ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ಭಾರತ್ ಗ್ಯಾಸ್ ಸಂಸ್ಥೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡಿಸಲು ಕೈಯಲ್ಲಿ ಪೂರ್ತಿ ಹಣವಿಲ್ಲದಿದ್ದರೂ ಚಿಂತೆ ಮಾಡುವ ಅಗತ್ಯವಿಲ್ಲ. ಗ್ರಾಹಕರ ಅನುಕೂಲಕ್ಕಾಗಿ ಕಂಪನಿಯು 'ಬಡ್ಡಿರಹಿತ ಮೈಕ್ರೋ-ಸಾಲ' ಅಂದರೆ ಕಂತುಗಳ ಸೌಲಭ್ಯವನ್ನು ಪರಿಚಯಿಸಿದೆ.
ಮಾರುಕಟ್ಟೆಯಲ್ಲಿ ಸದ್ಯ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರ ಸುಮಾರು 950 ಗಡಿ ದಾಟಿದೆ. ಒಮ್ಮೆಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಕೊಟ್ಟು ಸಿಲಿಂಡರ್ ಪಡೆಯಲು ಕಷ್ಟಪಡುವ ಗ್ರಾಹಕರು, ಈ 'ಈಗ ಖರೀದಿಸಿ, ಆಮೇಲೆ ಪಾವತಿಸಿ' ಆಫರ್ ಬಳಸಿ ಸುಲಭವಾಗಿ ಸಿಲಿಂಡರ್ ಮನೆಗೆ ತರಿಸಿಕೊಳ್ಳಬಹುದು.
ಹಾಗಾದ್ರೆ ಏನೇನಿದೆ ಈ ಹೊಸ ಯೋಜನೆಯಲ್ಲಿ ಅಂದ್ರೆ..?
ಭಾರತ್ ಗ್ಯಾಸ್ ಗ್ರಾಹಕರು ಸಿಲಿಂಡರ್ ಬುಕಿಂಗ್ ವೇಳೆ ಗರಿಷ್ಠ 600 ರವರೆಗೆ ಮೈಕ್ರೋ ಸಾಲವನ್ನು ಪಡೆಯಲು ಅವಕಾಶವಿದೆ.
ಪಡೆದ ಈ ಹಣವನ್ನು ಪ್ರತಿ ವಾರಕ್ಕೆ 100 ರಂತೆ ಒಟ್ಟು 6 ವಾರಗಳಲ್ಲಿ ಮರುಪಾವತಿ ಮಾಡಬಹುದು.
ಈ ಸೌಲಭ್ಯಕ್ಕೆ ಯಾವುದೇ ರೀತಿಯ ಹೆಚ್ಚುವರಿ ಬಡ್ಡಿ ಇರುವುದಿಲ್ಲ. ಭಾರತ್ ಗ್ಯಾಸ್ ಸಂಸ್ಥೆಯು 'ವನ್ಗೋ ಫಿನ್ಟೆಕ್' ಸಂಸ್ಥೆಯ ಜೊತೆ ಕೈಜೋಡಿಸಿ ಈ ನೂತನ ಸೇವೆಯನ್ನು ನೀಡುತ್ತಿದೆ.
ಈ ಮುಖ್ಯ ವಿಷಯಗಳೂ ಗಮನದಲ್ಲಿರಲಿ
ಸಿಲಿಂಡರ್ ಸಬ್ಸಿಡಿ ಪಡೆದುಕೊಳ್ಳಲು ಗ್ರಾಹಕರು ಸೆಪ್ಟೆಂಬರ್ 30ರ ಒಳಗೆ ಬಯೋಮೆಟ್ರಿಕ್ ಆಧಾರ್ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅಕ್ಟೋಬರ್ 1 ರಿಂದ ವಾಣಿಜ್ಯ ದರ ತೆರಬೇಕಾಗಬಹುದು. ಇದರ ಜೊತೆಗೆ, ಸಿಲಿಂಡರ್ ಮರುಬುಕಿಂಗ್ ಮಾಡಲು ಇದ್ದ ಕಡ್ಡಾಯ ಕಾಯುವಿಕೆ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಲಾಗಿದೆ. ಹಣದ ತುರ್ತು ಅಭಾವವಿದ್ದಾಗ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಈ ವಾರಾಂತ್ಯದ ಕಂತಿನ ವ್ಯವಸ್ಥೆ ದೊಡ್ಡ ನೆರವಾಗಲಿದೆ.




