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಿದ್ದು ಕಾಂಗ್ರೆಸ್ ಸರ್ಕಾರ. ಶೇಷನ್ ಅವರ ದಕ್ಷ ಆಡಳಿತ, ಅಧಿಕಾರ ಸ್ಥಳದಲ್ಲಿ ಅವರು ತರುತ್ತಿದ್ದ ಸುಧಾರಣೆ. ಅವರ ನಿಷ್ಠೆ ಪ್ರಾಮಾಣಿಕತೆ ನೋಡಿ ಅವರನ್ನು ಈ ಹುದ್ದಗೆ ನೇಮಿಸಿತು. ಹೀಗೆ ನೇಮಕವಾದ ಶೇಷನ್ ಚುನಾವಣೆಯನ್ನ ನ್ಯಾಯ ಸಮ್ಮತವಾಗಿ ನಡೆಸೋಕೆ ಹಲವಾರು ಕಠಿಣ ಕ್ರಮಗಳ ಜಾರಿಗೆ ಮುಂದಾದರು. ಅವರು ಕೈಗೊಂಡ ಒಂದು ದೊಡ್ಡ ಚಾರಿತ್ರಿಕ ನಿರ್ಧಾರ ಎಂದರೆ ಪ್ರತಿಯೊಬ್ಬ ಮತದಾರನಿಗೂ ಗುರುತಿನ ಚೀಟಿ ನೀಡುವುದು. ಇದರಿಂದ ನಕಲಿ ಮತದಾನ ತಡೆಯಲು ಸಹಕಾರಿ ಆಯಿತು.
ಟಿ.ಎನ್. ಶೇಷನ್ ಕಾಂಗ್ರೆಸ್ ಆಡಳಿದಲ್ಲಿ ಇದ್ದಾಗ ಮುಖ್ಯಚುನಾವಣಾ ಆಯುಕ್ತರಾದರು. ಇದರಿಂದ ಅವರು ಕಾಂಗ್ರೆಸ್ ಹಾಕಿದ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.. ಕಾಂಗ್ರೆಸ್ ಏಜೆಂಟರಂತೆ ಕೆಲಸ ಮಾಡುತ್ತಾರೆ ಅಂತ ವಿರೋಧ ಪಕ್ಷಗಳು ಭಾವಿಸಿದ್ದವು ಆದರೆ ಶೇಷನ್ ಅವರು ಕಾಂಗ್ರೆಸ್ ವಿರುದ್ಧ ತೆಗೆದುಕೊಂಡ ಆ ಎರಡು ಐತಿಹಾಸಿಕ ನಿರ್ಧಾರಗಳು ವಿರೋಧ ಪಕ್ಷಗಳ ನಾಯಕರನ್ನು ದಂಗು ಬಡಿಸಿದ್ದವು
ಕೋಟ್ಲಾ ವಿಜಯಭಾಸ್ಕರ ರೆಡ್ಡಿ, ಸಂತೋಷ್ ಮೋಹನ್ ದಾಸ್ ಮೇಲೆ ಕೆಂಗಣ್ಣು
ಶೇಷನ್ ಅವರ ಕಠಿಣ ನಿರ್ಧಾರದಿಂದ ಸಂಕಷ್ಟಕ್ಕೆ ಸಿಲುಕಿದ ಅತ್ಯಂತ ಸ್ಪಷ್ಟ ಉದಾಹರಣೆಯೆಂದರೆ ಅದು ಆಂಧ್ರಪ್ರದೇಶದ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಕೋಟ್ಲಾ ವಿಜಯಭಾಸ್ಕರ ರೆಡ್ಡಿಯವರ ಪ್ರಕರಣ. ಅದೇನು ಎಂದರೆ 1993ರಲ್ಲಿ ವಿಜಯಭಾಸ್ಕರ ರೆಡ್ಡಿ ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಪಣ್ಯಂ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿತ್ತು. ಸಾಂವಿಧಾನಿಕ ನಿಯಮಾವಳಿಗಳ ಪ್ರಕಾರ ಮುಖ್ಯಮಂತ್ರಿಯಾದ ಆರು ತಿಂಗಳ ಅವಧಿಯೊಳಗೆ ಚುನಾವಣೆ ನಡೆಸಲು ಶೇಷನ್ ಆರಂಭದಲ್ಲಿ ನಿರಾಕರಿಸಿದರು. ಇದು ರೆಡ್ಡಿ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯಲು ಗಂಭೀರ ಸಮಸ್ಯೆಯನ್ನು ಸೃಷ್ಟಿಸಿತು.
ಶೇಷನ್ ಅವರ ಈ ಕಠಿಣ ನಿಲುವಿನಿಂದಾಗಿ ವಿಜಯಭಾಸ್ಕರ ರೆಡ್ಡಿ ಮತ್ತು ಸಂತೋಷ್ ಮೋಹನ್ ದೇವ್ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಅಧಿಕಾರವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದರು. ಅಂತಿಮವಾಗಿ, ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮಧ್ಯಪ್ರವೇಶಿಸಿದ ನಂತರವಷ್ಟೇ ಶೇಷನ್ ತಮ್ಮ ಪಟ್ಟು ಸಡಿಲಿಸಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಂಡ ಮತ್ತೊಂದು ಉದಾಹರಣೆ ಎಂದರೆ ಅದು ಅಂದಿನ ದಿನದಲ್ಲಿ ಕೇಂದ್ರ ಸಚಿವರಾಗಿದ್ದ ಸಂತೋಷ್ ಮೋಹನ್ ದೇವ್ ಪ್ರಕರಣ. ತ್ರಿಪುರಾ ವಿಧಾನಸಬಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಸಂತೋಷ್ ಮೋಹನ್ ದೇವ್ ಚುನಾವಣಾ ಪ್ರಚಾರ ಸಭೆಗಳಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದನ್ನು ಅಥವಾ ಉಪಸ್ಥಿತರದ್ದರು ಇದನ್ನು ಶೇಷನ್ ಗಂಭೀರವಾಗಿ ಪರಿಗಣಿಸಿದರು. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಭಾವಕ್ಕೆ ಮಣಿಯದ ಶೇಷನ್ ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಆ ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತು ಕ್ರಮ ಜರುಗಿಸಿದರು. ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ವಿರುದ್ಧ ಮುಖ್ಯ ಚುನಾವಣಾ ಆಯುಕ್ತರು ಶಿಸ್ತು ಕ್ರಮ ಕೈಗೊಂಡಿದ್ದರಿಂದ ಕೇಂದ್ರ ಸಚಿವ ಸಂತೋಷ್ ಮೋಹನ್ ದೇವ್ ತೀವ್ರ ಅಸಮಾಧಾನಗೊಂಡಿದ್ದರು. ಈ ಅಂಶವನ್ನು 1995ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಶೇಷನ್ ಅವರ ಸ್ವಂತ ಹೇಳಿಕೆಯೊಂದಿಗೆ ದಾಖಲಿಸಲಾಗಿದೆ.
ಇನ್ನು ಚುನಾವಣಾ ಪ್ರಚಾರದ ಅವಧಿಯಲ್ಲಿ ಸಚಿವ ಸಂತೋಷ್ ಮೋಹನ್ ದೇವ್ ಜೊತೆ ಕಾಣಿಸಿಕೊಂಡಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡ ನಂತರವಷ್ಟೇ ಶೇಷನ್ ತ್ರಿಪುರಾ ಚುನಾವಣೆಗೆ ಅನುಮತಿ ನೀಡಿದ್ದರು. ಹೀಗೆ ಕಾಂಗ್ರೆಸ್ ನಾಯಕರನ್ನು ಶೇಷನ್ ಬಿಟ್ಟು ಬಿಡದೇ ಕಾಡಿದ್ದರು.
