ದೆಹಲಿಯಲ್ಲಿ ನಿನ್ನೆಯಿಂದ(ಭಾನುವಾರ) ವಾಯುಮಾಲಿನ್ಯ ನಿಯಂತ್ರಣದ ಚಳಿಗಾಲದ ಕಾರ್ಯಯೋಜನೆ ಜಾರಿಗೆ ಬಂದಿದೆ. ಅದರಂತೆ ನಿಯಮ ಉಲ್ಲಂಘಿಸಿದವರಿಂದ ಮೊದಲ ದಿನವೇ ಒಟ್ಟು 68.4 ಲಕ್ಷ ರೂಪಾಯಿ ದಂಡ ಹಾಗೂ ಪರಿಸರ ಪರಿಹಾರ ಮೊತ್ತವನ್ನು ವಸೂಲಿ ಮಾಡಲಾಗಿದೆ. ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಅಧಿಕಾರಿಗಳು ಸುಮಾರು 15,000 ವಾಹನಗಳನ್ನು ತಪಾಸಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದ 1,539 ವಾಹನಗಳನ್ನು ಗಡಿಯಿಂದಲೇ ವಾಪಸ್ ಕೂಡಾ ಕಳುಹಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದೆ ಸಂಚರಿಸುತ್ತಿದ್ದ 566 ವಾಹನಗಳಿಗೆ ಚಲನ್ ನೀಡಲಾಗಿದ್ದು, ಒಟ್ಟು 56.6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರಲ್ಲಿ ಸಂಚಾರ ಪೊಲೀಸರು 493 ಚಲನ್‌ಗಳಿಂದ 49.3 ಲಕ್ಷ ರೂ. ಹಾಗೂ ಸಾರಿಗೆ ಇಲಾಖೆ 73 ಚಲನ್‌ಗಳಿಂದ 7.3 ಲಕ್ಷ ರೂ. ದಂಡ ವಸೂಲಿ ಮಾಡಿದೆ.

ದೆಹಲಿ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ದೆಹಲಿಯ ಹೊರಗಿನ ಬಿಎಸ್-6 ಪೂರ್ವದ ವಾಹನಗಳ ಪ್ರವೇಶ ನಿರ್ಬಂಧದಡಿ 14,930 ವಾಹನಗಳನ್ನು ತಪಾಸಣೆ ನಡೆಸಿವೆ. ಈ ಪೈಕಿ ಶೇಕಡ 10.31ರಷ್ಟು ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಒಟ್ಟು 127 ಚಲನ್‌ಗಳನ್ನು ನೀಡಲಾಗಿದ್ದು, 62 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. ವಾಪಸ್ ಕಳುಹಿಸಲಾದ ವಾಹನಗಳಲ್ಲಿ 140 ಲಘು ಮೋಟಾರು ವಾಹನಗಳು, 54 ಲಘು ವಾಣಿಜ್ಯ ವಾಹನಗಳು, 95 ಭಾರಿ ಸರಕು ಸಾಗಣೆ ವಾಹನಗಳು ಮತ್ತು 34 ಬಸ್‌ಗಳು ಸೇರಿವೆ. ದ್ವಿಚಕ್ರ, ತ್ರಿಚಕ್ರ ಸೇರಿದಂತೆ ಇತರ 1,423 ವಾಹನಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 789 ವಾಹನಗಳನ್ನು ವಾಪಸ್ ಕಳುಹಿಸಿ, 38 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಮತ್ತೊಂದೆಡೆ, ದೆಹಲಿಯನ್ನು ಗಮ್ಯಸ್ಥಾನವನ್ನಾಗಿ ಹೊಂದಿರದ 7,279 ವಾಹನಗಳನ್ನು ತಪಾಸಣೆ ನಡೆಸಿ 314 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಆದರೆ, ಸಿಎನ್‌ಜಿ, ವಿದ್ಯುತ್ ಚಾಲಿತ (EV) ಮತ್ತು ಅಗತ್ಯ ಸೇವೆಗಳ 740 ವಾಹನಗಳಿಗೆ ನಿಯಮದಿಂದ ವಿನಾಯಿತಿ ಇದ್ದಿದ್ದರಿಂದ ಮುಕ್ತ ಪ್ರವೇಶ ನೀಡಲಾಗಿದೆ. ಮತ್ತೊಂದೆಡೆ, ದೆಹಲಿಯನ್ನು ಗಮ್ಯಸ್ಥಾನವನ್ನಾಗಿ ಹೊಂದಿರದ 7,279 ವಾಹನಗಳನ್ನು ತಪಾಸಣೆ ನಡೆಸಿ 314 ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಆದರೆ, ಸಿಎನ್‌ಜಿ, ವಿದ್ಯುತ್ ಚಾಲಿತ (EV) ಮತ್ತು ಅಗತ್ಯ ಸೇವೆಗಳ 740 ವಾಹನಗಳಿಗೆ ನಿಯಮದಿಂದ ವಿನಾಯಿತಿ ಇದ್ದಿದ್ದರಿಂದ ಮುಕ್ತ ಪ್ರವೇಶ ನೀಡಲಾಗಿದೆ.

ಇನ್ನು, ತಪಾಸಣೆ ನಡೆಸಿದ ಸುಮಾರು 209 ಸಣ್ಣ ನಿರ್ಮಾಣ ಸ್ಥಳಗಳ ಪೈಕಿ 17 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. 15 ಕಾಮಗಾರಿ ಸ್ಥಗಿತಗೊಳಿಸುವ ಆದೇಶ ಹಾಗೂ 15 ಕಾರಣ ಕೇಳುವ ನೋಟಿಸ್ಗಳನ್ನು ನೀಡಲಾಗಿದ್ದು, 5.8 ಲಕ್ಷ ರೂ. ಪರಿಹಾರ ವಿಧಿಸಲಾಗಿದೆ. ವಿನಾಯಿತಿ ಪಡೆದ ಮೂಲಸೌಕರ್ಯ ಯೋಜನೆಗಳಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ. ವಾಹನಗಳ ಪ್ರವೇಶ ನಿರ್ಬಂಧ, ಪಿಯುಸಿ ಪ್ರಮಾಣಪತ್ರದ ಕಡ್ಡಾಯತೆ ಮತ್ತು ನಿರ್ಮಾಣ ಸ್ಥಳಗಳ ಧೂಳು ನಿಯಂತ್ರಣ ನಿಯಮಗಳ ಪಾಲನೆಯ ಮೇಲೆ ಜಾರಿ ತಂಡಗಳು ನಿಗಾ ಇರಿಸಿವೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

ಅಧಿಕೃತ ವಾಹನ ನಿಲುಗಡೆ ಸ್ಥಳಗಳ ಶುಲ್ಕವನ್ನು ಫೆಬ್ರವರಿ 28ರವರೆಗೆ ದುಪ್ಪಟ್ಟು ಮಾಡಲಾಗಿದೆ. ಅಲ್ಲದೆ, ನವೆಂಬರ್ 1ರಿಂದ ಜನವರಿ 31ರವರೆಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು. ಅಗತ್ಯ ಮತ್ತು ತುರ್ತು ಸೇವೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ.