ಈ ಹಿಂದೆ ನಡೆದ ‘ಫ್ರೀಡಂ ಹಬ್ಬ’ ಜನರ ಗಮನ ಸೆಳೆದಿತ್ತು. ಅದೇ ರೀತಿಯಲ್ಲಿ ಬೆಂಗಳೂರಿನ ಜನರಿಗಾಗಿ ಊರಹಬ್ಬ ಆಯೋಜಿಸಬೇಕು ಎಂಬ ಮುಖ್ಯಮಂತ್ರಿ ಅವರ ಆಶಯದ ಹಿನ್ನೆಲೆಯಲ್ಲಿ ಈ ಉತ್ಸವ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ನಗರದ ಹಲವೆಡೆ ಕಾರ್ಯಕ್ರಮ
‘ಬೆಂಗಳೂರು ಜಾತ್ರೆ’ಯನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಮೆಟ್ರೋ, ಪೊಲೀಸ್ ಇಲಾಖೆ, ಬೆಸ್ಕಾಂ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಉತ್ಸವದಲ್ಲಿ ಭಾಗಿಯಾಗಲಿವೆ.
ಐಟಿ ಕಂಪನಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಗೂ ಕಾರ್ಯಕ್ರಮ ಆಯೋಜಿಸುವಂತೆ ಆಹ್ವಾನ ನೀಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಿಗೂ ಉತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದ್ದು, ತಮ್ಮದೇ ಆದ ಕಾರ್ಯಕ್ರಮಗಳನ್ನು ಆಯೋಜಿಸಲು ಮನವಿ ಮಾಡಲಾಗಿದೆ.
ಬೆಂಗಳೂರು ಜಾತ್ರೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ನೋಂದಣಿ ಕಡ್ಡಾಯವಾಗಿರಲಿದೆ. ಸಣ್ಣ ಪ್ರಮಾಣದ ಕಾರ್ಯಕ್ರಮಗಳಿಗೆ ನೋಂದಣಿ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಕನಿಷ್ಠ 15 ದಿನಗಳ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
ವಾರಾಂತ್ಯದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯಿದ್ದು, ಜಾತ್ರೆಯ ಕೊನೆಯ ದಿನ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿದೆ. ಕೊನೆಯ ದಿನದ ಕಾರ್ಯಕ್ರಮದ ಸ್ಥಳವನ್ನು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಸರ್ಕಾರದ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಖಾಸಗಿ ಕಂಪನಿಗಳು ಹಾಗೂ ಸಂಸ್ಥೆಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸರ್ಕಾರ ಮನವಿ ಮಾಡಿದೆ. ಅಂತಹ ಕಾರ್ಯಕ್ರಮಗಳಿಗೆ ಶುಲ್ಕ ವಿಧಿಸುವ ವಿಚಾರವನ್ನು ಆಯೋಜಕರೇ ನಿರ್ಧರಿಸಬಹುದು ಎಂದು ಸಚಿವರು ತಿಳಿಸಿದರು.
ಬೆಂಗಳೂರು ನಗರದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು ಹಾಗೂ ನಗರದ ವಿವಿಧ ರಸ್ತೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಜಾನಪದ ಕಲೆಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ‘ನಮ್ಮ ರಸ್ತೆ, ನಮ್ಮ ಬಡಾವಣೆ, ನಮ್ಮ ಸಂಸ್ಥೆ, ನಮ್ಮ ಕಲೆ’ ಎಂಬ ಪರಿಕಲ್ಪನೆಯಡಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ.
ಜಿಬಿಎ, ಬಿಡಿಎ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಉತ್ಸವಕ್ಕೆ ಆರ್ಥಿಕ ಸಹಕಾರ ನೀಡಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ₹5 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ತಿಳಿಸಿದರು.
₹15ರಿಂದ ₹20 ಕೋಟಿ ವೆಚ್ಚದಲ್ಲಿ ಬೆಂಗಳೂರು ಜಾತ್ರೆ
‘ಬೆಂಗಳೂರು ಜಾತ್ರೆ’ಯನ್ನು ಸುಮಾರು ₹15ರಿಂದ ₹20 ಕೋಟಿ ವೆಚ್ಚದಲ್ಲಿ ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಖಾಸಗಿ ಸಂಸ್ಥೆಗಳು ಬೆಂಗಳೂರು ಹಬ್ಬವನ್ನು ಆಯೋಜಿಸುತ್ತಿದ್ದವು. ಇದೀಗ ರಾಜ್ಯ ಸರ್ಕಾರವೇ ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜಿಸಲು ಮುಂದಾಗಿದೆ.
ಬೆಂಗಳೂರು ನಗರದ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಉತ್ಸವದ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಬೆಂಗಳೂರಿಗೆ ಆಕರ್ಷಿಸುವ ಉದ್ದೇಶವೂ ಇದೆ. ಇದರಿಂದ ನಗರದ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.