ಹಳಸಿದ ಪಿವಿಎನ್ – ಶೇಷನ್ ಸಂಬಂಧ
ಇದೆಲ್ಲಾ ಬೆಳವಣಿಗೆಗಳಿಂದ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದೊಂದಿಗೆ ಶೇಷನ್ ಸಂಬಂಧವು ತೀವ್ರವಾಗಿ ಹಳಸಿತ್ತು.ಶೇಷನ್ ಸ್ವಂತ ವಿವರಣೆಯ ಪ್ರಕಾರ, ಕಾಂಗ್ರೆಸ್ ನಾಯಕ ವಿಜಯಭಾಸ್ಕರ ರೆಡ್ಡಿ ಅವರ ಅಧೀನದಲ್ಲಿದ್ದ ಕಾನೂನು ಸಚಿವಾಲಯವು ಸಂಸತ್ತಿನ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿಯಮಿತವಾಗಿ ಸೂಚಿಸುತ್ತಿತ್ತು.ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಶೇಷನ್ ಚುನಾವಣಾ ಆಯೋಗ ಎಂದರೆ ಅದು ಸಚಿವಾಲಯದ ಕೈ ಕೆಳಗಿನ ಒಂದು ಅಂಗವಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.ಇದು ನರಸಿಂಹರಾವ್ ಸರ್ಕಾರದೊಂದಿಗೆ ಶೇಷನ್ ಸಂಬಂಧ ಮತ್ತಷ್ಟು ಬಿಗಡಾಯಿಸಲು ಪ್ರಮುಖ ಕಾರಣವಾಯಿತು.
ಹೆಜ್ಜೆ-ಹೆಜ್ಜೆಗೂ ಕಾಂಗ್ರೆಸ್ ಗೆ ಶೇಷನ್ ಕಾಟ
ಹೀಗೆ ಪ್ರತಿ ಹೆಜ್ಜೆಯಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ನ್ನು ಶೇಷನ್ ಕಾಡುತ್ತಿದ್ದರು. ಇದರಿಂದ ಸರ್ಕಾರ ಚುನಾವಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ತಮ್ಮ ಮನವೊಲಿಸಲು ತನ್ನ ಸಂಧಾನಕಾರರನ್ನು ಶೇಷನ್ ಬಳಿ ಕಳುಹಿಸಿತ್ತು. ಆದರೆ, ತಾವು ಅವರ ಯಾವುದೇ ಒತ್ತಡಗಳಿಗೆ ಮಣಿಯಲು ಅಥವಾ ಅವರ ಇಷ್ಟದಂತೆ ನಡೆದುಕೊಳ್ಳಲು ಸ್ಪಷ್ಟವಾಗಿ ನಿರಾಕರಿಸಿ ಬಿಟ್ಟರು. ಇದನ್ನು ಶೇಷನ್ ಅವರೇ ಹೇಳಿಕೊಂಡಿದ್ದರು.
ಶರದ್ ಪವಾರ್ – ಪ್ರಣಬ್ ಮುಖರ್ಜಿಗೂ ಪಾಠ
ಚುನಾವಣಾ ನೀತಿ ಸಂಹಿತೆ ಮತ್ತು ನಿಯಮಾವಳಿಗಳನ್ನು ಶೇಷನ್ ಎಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆಂದರೆ, ಅದರಿಂದ ಕಾಂಗ್ರೆಸ್ನ ಇನ್ನಿಬ್ಬರು ಪ್ರಭಾವಿ ನಾಯಕರು ನೇರ ತೊಂದರೆ ಅನುಭವಿಸಿದ್ದರು. ಅವರು ಯಾರೆಂದರೆ ಶರದ್ ಪವಾರ್ ಮತ್ತು ಪ್ರಣಬ್ ಮುಖರ್ಜಿ ಶರದ್ ಪವಾರ್ ಮತ್ತು ಪ್ರಣಬ್ ಮುಖರ್ಜಿ ಸ್ಪರ್ಧಿಸಬೇಕಿದ್ದ ಉಪಚುನಾವಣೆಗಳನ್ನು ಶೇಷನ್ ಮುಂದೂಡಿದ್ದರು. ಈ ತೀರ್ಮಾನ ಅಂದಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜಕೀಯ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಉಲ್ಟಾ ಮಾಡಿತ್ತು ಎಂಬ ಶೇಷನ್ ಅವರ ವಾದವನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿದೆ. ಶೇಷನ್ ಅವರ ಎಲ್ಲಾ ನಿರ್ಧಾರಗಳು ಕಾನೂನಾತ್ಮಕವಾಗಿ ನೂರಕ್ಕೆ ನೂರು ಸರಿಯಾಗಿದ್ದವು ಎಂದು ಇದು ಸಾಬೀತುಪಡಿಸದೇ ಇರಬಹುದು, ಆದರೆ ಕಾಂಗ್ರೆಸ್ ನಾಯಕರಿಗೆ ಅವರ ಅಧಿಕಾರಾವಧಿಯಲ್ಲಿ ಯಾವುದೇ ವಿಶೇಷ ಅನುಮತಿಗಳನ್ನು ಶೇಷನ್ ಕೊಟ್ಟಿರಲಿಲ್ಲ ಎಂಬುದು ಸತ್ಯ.
ಕಾಂಗ್ರೆಸ್ ಸರ್ಕಾರಗಳಿಗೇ ಸೆಡ್ಡು ಹೊಡೆದಿದ್ದ ಶೇಷನ್
ಕೇವಲ ವೈಯಕ್ತಿಕ ಅಭ್ಯರ್ಥಿಗಳಷ್ಟೇ ಅಲ್ಲದೆ ಇಡೀ ರಾಜ್ಯ ಸರ್ಕಾರಗಳು ಮತ್ತು ಸಾಂವಿಧಾನಿಕ ಹುದ್ದೆಯಲ್ಲಿದ್ದವರ ವಿರುದ್ಧವೇ ಶೇಷನ್ ಚಾಟಿ ಬೀಸಿದ್ದರು. ಸುಪ್ರೀಂ ಕೋರ್ಟ್ ದಾಖಲೆಗಳ ಪ್ರಕಾರ ಅವರು ಕೈಗೊಂಡ ಪ್ರಮುಖ ಕ್ರಮಗಳು ಯಾವುವೆಂದರೆ ಹರಿಯಾಣದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಚುನಾವಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಲ್ಕಾ ಕ್ಷೇತ್ರದ ಚುನಾವಣೆಯನ್ನೇ ಮುಂದೂಡಿದ್ರು. ತ್ರಿಪುರದಲ್ಲಿ ಸರಣಿ ಚುನಾವಣೆಗಳನ್ನು ಮುಂದೂಡುವ ಮೂಲಕ, ಅಂತಿಮವಾಗಿ ಅಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಪತನಗೊಳ್ಳಲು ಶೇಷನ್ ಕಾರಣರಾಗಿದ್ದರು.
ತಮಿಳುನಾಡಿನಲ್ಲಿ ಚುನಾವಣೆ ತೀರಾ ಹತ್ತಿರವಿರುವಾಗ ಅಂದಿನ ಮುಖ್ಯಮಂತ್ರಿ ಹೊಸ ಯೋಜನೆಗಳನ್ನು ಘೋಷಿಸಿದ್ದರಿಂದ ರಾಣಿಪೇಟೆ ಚುನಾವಣೆಯನ್ನು ಮುಂದೂಡಿದ್ದರು. ಉತ್ತರಪ್ರದೇಶದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯಪಾಲ ಮೋತಿಲಾಲ್ ವೋಹ್ರಾ ಅವರ ನಡವಳಿಕೆಯನ್ನು ಶೇಷನ್ ತೀವ್ರವಾಗಿ ಆಕ್ಷೇಪಿಸಿದ್ದರು. ಚುನಾವಣಾ ವೇಳಾಪಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ವಿನಂತಿಗಳನ್ನು ಮಾಡಿದರೂ ಶೇಷನ್ ಅವುಗಳನ್ನು ಯಾವುದೇ ಮುಲಾಜಿಲ್ಲದೇ ತಿರಸ್ಕರಿಸಿದ್ದರು
ಶೇಷನ್ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸರ್ಕಾರಗಳು ಮತ್ತು ಸಾಂವಿಧಾನಿಕ ಹುದ್ದೆಯಲ್ಲಿದ್ದವರ ವಿರುದ್ಧವೇ ಚಾಟಿ ಬೀಸಿದ್ದರು. ಈ ಐತಿಹಾಸಿಕ ಘಟನೆಗಳು ಭಾರತೀಯ ಚುನಾವಣಾ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿವೆ. ಅದು ಹೇಗೆ ಎಂದರೆ ಶೇಷನ್ ರಾಜೀವ್ ಗಾಂಧಿಯವರ ನಿಕಟವರ್ತಿಯಾಗಿದ್ದರು ಆದ್ರೂ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿದರು. ರಾಜೀವ್ ಗಾಂಧಿ ಸೇರಿದಂತೆ ಅಂದಿನ ಕಾಂಗ್ರೆಸ್ ವಲಯದ ಹಿರಿಯ ನಾಯಕರೊಂದಿಗೆ ಉತ್ತಮ ವೈಯಕ್ತಿಕ ಬಾಂಧವ್ಯವಿತ್ತು. ಈ ಕಾರಣಕ್ಕಾಗಿ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡಾಗ ಅವರ ನಿಷ್ಪಕ್ಷಪಾತದ ಬಗ್ಗೆ ಹಲವರಲ್ಲಿ ಸಂಶಯಗಳಿದ್ದದ್ದು ಸಹಜವಾಗಿತ್ತು. ಆದರೆ, ಅವರು ಸಿಇಸಿ ಆಗಿ ಅಧಿಕಾರ ವಹಿಸಿಕೊಂಡ ನಂತರದ ಇತಿಹಾಸವು ಅವರನ್ನು ಕೇವಲ ಒಬ್ಬ ಕಾಂಗ್ರೆಸ್ಸಿಗ ಎಂದು ಹಣೆಪಟ್ಟಿ ಕಟ್ಟಲು ಬಿಡುವುದಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಅವರು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಸಚಿವರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ನಿರಂತರವಾಗಿ ಕಾಡಿದಜರು. ಕಾಂಗ್ರೆಸ್ ರಾಜಕಾರಣಿಗಳ ವಿರುದ್ಧವೇ ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದ ಶೇಷನ್, ಅಂತಿಮವಾಗಿ ಪ್ರಧಾನಿ ಪಿ. ವಿ. ನರಸಿಂಹರಾವ್ ಜೊತೆಗೂ ಸಂಘರ್ಷಕ್ಕೆ ಇಳಿದು
ಕಾಂಗ್ರೆಸ್ ಸರ್ಕಾರದಿಂದ ಅಧಿಕಾರ ಮೊಟಕುಗೊಳಿಸುವ ಪ್ಲಾನ್
ಶೇಷನ್ ಸರ್ಕಾರದ ಪರ ಇಲ್ಲ ಎನ್ನವುದು ಗೊತ್ತಾಯಿತೋ ಆಗ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅಧಿಕಾರ ಕಡಿತಗೊಳಿಸಲು ಬಹುಸದಸ್ಯ ಆಯೋಗದ ರಚಿಸಿತು. ಆ ಇಡೀ ಸಂಘರ್ಷದ ಕುರಿತಾದ 1995ರ ಸುಪ್ರೀಂ ಕೋರ್ಟ್ ದಾಖಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಲವು ಆಘಾತಕಾರಿ ಸತ್ಯಗಳು ಹೊರಬರುತ್ತವೆ. ಚುನಾವಣಾ ವಿಷಯಗಳಲ್ಲಿ ತಮ್ಮನ್ನು ಒಪ್ಪಿಸಲು ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ನಿಯಮಿತವಾಗಿ ಪ್ರಯತ್ನಿಸಿತ್ತು ಎಂದು ಶೇಷನ್ ಅವರೇ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದರು. ಸರ್ಕಾರದ ಈ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ತಮ್ಮ ಅಧಿಕಾರವನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯಾಗಿ ಪರಿವರ್ತಿಸಿತು ಎಂದು ಶೇಷನ್ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಕಾನೂನಾತ್ಮಕವಾಗಿ ಸ್ಥಾಪಿತ ಸತ್ಯ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳದಿದ್ದರೂ, ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತರ ನಡುವೆ ನಡೆದ ಈ ಸುದೀರ್ಘ ಕಾನೂನು ಸಮರ ಹಾಗೂ ಭಿನ್ನಾಭಿಪ್ರಾಯಗಳು ಸುಪ್ರೀಂ ಕೋರ್ಟ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಟಿ.ಎನ್.ಶೇಷನ್ 1990 ರಿಂದ 1996ರವರೆಗೆ ಅಧಿಕಾರದಲ್ಲಿದ್ದರು ಈ ಅವಧಿಯಲ್ಲಿ ಇವರ ನಿರ್ಧಾರಗಳು ಕಾಂಗ್ರೆಸ್, ಜನತಾ ದಳ ಮತ್ತು ವಿವಿಧ ಸರ್ಕಾರಗಳ ವಿರುದ್ಧ ತೆಗೆದುಕೊಂಡ ಕಠಿಣ ಸಾಂವಿಧಾನಿಕ ಕ್ರಮಗಳ ಐತಿಹಾಸಿಕ ದಾಖಲೆಗಳನ್ನು ಹೊಂದಿವೆ.
