ಸಿಬಿಎಸ್‌ಇ 10ನೇ ತರಗತಿಯ ಪಠ್ಯಕ್ರಮದಲ್ಲಿ ಕೇಂದ್ರ ಮಂಡಳಿಯು ಮಹತ್ವದ ಬದಲಾವಣೆಗಳನ್ನು ತಂದಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ, ವಿದ್ಯಾರ್ಥಿಗಳ ಮೇಲಿನ ಓದಿನ ಹೊರೆಯನ್ನು ತಗ್ಗಿಸಲು ಮತ್ತು ಇಂದಿನ ಉದ್ಯೋಗ ಮಾರುಕಟ್ಟೆಗೆ ಬೇಕಾಗುವ ಕೌಶಲ್ಯಗಳನ್ನು ಬೆಳೆಸಲು ಈ ಹೊಸ ಹೆಜ್ಜೆ ಇಡಲಾಗಿದೆ.

ಈ ಹೊಸ ನಿಯಮವು ಪ್ರಸ್ತುತ (2026-27) 9ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಅನ್ವಯಿಸಲಿದ್ದು, ಅವರು 2027-28ರಲ್ಲಿ ಬರೆಯಲಿರುವ 10ನೇ ತರಗತಿ ಬೋರ್ಡ್ ಪರೀಕ್ಷೆಯಿಂದ ಜಾರಿಗೆ ಬರಲಿದೆ.

ಮುಖ್ಯ ಬದಲಾವಣೆಗಳು ಮತ್ತು ಆಯ್ಕೆಗಳು

ಪರಿಸರ ಶಿಕ್ಷಣ ರದ್ದು : 10ನೇ ತರಗತಿಯ ಮುಖ್ಯ ಪಠ್ಯಕ್ರಮದಿಂದ 'ಪರಿಸರ ಶಿಕ್ಷಣ' ವಿಷಯವನ್ನು ತೆರವುಗೊಳಿಸಲಾಗಿದೆ.

ವೃತ್ತಿಪರ ಶಿಕ್ಷಣ ಕಡ್ಡಾಯ: ಇದರ ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವೃತ್ತಿಪರ ಶಿಕ್ಷಣವನ್ನು ಕಲಿಯುವುದು ಕಡ್ಡಾಯ. ಇದರಲ್ಲಿ ಎರಡು ಮುಖ್ಯ ದಾರಿಗಳಿವೆ:

ಕೌಶಲ್ ವಿಕಾಸ್: ಇದನ್ನು ಆಯ್ಕೆ ಮಾಡಿಕೊಂಡರೆ ಶಾಲೆಗಳ ಹಂತದಲ್ಲೇ ಆಂತರಿಕ ಮೌಲ್ಯಮಾಪನ ಇರುತ್ತದೆ. ಬೋರ್ಡ್ ಪರೀಕ್ಷೆ ಇರುವುದಿಲ್ಲ. ಕನಿಷ್ಠ 33% ಅಂಕ ಪಡೆದರೆ ಶಾಲೆಯಿಂದಲೇ ಸರ್ಟಿಫಿಕೇಟ್ ಸಿಗುತ್ತದೆ.

22 ಕೌಶಲ್ಯ ಆಧಾರಿತ ವಿಷಯಗಳು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಸೈನ್ಸ್, ಐಟಿ, ಬ್ಯಾಂಕಿಂಗ್, ಹೆಲ್ತ್‌ಕೇರ್ ಮುಂತಾದ 22 ಪ್ರಮುಖ ವಿಷಯಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಆದರೆ ಇದಕ್ಕೆ ಬೋರ್ಡ್ ಪರೀಕ್ಷೆ ಕಡ್ಡಾಯ. ಉತ್ತೀರ್ಣರಾದವರಿಗೆ ಅಧಿಕೃತ NSQF ಪ್ರಮಾಣಪತ್ರ ನೀಡಲಾಗುತ್ತದೆ.

