ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಒಂದು ಬಿಗ್ ರಿಲೀಫ್ ಕೊಟ್ಟಿದೆ. ಈ ವೀಕೆಂಡ್ ಅಂದರೆ ಅಕ್ಟೋಬರ್ 3, ಶನಿವಾರದಂದು ರಾತ್ರಿ ತಡವಾಗಿ ಪ್ರಯಾಣಿಸುವ ಜನರಿಗಾಗಿ ಮೆಟ್ರೋ ರೈಲು ಸಂಚಾರದ ಸಮಯವನ್ನು ಮಧ್ಯರಾತ್ರಿಯವರೆಗೂ ವಿಸ್ತರಿಸಲಾಗಿದೆ.  

ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದೆಡೆ ವೈಟ್‌ಫೀಲ್ಡ್‌ನ KTPO ಕನ್ವೆನ್ಷನ್ ಸೆಂಟರ್‌ನಲ್ಲಿ ಇವತ್ತು ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಲೈವ್ ಕಾನ್ಸರ್ಟ್ ನಡೆಯುತ್ತಿದೆ. ಈ ಶೋ ಮುಗಿದು ತಡರಾತ್ರಿ ಮನೆಗೆ ತೆರಳುವ ಸಾವಿರಾರು ಅಭಿಮಾನಿಗಳಿಗೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸುರಕ್ಷಿತ ಪ್ರಯಾಣ ಕಲ್ಪಿಸುವುದು ಬಿಎಂಆರ್‌ಸಿಎಲ್ ಮುಖ್ಯ ಉದ್ದೇಶ. ಇದರ ಜೊತೆಗೆ, ಸಾಲು ಸಾಲು ಹಬ್ಬಗಳು ಆರಂಭವಾಗುತ್ತಿರುವುದರಿಂದ ಮಾರುಕಟ್ಟೆಗಳು ಹಾಗೂ ಮೆಜೆಸ್ಟಿಕ್ ಭಾಗದಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಲಿದೆ. ಇದನ್ನು ಸರಾಗಗೊಳಿಸಲು ಈ ವಿಶೇಷ ಸೇವೆ ಒದಗಿಸಲಾಗಿದೆ.

ಕೊನೆಯ ರೈಲುಗಳ ಸಂಚಾರ ಸಮಯ ಹೀಗಿದೆ

ನೇರಳೆ ಮಾರ್ಗ : ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೊನೆಯ ಮೆಟ್ರೋ ಮಧ್ಯರಾತ್ರಿ 12:00 ಗಂಟೆಗೆ ಹೊರಟರೆ, ಚಲ್ಲಘಟ್ಟದಿಂದ ತಡರಾತ್ರಿ 12:20ಕ್ಕೆ ಹೊರಡಲಿದೆ.

ಹಸಿರು ಮಾರ್ಗ : ಮಾದಾವರ ನಿಲ್ದಾಣದಿಂದ ತಡರಾತ್ರಿ 12:15ಕ್ಕೆ ಹಾಗೂ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ತಡರಾತ್ರಿ 12:20ಕ್ಕೆ ಕೊನೆಯ ರೈಲು ಲಭ್ಯವಿರಲಿದೆ.

ಹಳದಿ ಮಾರ್ಗ : ಆರ್.ವಿ. ರೋಡ್‌ನಿಂದ ಕೊನೆಯ ಮೆಟ್ರೋ ತಡರಾತ್ರಿ 1:15ಕ್ಕೆ ಹಾಗೂ ಬೊಮ್ಮಸಂದ್ರದಿಂದ ರಾತ್ರಿ 11:55ಕ್ಕೆ ಹೊರಡಲಿದೆ.

ಮೆಜೆಸ್ಟಿಕ್ ಇಂಟರ್‌ಚೇಂಜ್: ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕೂ ದಿಕ್ಕುಗಳಿಗೆ ಸಂಪರ್ಕಿಸುವ ಕೊನೆಯ ಮೆಟ್ರೋಗಳು ತಡರಾತ್ರಿ 12:55ಕ್ಕೆ ಸಂಚರಿಸಲಿವೆ.

ಅಂದರೆ ಇಂದು, ಅಕ್ಟೋಬರ್ 3 ರ ಶನಿವಾರ ತಡರಾತ್ರಿಯವರೆಗೆ ಮಾತ್ರ ಈ ವಿಶೇಷ ಸಮಯ ಲಭ್ಯವಿರುತ್ತದೆ. ನಾಳೆಯಿಂದ ಅಂದರೆ ಅಕ್ಟೋಬರ್ 4, ಭಾನುವಾರ ಎಂದಿನಂತೆ ಮೆಟ್ರೋದ ಸಾಮಾನ್ಯ ವೇಳಾಪಟ್ಟಿ ಮುಂದುವರಿಯಲಿದೆ.

ಇನ್ನು ರಾತ್ರಿ ವೇಳೆಯಲ್ಲಿ ಟಿಕೆಟ್ ಕೌಂಟರ್‌ಗಳ ಬಳಿ ಉದ್ದದ ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು ಪ್ರಯಾಣಿಕರು 'ನಮ್ಮ ಮೆಟ್ರೋ' ಆಪ್ ಮೂಲಕ QR ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವಂತೆ BMRCL ಮನವಿ ಮಾಡಿದೆ.