ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮತಗಳ್ಳತನದ ಆರೋಪಗಳನ್ನ ಮಾಡುತ್ತಲೇ ಇವೆ. ಇದಕ್ಕೆ ಬಿಜೆಪಿ ಉತ್ತರ ಕೊಡುತ್ತಲೇ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಆರೋಪ ಕುರಿತು ಚರ್ಚಿಸಲು ಸಂಸತ್ ವಿಶೇಷ ಅಧಿವೇಶನ ನಡೆಸಲು ತಾವು ಸಿದ್ಧರಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳಿಗೆ ಇದರ ಬಗ್ಗೆ ಚರ್ಚೆ ನಡೆಸಲು ಆಸಕ್ತಿಯಿಲ್ಲ ಎಂದು ಅವರು ಹೇಳಿದ್ದಾರೆ.
.
ಈ ಬಗ್ಗೆ ಪ್ರಸ್ತಾಪ ಮಾಡಿರುವ ಅಮಿತ್ ಶಾ…ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಿಗೆ ನಾನು ಸವಾಲು ಹಾಕುತ್ತೇನೆ. ಸಂಸತ್ತಿನ ಒಳಗೆ ಪ್ರತಿಯೊಂದು ಆರೋಪದ ಬಗ್ಗೆಯೂ ಚರ್ಚಿಸಲು ಬಿಜೆಪಿ ಸಿದ್ಧವಿದೆ. ಆದರೆ, ಅವರು ಚರ್ಚೆಗೆ ಸಿದ್ಧರಿಲ್ಲ ಎಂದು ಅವರು ಹೇಳಿದ್ದಾರೆ. ಲಖನೌನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದರು. ಇಲ್ಲಿ ನಾವು ಮುಚ್ಚಿಡುವಂಥದ್ದು ಏನೂ ಇಲ್ಲ. ಸಂಸತ್ ವಿಶೇಷ ಅಧಿವೇಶನ ಕರೆಯೋಣ. ಆದರೆ ಅಲ್ಲಿ ಮಾತನಾಡುವ ಉದ್ದೇಶ ಅವರಿಗಿಲ್ಲ. ಸಂಸತ್ತಿನ ಕಲಾಪ ನಡೆಯಲು ಅವರು ಬಿಡುವುದಿಲ್ಲ. ಬದಲಾಗಿ ಗದ್ದಲ ಸೃಷ್ಟಿಸುತ್ತಾರೆ ಎಂದು ಅಮಿತ್ ಶಾ ಅರೋಪ ಮಾಡಿದರು.

ಇನ್ನು ಹರಿಯಾಣ, ಮಹಾರಾಷ್ಟ್ರ, ಬಿಹಾರ, ದೆಹಲಿ, ಪುದುಚೇರಿ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಗೆಲುವುಗಳನ್ನು ಉಲ್ಲೇಖಿಸಿದ ಅಮಿತ್ ಶಾ…ಪಶ್ಚಿಮ ಬಂಗಾಳದ ಬೆಳವಣಿಗೆಗಳ ಬಳಿಕ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ. ಸಹಜವಾಗಿಯೇ, ಪಂದ್ಯದಲ್ಲಿ ಸೋತ ತಂಡ ಹೆಚ್ಚು ಅಭ್ಯಾಸ ಮಾಡಬೇಕು. ಅದನ್ನೇ ನಿರೀಕ್ಷಿಸಲಾಗುತ್ತದೆ ಅಲ್ಲವೇ ಎಂದು ಪ್ರಶ್ನಿಸಿದರು. ಆದರೆ, ಸೋಲನ್ನು ಒಪ್ಪಿಕೊಳ್ಳುವ ಬದಲು ಅಂಪೈರ್ ಮೋಸ ಮಾಡಿದ್ದಾರೆ, ಮತಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲು ಆರಂಭಿಸಿದರು ಎಂದು ಟೀಕಿಸಿದರು.