ಪರೀಕ್ಷೆ ಮತ್ತು ಅಂಕಗಳ ನಿಯಮ

ವಿದ್ಯಾರ್ಥಿಗಳು ಒಟ್ಟು 9 ವಿಷಯಗಳನ್ನು ಅಧ್ಯಯನ ಮಾಡಲಿದ್ದಾರೆ. ಅದರಲ್ಲಿ 5 ವಿಷಯಗಳಿಗೆ (3 ಭಾಷೆಗಳು, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಬೋರ್ಡ್ ಪರೀಕ್ಷೆ ಇರಲಿದೆ. ಕಲಾ ಶಿಕ್ಷಣ ಹಾಗೂ ದೈಹಿಕ ಶಿಕ್ಷಣಕ್ಕೆ ಶಾಲಾ ಮಟ್ಟದಲ್ಲೇ ಗ್ರೇಡ್‌ಗಳನ್ನು ನೀಡಲಾಗುತ್ತದೆ. ಬೋರ್ಡ್ ಪರೀಕ್ಷೆ ಬರೆಯುವ ವಿಷಯಗಳಲ್ಲಿ ಉತ್ತೀರ್ಣರಾಗಲು ಆಂತರಿಕ ಮೌಲ್ಯಮಾಪನ ಮತ್ತು ಬೋರ್ಡ್ ಪರೀಕ್ಷೆ ಎರಡೂ ಸೇರಿ ಒಟ್ಟು ಕನಿಷ್ಠ 33% ಅಂಕ ಗಳಿಸಬೇಕು (ಉದಾಹರಣೆಗೆ: ಬೋರ್ಡ್ ಪರೀಕ್ಷೆಯಲ್ಲಿ 80ಕ್ಕೆ 24 ಹಾಗೂ ಆಂತರಿಕ ಮೌಲ್ಯಮಾಪನದಲ್ಲಿ 20ಕ್ಕೆ 9 ಅಂಕಗಳು).

ವಿಷಯ ಬದಲಾವಣೆ ಸೌಲಭ್ಯ
ಒಂದು ವೇಳೆ ವಿದ್ಯಾರ್ಥಿಯು ಗಣಿತ, ವಿಜ್ಞಾನ ಅಥವಾ ಸಮಾಜ ವಿಜ್ಞಾನದಲ್ಲಿ ಅನುತ್ತೀರ್ಣರಾದರೆ, ಅವರು ಆಯ್ಕೆ ಮಾಡಿಕೊಂಡ 22 ಕೌಶಲ್ಯ ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಆ ಕೌಶಲ್ಯ ವಿಷಯದ ಅಂಕವನ್ನು ಅನುತ್ತೀರ್ಣಗೊಂಡ ವಿಷಯದ ಜಾಗದಲ್ಲಿ ಬದಲಾಯಿಸಿಕೊಳ್ಳಬಹುದು. ಈ ಸೌಲಭ್ಯ 'ಕೌಶಲ್ ವಿಕಾಸ್' ಆಯ್ಕೆ ಮಾಡಿದವರಿಗೆ ಸಿಗುವುದಿಲ್ಲ.

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ 
ವಿಶೇಷ ಅಗತ್ಯವುಳ್ಳ ಮಕ್ಕಳು ಒಂದು ಕಡ್ಡಾಯ ಭಾಷಾ ಪರೀಕ್ಷೆಯೊಂದಿಗೆ, ಮಂಡಳಿ ಅನುಮೋದಿಸಿದ ಪಟ್ಟಿಯಿಂದ ತಮ್ಮಿಷ್ಟದ 4 ವಿಷಯಗಳನ್ನು (ಗಣಿತ, ವಿಜ್ಞಾನ, ಕೌಶಲ್ಯ ವಿಷಯಗಳು ಇತ್ಯಾದಿ) ಆಯ್ಕೆ ಮಾಡಿಕೊಳ್ಳಲು ವಿಶೇಷ ಸಡಿಲಿಕೆ ನೀಡಲಾಗಿದೆ.

ವಿಷಯಗಳ ಆಯ್ಕೆಯನ್ನು ಅಂತಿಮಗೊಳಿಸುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಯ ಮಂಡಳಿ ನೀಡಿರುವ ಅಧಿಕೃತ ಸಿಬಿಎಸ್‌ಇ ಸುತ್ತೋಲೆಯನ್ನು ಒಮ್ಮೆ ವಿವರವಾಗಿ ಪರಿಶೀಲಿಸುವುದು ಒಳ್ಳೆಯದು.