ಒಂದು ಮಾತಿದೆ.. ಅದು ಏನಂದ್ರೆ.. ಜನ್ರಿಗೆ ಒಳ್ಳೆ ಜನಪ್ರತಿನಿಧಿ ಸಿಕ್ಕಿದ್ರೆ. ಆಗ ಒಳ್ಳೆಯ ಸರ್ಕಾರ ಬರುತ್ತೆ . ಒಳ್ಳೆಯ ಸರ್ಕಾರ ಬಂದ್ರೆ ಉತ್ತಮ ಆಡಳಿತ ಸಾಧ್ಯವಾಗುತ್ತೆ ಅಂತ. ಇದುವೇ ಪ್ರಜಾ ಪ್ರಭುತ್ವದ ಮೂಲ ಆಶಯ. ಹೀಗಾಗ್ಬೇಕು ಅಂದ್ರೆ.. ಸ್ವಚ್ಛ ಮತ್ತು ಪಾರದರ್ಶಕ ಚುನಾವಣೆ ಅಗತ್ಯ. ಇದನ್ನ ಶೇಷನ್ ಚೆನ್ನಾಗಿ ಅರಿತುಕೊಂಡಿದ್ರು. ಇದ್ರಿಂದ್ಲೇ ತಮ್ಮ 6 ವರ್ಷದ ಅವಧಿಯಲ್ಲಿ ಚುನಾವಣೆಗೆ ಹೊಸ ಅರ್ಥ ತರಲು ಪ್ರಯತ್ನಿಸಿದ್ರು. ತಾವು ಅಧಿಕಾರದಲ್ಲಿ ದಿನವೂ ಯಾರಿಗೂ ತಲೆ ಬಾಗದೇ.. ದಕ್ಷ ಹಾಗೂ ಸ್ವಚ್ಛ ಆಡಳಿತ ನಡೆಸಿದ್ರು. ಆದ್ರೆ ಮುಂದೆ ಅವ್ರು ಅನುಭವಿಸಿದ್ದು ಮಾತ್ರ ಬರೀ ನೋವು.. ಬರೀ ಸೋಲು.. ರಾಜಕೀಯ ಪಕ್ಷಗಳ ಪಿತೂರಿ ಇವರನ್ನು ಸೋಲು ಹಾಗೂ ನೋವಿನಲ್ಲಿ ಮುಳುಗಿಸಿ ಬಿಡ್ತು..
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ರಾಜಕೀಯ ನಾಯಕರುಗಳ ಆಟಗಳಿಗೆ ಅಂಕುಶ ಹಾಕಬೇಕು ಅಂತ ತಾವು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಹಲವಾರು ಕಟ್ಟು ನಿಟ್ಟಿನ ನೀತಿ-ನಿಯಮಗಳನ್ನು ಜಾರಿಗೆ ತಂದರು. ಆದರೆ ವಿಪರ್ಯಾಸ ಎಂದರೆ ಮುಂದೆ ಅವರೇ ಚುನಾವಣೆಗೆ ನಿಂತು ಸೋಲು ಅನುಭವಿಸಿದರು.
